ಸೇಡಂ: ಶಿಕ್ಷಣವೊಂದೇ ಮನುಷ್ಯನ ಬದುಕನ್ನು ರೂಪಿಸಬಲ್ಲದು. ಅದನ್ನೇ ಭದ್ರಬುನಾದಿಯಾಗಿ ನಿರ್ಮಿಸಿಕೊಳ್ಳುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಲಿಂಗಂಪಲ್ಲಿ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಸತ್ಯರಾವ ಶಿಂಧೆ ಹೇಳಿದರು.
ಪಟ್ಟಣದ ಶ್ರೀ ನೇತಾಜಿ ಶಿಕ್ಷಣ ಸಂಸ್ಥೆಯ ಶ್ರೀ ಸಾಯಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನುದ್ದಕ್ಕೂ ಸಮಯ ವ್ಯರ್ಥ ಮಾಡದೇ ಆದರ್ಶ ವ್ಯಕ್ತಿಗಳ ದಾರಿಯಲ್ಲಿ ಸಾಗುವಂತೆ ಆಗಬೇಕು. ಉತ್ತಮ ವಾತಾವರಣದ ಕಲಿಕೆ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಈ ನಿಟ್ಟಿನಲ್ಲಿ ನೇತಾಜಿ ಶಿಕ್ಷಣ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಶಿಕ್ಷಕ ರಾಜು ಟಿ. ಮಾತನಾಡಿ, ವಿದ್ಯಾರ್ಥಿ ಜೀವನದ ಪ್ರಮುಖ ಘಟಕ ಕಾಲೇಜು ಶಿಕ್ಷಣವಾಗಿದ್ದು, ಅದರ ಸದ್ಬಳಕೆಯತ್ತ ಹೆಚ್ಚಿನ ಗಮನಕೊಟ್ಟು, ಮನೋರಂಜನೆಯಿಂದ ದೂರ ಉಳಿಯಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ ನಿಡಗುಂದಾ, ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹೇಶಗೌಡ ಮಾತನಾಡಿದರು. ಐಟಿಐ ಕಾಲೇಜು ಪ್ರಾಂಶುಪಾಲ ಮೌನೇಶ ವಿಶ್ವಕರ್ಮ, ಬಾಬುರಾವ ಯರಗೋಡ್, ರಮೇಶ ಎರ್ರಿ, ಅಶೋಕ ವೇದಿಕೆಯಲ್ಲಿದ್ದರು. ಶಿಕ್ಷಕಿ ಸುಶ್ಮಿತಾ ನಿರೂಪಿಸಿದರು. ಅಂಬಿಕಾ ಸ್ವಾಗತಿಸಿದರು. ಭಾರತಿ ವಂದಿಸಿದರು.