ಹಿರೇಕೆರೂರ: ಶಿಕ್ಷಣ ಎಂಬುದು ಬೆಲೆ ಕಟ್ಟಲಾಗದ ಅಮೂಲ್ಯ ವಸ್ತು. ಅದನ್ನು ಬಾಲ್ಯಾವಸ್ಥೆಯಲ್ಲೇ ಸಂಪಾದಿಸಬೇಕು. ಹೀಗಾಗಿ, ಎಲ್ಲರೂ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಿ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ದೂಪದಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಾಣವಾದ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗಳು ಸುಗಮವಾಗಿ ಸಾಗಲು ಶೈಕ್ಷಣಿಕ ಸೌಲಭ್ಯಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಶಿಕ್ಷಣ ಪಡೆದು ದೇಶಕ್ಕೆ ಕೀರ್ತಿ ತರಬೇಕೆಂದರು.
ರೈತರು ಸಾವಯವ ಕೃಷಿ ಪದ್ಧತಿಯಲ್ಲಿ ಸಮಗ್ರ ಬೆಳೆ ಬೆಳೆದಾಗ ಮಾತ್ರ ಆರ್ಥಿಕ ಸಫಲತೆ ಕಾಣಲು ಸಾಧ್ಯ. ಕೃಷಿಯ ಜೊತೆಗೆ ಉಪಕಸುಬುಗಳನ್ನು ಮಾಡಿದರೆ ಕೃಷಿಯಲ್ಲಾಗುವ ನಷ್ಟವನ್ನು ಸರಿದೂಗಿಸಬಹುದು ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಜಾತೀಯತೆ, ಬಡವ-ಶ್ರೀಮಂತ ಎಂಬ ತಾರತಮ್ಯಗಳಿವೆ. ಆದರೆ ಎಲ್ಲರನ್ನೂ ಸರಿಸಮಾನವಾಗಿ ಕಾಣುವ ಏಕೈಕ ಮಂದಿರವೇ ಸರ್ಕಾರಿ ಶಾಲೆಗಳು. ನಾವು ಗಳಿಸಿದ ಆಸ್ತಿ ಕೆಲವೊಮ್ಮೆ ಯಾರಧ್ದೋ ಪಾಲಾಗಬಹುದು. ಆದರೆ, ನಾವು ಪಡೆದ ಶಿಕ್ಷಣ ನಮ್ಮನ್ನು ಕೊನೆಯವರೆಗೂ ರಕ್ಷಿಸುತ್ತದೆ ಎಂದರು.
ತಹಶೀಲ್ದಾರ್ ಅರುಣಕುಮಾರ ಕಾರಗಿ, ಬಿಇಒ ಶ್ರೀಧರ್ ಎನ್., ಗ್ರಾಪಂ ಅಧ್ಯಕ್ಷೆ ಶಾಂತವ್ವ ಸೊಟ್ಟಪ್ಪನವರ, ಸದಸ್ಯರಾದ ಜಯಪ್ಪ ಅಂಗಡಿ, ಅನಸೂಯಮ್ಮ ಮಡಿವಾಳರ, ಮುಖ್ಯ ಶಿಕ್ಷಕ ಸುರೇಶ ವಡ್ಡರ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು, ಅಧಿಕಾರಿಗಳು ಹಾಜರಿದ್ದರು.