Advertisement

ಶಾಲೆ ಮಕ್ಕಳ ಪಠ್ಯ ಇಳಿಕೆ ಸಾಧ್ಯತೆ ; ಶೈಕ್ಷಣಿಕ ವರ್ಷ ವಿಳಂಬ ಕಾರಣ; ಶಿಕ್ಷಣ ಸಚಿವರ ಸೂಚನೆ

08:28 AM May 09, 2020 | Hari Prasad |

ಬೆಂಗಳೂರು: ಕೋವಿಡ್ ವೈರಸ್ ಕಾರಣ ನಿಗದಿತ ದಿನಾಂಕಕ್ಕೆ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಾಧ್ಯತೆಗಳು ಕಡಿಮೆ.

Advertisement

ಹೀಗಾಗಿ ಅದಕ್ಕೆ ಸರಿ ಹೊಂದುವಂತೆ ಶೈಕ್ಷಣಿಕ ವರ್ಷವನ್ನು ರೂಪಿಸಬೇಕಿರುವುದರಿಂದ ಪಠ್ಯವನ್ನು ಈ ಅವಧಿಗೆ ತಕ್ಕಂತೆ ರೂಪಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಚಿವರು ಈ ಕುರಿತು ಚರ್ಚೆ ನಡೆಸಿದ್ದಾರೆ. 1ರಿಂದ 10ನೇ ತರಗತಿ ಮತ್ತು ಪದವಿಪೂರ್ವ ಶಿಕ್ಷಣ ಪಠ್ಯಕ್ರಮದಲ್ಲಿ ಹೆಚ್ಚುವರಿ ಇರುವ ಪಠ್ಯವನ್ನು ಗುರುತಿಸುವ ಕಾರ್ಯಕ್ಕೆ ಕೂಡಲೇ ಚಾಲನೆ ನೀಡಬೇಕು ಎಂದವರು ಸೂಚಿಸಿದ್ದಾರೆ.

ಶೈಕ್ಷಣಿಕ ವರ್ಷದಲ್ಲಿ ಕಳೆದುಕೊಳ್ಳುವ ಅವಧಿಯ ಆಧಾರದ ಮೇಲೆ, ಮಕ್ಕಳ ಕಲಿಕೆಗೆ ಹೊರೆಯಾಗದ ರೀತಿಯಲ್ಲಿ ಅನಾವಶ್ಯಕ, ಪುನರಾವರ್ತಿತ ಪಠ್ಯವನ್ನು ಕೈಬಿಡಬೇಕು. ಕಡಿತವಾಗಬಹುದಾದ ಅವಧಿ ಆಧಾರದಲ್ಲಿ ಪ್ರತೀ ತರಗತಿ ಮತ್ತು ಪ್ರತೀ ವಿಷಯಕ್ಕೆ ಸಂಬಂಧಿಸಿದಂತೆ ಹಂತವಾರು ಹೆಚ್ಚುವರಿ ಪಠ್ಯ ಗುರುತಿಸಿ ಕೈಬಿಡುವ ವಿಸ್ತೃತ ವರದಿ ತಯಾರಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಟಿಇಟಿ ಪರೀಕ್ಷಾ ದಿನಾಂಕ ನಿಗದಿಪಡಿಸಿ
ಎಸೆಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ಕೂಡಲೇ ಟಿಇಟಿ ಪರೀಕ್ಷಾ ದಿನಾಂಕ ಪ್ರಕಟಿಸಲು, ಮುಂದಿನ ದಿನಗಳಲ್ಲಿ ಈ ಪರೀಕ್ಷೆಯನ್ನು ಆನ್‌ಲೈನ್‌ ಆಗಿಸಲು ಅಗತ್ಯ ಪೂರ್ವಸಿದ್ಧತೆ ಪ್ರಾರಂಭಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ. ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆಗೊಂಡ ವರ್ಗಾವಣೆ ಕಾಯ್ದೆಯ ನಿಯಮಗಳನ್ನು ಶೀಘ್ರ ರೂಪಿಸಿ ವರ್ಗಾವಣೆ ವೇಳಾಪಟ್ಟಿ ಪ್ರಕಟಿಸಲು ನಿರ್ದೇಶನ ನೀಡಿದ್ದಾರೆ.

Advertisement

ಯೂಟ್ಯೂಬ್‌ ಬೋಧನೆ
ಮಕ್ಕಳವಾಣಿ ಯೂಟ್ಯೂಬ್‌ ಚಾನೆಲ್‌ ರಾಷ್ಟ್ರದ ಗಮನ ಸೆಳೆದಿದ್ದು, ಮಾಹಿತಿ ತಂತ್ರಜ್ಞಾನ ಆಧಾರಿತವಾದ ಬೋಧನೆಯನ್ನೂ ನಾವು ಪೂರಕ ಕಲಿಕೆಯಾಗಿ ಅಳವಡಿಸಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ 1ರಿಂದ 10ನೇ ತರಗತಿಯವರೆಗೆ ವಿಷಯವಾರು, ಅಧ್ಯಾಯವಾರು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳ ಬೋಧನೆಯನ್ನು ಚಿತ್ರೀಕರಿಸಿ ಯೂ-ಟ್ಯೂಬ್‌ ಚಾನೆಲ್‌ನಲ್ಲಿ ಶಾಶ್ವತವಾಗಿ ಲಭ್ಯವಿರುವಂತೆ ಮಾಡಲು ಸಚಿವ ಸುರೇಶ್‌ ಕುಮಾರ್‌ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಅಂತರ ಕಾಯ್ದುಕೊಳ್ಳುವ ರೀತಿಯ ಕಲಿಕಾ ವಾತಾವರಣ ಕಲ್ಪಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆಯೂ ಸೂಚಿಸಿದ್ದಾರೆ.

ಕೋವಿಡ್‌-19 ಕಿರುಪುಸ್ತಕ
ಇದೇ ಶೈಕ್ಷಣಿಕ ಸಾಲಿನಿಂದ ಕೋವಿಡ್‌-19 ಹಿನ್ನೆಲೆಯಲ್ಲಿ ಸಾಮಾಜಿಕ ಹೊಂದಾಣಿಕೆಗಳ ಬಗ್ಗೆ ಪಠ್ಯವನ್ನು ಎಲ್ಲ ತರಗತಿಗಳಿಗೆ ಬೋಧಿಸುವುದಕ್ಕಾಗಿ ಕೂಡಲೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಚಿವರು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next