ನವದೆಹಲಿ: ಕೋವಿಡ್ 19 ಸೋಂಕು ಸಂಬಂಧ ಹಿನ್ನೆಲೆಯ ತೊಂದರೆಯಿಂದಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರನ್ನು ಮಂಗಳವಾರ (ಜೂನ್ 01) ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ. ಏಪ್ರಿಲ್ 21ರಂದು ಕೋವಿಡ್ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ಒಂದು ತಿಂಗಳ ನಂತರ ಮತ್ತೆ ಅವರು ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ರಿಯಲ್ ಸ್ಟಾರ್ ಜೊತೆ ಗುರು ದೇಶಪಾಂಡೆ : ಸೆಟ್ಟೇರಲಿದೆ ಮತ್ತೊಂದು ಬಿಗ್ ಮೂವಿ
ಹಿಂದಿನ ದಿನ ತಮ್ಮ ಕಚೇರಿಯ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಲವಾರು ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ವಿಶ್ವಸಂಸ್ಥೆಯ ಜನರಲ್ ಅವರ ವಿಶೇಷ ಗುರುತಿಸುವಿಕೆ ಪ್ರಶಸ್ತಿ ಸ್ವೀಕರಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರಿಗೆ ಅಭಿನಂದನೆ ಕೂಡಾ ತಿಳಿಸಿದ್ದರು.
ನಿಗದಿಯಂತೆ ಶಿಕ್ಷಣ ಸಚಿವ ಪೋಖ್ರಿಯಾಲ್ ಅವರು ಮಂಗಳವಾರ (ಜೂನ್ 01) ಸಿಬಿಎಸ್ ಇ 12ನೇ ತರಗತಿ ಮತ್ತು ಐಸಿಎಸ್ ಇ ಪರೀಕ್ಷೆಗಳ ಕುರಿತು ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇತ್ತು. ಆದರೆ ಕೋವಿಡ್ ಸಂಬಂಧಿ ತೊಂದರೆಯಿಂದ ಪೋಖ್ರಿಯಾಲ್ ಇಂದು ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿ ಹೇಳಿದೆ.
ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಏಪ್ರಿಲ್ 14ರಂದು ಸಿಬಿಎಸ್ ಇ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈ ಬಗ್ಗೆ ಪರಿಸ್ಥಿತಿಯನ್ನು ಜೂನ್ 1ರಂದು ಪರಿಶೀಲಿಸುವುದಾಗಿ ಸಚಿವ ಪೋಖ್ರಿಯಾಲ್ ತಿಳಿಸಿದ್ದು, ಪರೀಕ್ಷೆ ನಡೆಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.