ವಾಡಿ: ಬಡತನದಿಂದ ಬಳಲಿದ ದಾರಿದ್ರ್ಯದ ಬದುಕು ಬದಲಿಸಲು ಹಾಗೂ ಅನ್ಯಾಯಗಳಿಂದ ಕೂಡಿದ ಸಮಾಜವನ್ನು ಪರಿವರ್ತಿಸಲು ಶಿಕ್ಷಣವೇ ನಮಗೆ ಅಸ್ತ್ರವಾಗಿ ಬಳಕೆಯಾಗಲಿದೆ ಎಂದು ಚಿತ್ತಾಪುರ ಕಂಬಳೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಸೋಮಶೇಖರ ಸ್ವಾಮೀಜಿ ನುಡಿದರು.
ಪಟ್ಟಣದ ಬಂಜಾರಾ ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ಶ್ರೀಗುರು ಪ್ರೌಢಶಾಲೆ ವಾರ್ಷಿಕೋತ್ಸವ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಡತನವೆಂಬ ನರಕದಿಂದ ಹೊರಬರಲು ಈ ಹಿಂದೆ ಅನೇಕ ಮಹಾನ್ ವ್ಯಕ್ತಿಗಳು ಕಠಿಣ ಅಭ್ಯಾಸ ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ವೈಯಕ್ತಿಕ ಬದುಕು ಆರ್ಥಿಕವಾಗಿ ಸುಧಾರಣೆಯಾಗುವ ಜತೆಗೆ ಸಮಾಜದ ಉದ್ಧಾರಕ್ಕಾಗಿಯೂ ಹೋರಾಡಿದ ಇತಿಹಾಸವನ್ನು ನಾವು ಮರೆಯಬಾರದು. ಪ್ರತಿಯೊಬ್ಬ ಮಗುವಿನಲ್ಲೂ ಪ್ರತಿಭೆಯೊಂದು ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಗುರುಗಳು ಬೇಕು. ಆ ಕೆಲಸವನ್ನು ಶ್ರೀಗುರು ಶಾಲೆ ಶಿಕ್ಷಕರು ಮತ್ತು ಸಂಸ್ಥೆಯ ಪದಾಧಿಕಾರಿಗಳು ಮಾಡುತ್ತಿದ್ದಾರೆ. ಇವರೆಲ್ಲರ ಶ್ರಮಕ್ಕೆ ಬೆಲೆ ತರಲು ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಬೇಕು ಎಂದರು.
ಕಸಾಪ ವಾಡಿ ವಲಯ ಅಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ ಮಾತನಾಡಿ, ಇಂಗ್ಲಿಷ್ ಶಿಕ್ಷಣದ ವ್ಯಾಮೋಹ ಒಂದೆಡೆಯಾದರೆ ಕನ್ನಡಿಗರ ಉದ್ಯೋಗ ಸಮಸ್ಯೆ ಮತ್ತೊಂದೆಡೆ ಎದುರಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯಲ್ಲಿ ಸೊರಗದೆ ಕನ್ನಡ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿವೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪದಕಗಳನ್ನು ಪಡೆದುಕೊಂಡಿದ್ದಾರೆ. ಶಿಕ್ಷಣ ನಮ್ಮ ಆತ್ಮಗೌರವ ಹೆಚ್ಚಿಸುತ್ತದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಅರವಿಂದ ಚವ್ಹಾಣ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಪತ್ರಕರ್ತ ರಾಯಪ್ಪ ಕೊಟಗಾರ ಮಾತನಾಡಿದರು.
ಬಂಜಾರಾ ಮಹಿಳಾ ಅಭಿವೃದ್ಧಿ ಸಂಸ್ಥೆ ಮುಖಂಡ ಶಿವರಾಮ ಪವಾರ ಸಂಸ್ಥೆ ಬೆಳೆದುಬಂದ ದಾರಿ ವಿವರಿಸಿದರು. ಮುಖಂಡರಾದ ಈಶ್ವರ ರಾಠೊಡ, ಪಾಂಡು ರಾಠೊಡ, ಸೋಮಸಿಂಗ್ ರಾಠೊಡ, ರಾಹುಲ್ ಸಿಂಧಗಿ, ಭೀಮರಾಯ ಮತ್ತಿಮಡು, ಮುಖ್ಯಶಿಕ್ಷಕರಾದ ರಾಘವೇಂದ್ರ ಗುಡಾಳ, ಮಲ್ಲಮ್ಮ ಎಸ್.ನಾಯಕ, ಸಹ ಶಿಕ್ಷಕರಾದ ಪ್ರಿಯಾದರ್ಶನಿ ಚಿತ್ತಾಪುರ, ಸವಿತಾ ರಾಠೊಡ, ವಿಜಯಲಕ್ಷ್ಮೀ ಪಾಟೀಲ ಪಾಲ್ಗೊಂಡಿದ್ದರು.
ಶಿಕ್ಷಕ ಸಿದ್ಧಲಿಂಗ ತಂಬೂರಿ ಸ್ವಾಗತಿಸಿದರು, ಚಂದ್ರಶೇಖರ ಕಲ್ಯಾಣಿ ನಿರೂಪಿಸಿ, ವಂದಿಸಿದರು. ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.