Advertisement

ಪಠ್ಯಕ್ರಮಕ್ಕೆ ಕಾರ್ಯಪಡೆ : ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವ : ಸಚಿವ ಸುರೇಶ್‌ ಕುಮಾರ್‌

02:15 AM Jul 10, 2021 | Team Udayavani |

ಬೆಂಗಳೂರು : ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಮತ್ತು ಪಠ್ಯಕ್ರಮ ಸಹಿತವಾಗಿ ಕಲಿಕೆಯ ನಿರಂತರತೆಗೆ ಬೇಕಾದ ಕ್ರಿಯಾ ಯೋಜನೆ ರೂಪಿಸಲು ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ಶಿಕ್ಷಣ ತಜ್ಞರನ್ನು ಒಳಗೊಂಡ ಈ ಸಮಿತಿಯು ಶೀಘ್ರವೇ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದ್ದಾರೆ.

Advertisement

ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಕಾರ್ಯಪಡೆ ವರದಿ ನೀಡಿದ ಅನಂತರ ಪಠ್ಯಕ್ರಮ ಸಹಿತ ವಿವಿಧ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.

ಜು. 20ರಂದು ದ್ವಿತೀಯ ಪಿಯುಸಿ ಫ‌ಲಿತಾಂಶ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫ‌ಲಿತಾಂಶ ಪ್ರಕಟನೆಗೆ ಸಂಬಂಧಿಸಿ ತಯಾರಿ ನಡೆಯುತ್ತಿದ್ದು, ಜು. 20ರಂದು ಫ‌ಲಿತಾಂಶ ನೀಡಲು ನಿರ್ಧರಿಸಲಾಗಿದೆ. ಹಾಗೆಯೇ ಪ್ರಸಕ್ತ ಸಾಲಿನ ಎಸೆಸೆಲ್ಸಿಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗುವುದರಿಂದ ಪ್ರಥಮ ಪಿಯುಸಿ ದಾಖಲಾತಿಗೆ ಅಗತ್ಯ ವ್ಯವಸ್ಥೆ ಮಾಡಬೇಕಿದೆ. ಇದಕ್ಕೆ ಬೇಕಾದ ಕ್ರಮಗಳನ್ನು ಸರಕಾರ ತೆಗೆದು ಕೊಳ್ಳಲಿದೆ ಎಂದರು.

ಸಲಕರಣೆ ಪೂರೈಕೆಗೆ ಕ್ರಮ
ಗ್ರಾಮೀಣ ಪ್ರದೇಶದ ಹಲವು ಮಕ್ಕಳು ಟಿ.ವಿ., ಮೊಬೈಲ್‌, ಲ್ಯಾಪ್‌ಟಾಪ್‌ ಮೊದಲಾದ ಸಲಕರಣೆಗಳು ಇಲ್ಲದೆ ಪರ್ಯಾಯ ಬೋಧನೆಯಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಡಿವೈಸ್‌ (ಕಲಿಕಾ ಸಲಕರಣೆ) ಮತ್ತು ಇಂಟರ್‌ನೆಟ್‌ ವ್ಯವಸ್ಥೆ ಕುರಿತು ಎರಡು ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಅನಂತರ ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಲಾಗುತ್ತದೆ. ರಾಜ್ಯದಲ್ಲಿ ಎಷ್ಟು ಮಕ್ಕಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌, ಟಿ.ವಿ. ಅಗತ್ಯವಿದೆ ಎಂಬಿತ್ಯಾದಿ ಮಾಹಿತಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಸಂಗ್ರಹಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next