Advertisement

ಕಲಿಕಾ ನಿರಂತರತೆಗೆ ಕಾರ್ಯಪಡೆ ರಚನೆ: ಸಚಿವ ಸುರೇಶ್ ಕುಮಾರ್

04:13 PM Jun 25, 2021 | Team Udayavani |

ಬೆಂಗಳೂರು: ಕೋವಿಡ್ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಕಲಿಕಾ ನಿರಂತರತೆ, ಕಲಿಕಾ ಸಾಮಗ್ರಿ, ಕಲಿಕಾ ನಿರಂತರ ಮೌಲ್ಯಮಾಪನ ಕುರಿತು ಕಾಲಕಾಲಕ್ಕೆ ಸಲಹೆ ನೀಡಲು ಸಮಾಜದ ವಿವಿಧ ಸ್ಥರಗಳ ವ್ಯಕ್ತಿಗಳು, ಶಿಕ್ಷಣ ತಜ್ಞರನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಿ, ವಿದ್ಯಾರ್ಥಿ ಕಲಿಕೆಯ ಪರಾಮರ್ಶೆಗೆ ನಿರಂತರ ಸೂತ್ರವನ್ನು ರಚಿಸಲಾಗುವುದೆಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

Advertisement

ಕೋವಿಡ್ ಕಾಲಘಟ್ಟದಲ್ಲಿ ಶಾಲಾರಂಭ ಸೇರಿದಂತೆ ಮಕ್ಕಳ ಕಲಿಕಾ ನಿರಂತರತೆ ಮತ್ತು ಡಾ. ದೇವಿಶೆಟ್ಟಿ ಸಮಿತಿ ವರದಿ ಕುರಿತು ಚರ್ಚಿಸಲು ಶುಕ್ರವಾರ ವಿವಿಧ ಶಿಕ್ಷಣ ತಜ್ಞರು, ಶಿಕ್ಷಣ ಕುರಿತ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ನಂತರ ಮಾತನಾಡಿದ ಅವರು, ಸಭೆಯಲ್ಲಿ ಶಾಲಾರಂಭ ಕುರಿತು ಹಲವಾರು ಅಭಿಪ್ರಾಯಗಳು ವ್ಯಕ್ತವಾಗಿದ್ದು, ಎಲ್ಲ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಒಂದು ನಿರ್ಧಾರಕ್ಕೆ ಬರಲಾಗುವುದು ಎಂದರು.

ನಾವು ಭೌತಿಕ ತರಗತಿಗಳ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೂ ಮೊದಲು ಆರೋಗ್ಯ ಇಲಾಖೆಯ ಸಲಹೆ ಪಡೆದೇ ಮುಂದುವರೆಯಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಇದನ್ನೂ ಓದಿ:ಮುಂದಿನ ವಾರದಿಂದ ಪ್ರವಾಸೋದ್ಯಮಕ್ಕೆ ಅವಕಾಶ: ಸಚಿವ ಯೋಗೇಶ್ವರ್

ಶಾಲೆಗಳಿಂದ ಮಕ್ಕಳನ್ನು ಬಹುಕಾಲ ದೂರ ಉಳಿಸುವುದು ಮಕ್ಕಳ ಹಿತರಕ್ಷಣೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗೆಯೇ ಯಾವುದೇ ಶಾಲೆಯಿಂದ ಕೋವಿಡ್ ಹರಡಿದ ನಿದರ್ಶನಗಳಿಲ್ಲದ ಕಾರಣ ಶಾಲೆಗಳನ್ನು ಸಾಧ್ಯವಾದಷ್ಟು ಬೇಗ ತೆರೆಯಬಹುದು ಮತ್ತು ಶಾಲಾರಂಭವನ್ನು ಆಯಾ ಪ್ರದೇಶವಾರು ಕೋವಿಡ್ ಕನಿಷ್ಠ ಪಾಸಿಟಿವಿಟಿ ಆಧಾರದಲ್ಲಿ ತೆರೆಯಬಹುದೆಂಬ ಡಾ. ದೇವಿ ಶೆಟ್ಟಿ ವರದಿಯ ಅಂಶಗಳ ಕುರಿತು ಪ್ರಧಾನವಾಗಿಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ ಪ್ರತಿಯೊಬ್ಬ ಪ್ರತಿನಿಧಿಗಳು, ಯಾವುದಾದರೂ ರೂಪದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಪರ್ಕ ಏರ್ಪಡಲೇಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆಂದು ಸಚಿವರು ತಿಳಿಸಿದರು.

Advertisement

ಸ್ಕೂಲ್ ಅನ್ ಲಾಕ್: ಹಲವಾರು ಮಂದಿ ದೇಶದ ವಿವಿಧೆಡೆ ಅನುಸರಿಸಿದ ಕಳೆದ ವರ್ಷ ಪ್ರಾರಂಭಿಸಿದ್ದ ನಮ್ಮ ರಾಜ್ಯದ ಸುಧಾರಿತ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿ ಶಿಕ್ಷಕರು ಮಕ್ಕಳನ್ನು ತಲುಪುವುದು, ಲಾಕ್‍ಡೌನ್ ಅನ್‍ಲಾಕ್ ಮಾಡಿದಂತೆ ವಿಕೇಂದ್ರೀಕರಣ ರೂಪದಲ್ಲಿ ಸ್ಕೂಲ್ ಅನ್‍ಲಾಕ್ ಮಾಡುವ ಕುರಿತೂ ಸಲಹೆಗಳು ವ್ಯಕ್ತವಾಗಿವೆ ಸುರೇಶ್ ಕುಮಾರ್ ಹೇಳಿದರು.

ಶಾಲಾರಂಭದ ವಿಷಯದಲ್ಲಿ ಎಲ್ಲ ಕಡೆಯೂ ಒಂದೇ ಬಾರಿಗೆ ಶಾಲೆ ತೆರೆಯದಿದ್ದರೂ ತೊಂದರೆಯೇನೂ ಇಲ್ಲ, ಆದರೆ ಆಯಾ ತಾಲೂಕು, ಗ್ರಾಮಪಂಚಾಯ್ತಿ ಇಲ್ಲವೇ ಜಿಲ್ಲಾ ಹಾಗೆಯೇ ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಹೋಬಳಿ, ತಾಲೂಕು ಕೇಂದ್ರವಾರು ತರಗತಿ ಆರಂಭಿಸುವುದು ಇಲ್ಲವೇ ಇತರೆ ರೂಪದಲ್ಲಿ ಮಕ್ಕಳನ್ನು ಉಪಾಧ್ಯಾಯರು ತಲುಪುವ ವಿಷಯಗಳ ಕುರಿತೂ ಪ್ರತಿನಿಧಿಗಳು ವಿವಿಧ ಸಲಹೆಗಳನ್ನು ನೀಡಿದರಲ್ಲದೇ ಭೌತಿಕವಾಗಿ ಶಾಲೆಗಳನ್ನು ತೆರೆಯುವ ಕುರಿತು ಆಲೋಚಿಸಬೇಕೆಂದೂ ಪ್ರತಿಪಾದಿಸಿದರು ಎಂದು ಸುರೇಶ್ ಕುಮಾರ್ ತಿಳಿಸಿದರು.

ಡಾ. ದೇವಿ ಶೆಟ್ಟಿ ವರದಿಯಂತೆ ತರಗತಿವಾರು, ಆಯಾ ಪ್ರದೇಶದ ಪಾಸಿಟಿವಿಟಿ ದರದ ಅನ್ವಯ ಶಾಲಾ ತರಗತಿಗಳನ್ನು ತೆರೆಯುವುದಾಗಲಿ ಇಲ್ಲವೇ ಶಾಲಾವರಣದಲ್ಲಿ ವಿದ್ಯಾಗಮ ತರಗತಿಗಳನ್ನು ನಡೆಸುವುದರ ಕುರಿತು ಆದ್ಯತೆ ನೀಡಬೇಕೆಂಬುದು ಬಹುತೇಕರ ಸಲಹೆಯಾಗಿದ್ದು, ಸದ್ಯದಲ್ಲೇ ಟಾಸ್ಕ್‍ಫೋರ್ಸ್ ರಚಿಸಿ ಒಂದು ತೀ‌ರ್ಮಾನಕ್ಕೂ ಬರಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.‌

ಈ ಬಾರಿ ನಿರಂತರ ಮೌಲ್ಯಾಂಕನ: ಕೋವಿಡ್‍ನಂತಹ ಸಂದರ್ಭದಲ್ಲಿ ಮಕ್ಕಳ ಮೌಲ್ಯಾಂಕನ ಮಾಡಲು ಅನುಕೂಲವಾಗುವಂತೆ ಈ ವರ್ಷದಿಂದ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲೂ ನಿರಂತರ/ ತ್ರೈಮಾಸಿಕ, ಅರ್ಧವಾರ್ಷಿಕ/ ವಾರ್ಷಿಕ ಮೌಲ್ಯಾಂಕನ ಪದ್ಧತಿಯನ್ನೂ ಅಳವಡಿಸಿಕೊಳ್ಳಬೇಕೆಂಬ ಕುರಿತೂ ಚಿಂತನೆ ನಡೆಸಲಾಗಿದ್ದು, ಈ ಕುರಿತಂತೆಯೂ ಕಾರ್ಯಪಡೆ ವರದಿ ನೀಡಲಿದೆ ಎಂದೂ ಸಚಿವರು ವಿವರಿಸಿದರು.

ಮಕ್ಕಳಿಗೆ ಆದಷ್ಟು ಬೇಗ ಪಠ್ಯಪುಸ್ತಕ ಪೂರೈಸಲು ಕ್ರಮ ವಹಿಸುವುದು ಹಾಗೆಯೇ ಮಧ್ಯಾಹ್ನ ಉಪಹಾರ ಸಾಮಗ್ರಿಗಳನ್ನು ಸಮಸ್ಯೆಯಿಲ್ಲದೇ ವಿತರಣೆ ಕುರಿತಂತೆಯೂ ಹೆಚ್ಚಿನ ಗಮನ ಹರಿಸಬೇಕೆಂದು ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next