Advertisement

ಪರಿವರ್ತನಾ ಮಾರ್ಗಕ್ಕೆ ಶಿಕ್ಷಣವೇ ಮೊದಲ ಹೆಜ್ಜೆ

04:57 PM Sep 07, 2018 | |

ಶಿವಮೊಗ್ಗ: ಯಾವುದೋ ವಿಷಗಳಿಗೆಯಲ್ಲಿ ನಡೆಯುವ ತಪ್ಪನ್ನು ಸರಿಪಡಿಸಿಕೊಂಡು, ಕಳೆದುಹೋದ ಸಾಮಾಜಿಕ ಸ್ಥಾನಮಾನವನ್ನು ಮರಳಿ ಗಳಿಸುವ ಪರಿವರ್ತನಾ ಮಾರ್ಗಕ್ಕೆ ಶಿಕ್ಷಣ ಪಡೆಯಲು ಮುಂದಾಗುವುದೇ ಮೊದಲ ಹೆಜ್ಜೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಜೋಗನ್‌ ಶಂಕರ್‌ ಅಭಿಪ್ರಾಯಪಟ್ಟರು.

Advertisement

ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯ ಮತ್ತು ಶಿವಮೊಗ್ಗ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಶಿವಮೊಗ್ಗದ ಹೊರವಲಯದಲ್ಲಿರುವ ಓತಿಘಟ್ಟದ ಬಳಿಯ ಕೇಂದ್ರ ಕಾರಾಗೃಹದಲ್ಲಿ ಅಯೋಜಿಸಲಾಗಿದ್ದ ಬಂಧಿಗಳಿಗೆ ದೂರಶಿಕ್ಷಣ ಅಧ್ಯಯನ ಸಾಮಗ್ರಿ ವಿತರಣೆ ಮತ್ತು ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಕುವೆಂಪು ವಿಶ್ವವಿದ್ಯಾಲಯವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉನ್ನತ ಶಿಕ್ಷಣ ತಲುಪಿಸುವ ಧ್ಯೇಯವನ್ನು ಹೊಂದಿದೆ. ಅದರ ಭಾಗವಾಗಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜೈಲುಗಳ
ಆಸಕ್ತ ಸಜಾಬಂ ಧಿಗಳಿಗೆ ದೂರಶಿಕ್ಷಣದ ಮೂಲಕ ಉಚಿತವಾಗಿ ಶಿಕ್ಷಣ ನೀಡಲು ಮುಂದಾಗಿದೆ. ಶಿಕ್ಷಣದ ಮೂಲಕವೇ ಅವರನ್ನು ಸುಧಾರಿಸಿ, ಸಾಮಾಜಿಕವಾಗಿ ಸಶಕ್ತರನ್ನಾಗಿ ಮಾಡಿ ಪರಿಪೂರ್ಣತೆಯೆಡೆಗೆ ಕೊಂಡೊಯ್ಯಲಿದೆ ಎಂದು ಅವರು ತಿಳಿಸಿದರು.

ಮುಖ್ಯಅತಿಥಿಗಳಾಗಿದ್ದ ಪ್ರೊ| ಭೋಜ್ಯಾನಾಯ್ಕ ಮಾತನಾಡಿ, ವಿಶ್ವವಿದ್ಯಾಲಯಕ್ಕೆ ಶಿಕ್ಷಣ ಬಯಸಿ ಬರುತ್ತಲಿರುವ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದ ಆಶಯವು, ಈ ಬಾರಿ ಉನ್ನತ ಶಿಕ್ಷಣಕ್ಕೆ ನೋಂದಾಯಿಸಿಕೊಂಡಿರುವ ಏಳು ಸಜಾಬಂಧಿಗಳಿಗೆ ನೀಡುವ ಶಿಕ್ಷಣದ ಆಶಯಕ್ಕೆ ಸಮನಾದುದು. ಮೊಟ್ಟಮೊದಲ ಬಾರಿಗೆ ವಿವಿಯೇ ಆಸಕ್ತರ ಬಳಿ ಬಂದಿದ್ದು, ಈ ಜೈಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕೋರ್ಸ್‌ಗಳ ವಿಷಯ ತಜ್ಞ ಉಪನ್ಯಾಸಕರೇ ಜೈಲಿಗೆ ಬಂದು ಪಾಠ- ಪ್ರವಚನ ನೀಡಲಿದ್ದು, ಪರೀಕ್ಷೆಗಳನ್ನು ಇಲ್ಲಿಯೇ ನಡೆಸಲಾಗುವುದು. ಸಜಾಬಂಧಿಗಳಿಗೆ ಮಾತ್ರವಲ್ಲದೆ, ಬಂ ಧೀಖಾನೆಯ ಎಲ್ಲ ನೌಕರ ವರ್ಗ ಮತ್ತು ಕುಟುಂಬ ಸದಸ್ಯರು ದೂರ ಶಿಕ್ಷಣಕ್ಕೆ ನೋಂದಾಯಿಸಿಕೊಳ್ಳಬಹುದು. ವಿಚಾರಣೆ, ಶಿಕ್ಷೆ ಮುಗಿದು ಹೊರಬಂದ ಕೈದಿಗಳು ತದನಂತರ ವಿಶ್ವವಿದ್ಯಾಲಯದ ಸಂಪರ್ಕದೊಂದಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

Advertisement

ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ. ಬಾದಾಮಿ ಮಾತನಾಡಿ, ನ್ಯಾಯಾಲಯಗಳ ತೀರ್ಪಿಗಿಂತ ಆತ್ಮಸಾಕ್ಷಿಯ ಅರಿವು ದೊಡ್ಡದು. ತಪ್ಪು ಒಪ್ಪಿಕೊಂಡು ಶಿಕ್ಷಣದ ಮೂಲಕ ಪರಿವರ್ತನೆಯ ದಾರಿ ತುಳಿದು ಕುಟುಂಬ, ಸಾಮಾಜಿಕ ಸ್ಥಾನಮಾನ, ಗೌರವಗಳನ್ನು ಮರಳಿ ಪಡೆಯಿರಿ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ| ರಾಜಾ ನಾಯಕ, ಪ್ರೊ| ಹಿರೇಮಣಿ ನಾಯ್ಕ, ವಿವಿಯ ದೂರಶಿಕ್ಷಣ ವಿಭಾಗದ ಸಿಬ್ಬಂದಿ ಹಾಗೂ 300ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ಖೈದಿಗಳು ಇದ್ದರು.
 
ಮಹಿಳಾ ಸಜಾಬಂದಿಗಳಾದ ಸರಸ್ವತಿ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ| ಚಂದ್ರಶೇಖರ್‌ ಕೆ. ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ. ಸಿ. ದಿವ್ಯಶ್ರೀ ವಂದಿಸಿದರು. ಡಾ| ಕೆ.ಎಚ್‌. ಹಸೀನಾ ನಿರೂಪಿಸಿದರು.

ವಿಶ್ವವಿದ್ಯಾಲಯವು ನಮ್ಮಲ್ಲಿಗೆ ಬಂದು ಉನ್ನತ ಶಿಕ್ಷಣ ನೀಡುತ್ತಿರುವುದು ಬಹಳ ಖುಷಿ ನೀಡಿದೆ. ಆಧ್ಯಯನ
ಸಾಮಗ್ರಿ ಜೊತೆಗೆ ಹೆಚ್ಚಿನ ಪುಸ್ತಕಗಳನ್ನು ಓದಿ ಜ್ಞಾನವಂತರಾಗಿ ಜೈಲಿನಿಂದ ಹೊರಹೊಗಲು ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ಮುಂದೆ ಹೆಚ್ಚಿನ ಸಂಖ್ಯೆಯ ಸ್ನೇಹಿತರು ಇದರ ಪ್ರಯೋಜನ ಪಡೆಯಲಿದ್ದಾರೆ. 
 ಅವಿನಾಶ್‌, ಬಿ.ಕಾಂ. ಕೋರ್ಸ್‌ಗೆ ಪ್ರವೇಶ ಪಡೆದಿರುವ ಕೈದಿ

Advertisement

Udayavani is now on Telegram. Click here to join our channel and stay updated with the latest news.

Next