Advertisement

ಕುಕ್ಕೆಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಭೇಟಿ

01:53 AM Nov 12, 2019 | Sriram |

ಸುಬ್ರಹ್ಮಣ್ಯ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌
ಜನ್ಮ ದಿನದ ಆಚರಣೆ ಸಲುವಾಗಿ ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಸಾವಿತ್ರಿ ಜತೆಗಿದ್ದರು. ಅರ್ಚಕ ರಾಜೇಶ್‌ ಅವರು ಸಚಿವರನ್ನು ಶಾಲು ಹೊದೆಸಿ ಪ್ರಸಾದ ನೀಡಿ ಹರಸಿದರು.

Advertisement

ಸಚಿವರು ಆರಂಭದಲ್ಲಿ ಆದಿಶೇಷ ವಸತಿಗೃಹದಲ್ಲಿ ತುಸು ಕಾಲ ವಿಶ್ರಾಂತಿ ಪಡೆದು ಬಳಿಕ ದೇವಸ್ಥಾನಕ್ಕೆ ತೆರಳಿದರು. ಗೋಪುರದ ಮುಂದೆ ನೂತನ ಬ್ರಹ್ಮರಥಕ್ಕೆ ನಡೆಯುತ್ತಿರುವ ಬ್ರಹ್ಮರಥದ ವೈದಿಕ ಕಾರ್ಯಕ್ರಮದಲ್ಲಿ ಕೆಲ ಹೊತ್ತು ಪಾಲ್ಗೊಂಡರಲ್ಲದೆ ರಥದ ವೀಕ್ಷಣೆ ನಡೆಸಿದರು. ಬಳಿಕ ನರಸಿಂಹ ಗುಡಿ ಹಾಗೂ ಹೊಸಳಿಗಮ್ಮ ದೇವರ ಗುಡಿಗಳಿಗೂ ತೆರಳಿ ಪ್ರಸಾದ ಸ್ವೀಕರಿಸಿದರು. ದೇವಸ್ಥಾನದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ಸೇವಿಸಿದರು.

ಸಾಮಾನ್ಯನಂತೆ ಬಂದ ಸಚಿವ!
ಖಾಸಗಿಯಾಗಿ ಬಂದಿರುವುದರಿಂದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಲು ನಿರಾಕರಿಸಿದರು.ಸಚಿವರ ಆಗಮನದ ವೇಳೆ ಯಾವುದೇ ಅಂಗರಕ್ಷಕ ಪಡೆ ಇರಲಿಲ್ಲ. ಸ್ಥಳೀಯ ಪೊಲೀಸರಿಗೂ ಅವರ ಆಗಮನದ ಕುರಿತು ಮಾಹಿತಿ ಇರಲಿಲ್ಲ. ಧರ್ಮಸ್ಥಳಕ್ಕೆ ಆಗಮಿಸಿದ ಸಚಿವರು ಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದಾರೆ.ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಸುಬ್ರಹ್ಮಣ್ಯ ಭಟ್‌ ಮಾನಾಡು, ಸ್ಥಳೀಯ ಮುಖಂಡ ಶ್ರೀಕುಮಾರ ಬಿಲದ್ವಾರ, ದೇಗುಲದ ಶಿಷ್ಟಾಚಾರ ಅಧಿಕಾರಿ ಗೋಪಿನಾಥ ನಂಬೀಶ, ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್‌, ರಥ ದಾನಿ ಅಜಿತ್‌ ಶೆಟ್ಟಿ ಕಡಬ ಉಪಸ್ಥಿತರಿದ್ದರು.

ಉದಯವಾಣಿಯ “ನಮ್ಮ ಶಾಲೆ ನಮ್ಮ ಹೆಮ್ಮೆ’
ಸರಣಿಗೆ ಸಚಿವರ ಮೆಚ್ಚುಗೆ
ಈ ಸಂದರ್ಭ ಸಚಿವರು ಉದಯವಾಣಿಯಲ್ಲಿ ಪ್ರಕಟವಾಗುತ್ತಿರುವ “ನಮ್ಮ ಶಾಲೆ ನಮ್ಮ ಹೆಮ್ಮೆ’ ಲೇಖನ ಮಾಲೆಯನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಶಾಲೆಗಳ ಉಳಿವಿನಲ್ಲಿ “ಉದಯವಾಣಿ’ ತೋರುತ್ತಿರುವ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದರು. ಸರಕಾರಿ ಕನ್ನಡ ಶಾಲೆಗಳಲ್ಲಿ ಆಟದ ಮೈದಾನಕ್ಕೆ ಸಂಬಂಧಿಸಿ ಜಾಗದ ಸಮಸ್ಯೆಗಳಿವೆ. ಅದನ್ನು ನಿವಾರಿಸಿ ಎಲ್ಲ ಸರಕಾರಿ ಶಾಲೆಗಳಿಗೆ ಮೈದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಶತಮಾನ ಕಂಡ ಶಾಲೆಯ ಕುರಿತು ಪ್ರಕಟಗೊಂಡ ಲೇಖನವಿರುವ ಪತ್ರಿಕೆಯನ್ನು ತಮ್ಮ ಬಳಿ ಇರಿಸಿಕೊಂಡರು. ಪತ್ನಿ ಸಾವಿತ್ರಿ ಅವರೂ ಲೇಖನಮಾಲೆ ಕುರಿತು ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next