Advertisement

ಶಿಕ್ಷಕರ ದಿನಾಚರಣೆ: ಶಿಕ್ಷಣವು ಒಂದು ಉದ್ಯಮವಲ್ಲವೆಂಬುದನ್ನು ಸಾಬೀತುಪಡಿಸಬೇಕಿದೆ

02:53 PM Sep 04, 2020 | keerthan |

ಮನುಕುಲದ ಇತಿಹಾಸದಲ್ಲೇ ಇದುವರೆಗೂ ನಮ್ಮ ಶಿಕ್ಷಣ ವ್ಯವಸ್ಥೆಗೆ ಇಂತಹದೊಂದು ತೊಡಕು ಬಂದಿರಲಿಲ್ಲ. ಪ್ರಸ್ತುತ ಕೋವಿಡ್ ಮಹಾಮಾರಿಯಿಂದ ತಪ್ಪಿಸಿಕೊಳ್ಳುವುದು ಒಂದು ಸವಾಲಾದರೆ, ಮಕ್ಕಳ ಬೌದ್ಧಿಕ ಮಟ್ಟ ಕುಸಿಯದಂತೆ, ಭವಿಷ್ಯದಲ್ಲಿ ಅವರನ್ನು ಅನಕ್ಷರಸ್ಥರಾಗದಂತೆ ತಡೆಯುವುದು ಮತ್ತೊಂದು ಸವಾಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಮ್ಮ ಉಪಖಂಡದಲ್ಲಿ ಈಗಾಗಲೇ ಇರುವ ಅನರಕ್ಷತೆಯ ಪ್ರಮಾಣ ಮತ್ತೊಂದಷ್ಟು ಹೆಚ್ಚಾಗುವ ಸಂಭವನೀಯತೆ ಇದೆ. ಆದರೆ ಇದಕ್ಕೆ ನಮ್ಮ ಶಿಕ್ಷಕ ಬಂಧುಗಳು ಆಸ್ಪದ ಕೊಡದೆ ಶಿಕ್ಷಣ ಇಲಾಖೆಯ ಸೂಚನೆಗಳ ಜೊತೆಜೊತೆಗೆ ತಮ್ಮದೇ ಅದ ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದಲ್ಲಿ ಜ್ಞಾನ ವಲಯವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತು ಸಾಗುತ್ತಿರುವುದು ಶ್ಲಾಘನೀಯ.

Advertisement

ವಿದ್ಯೆ ಇಲ್ಲದವನ ಮುಖ ಹಾಳೂರ ಹದ್ದಿನಂತಿಕ್ಕು ಸರ್ವಜ್ಞ ಎಂಬ ಉಕ್ತಿಯನ್ನು ಸಾಕ್ಷೀಕರಿಸುವಂತೆ ಇಂದು ಶಿಕ್ಷಣವು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಏಕೆಂದರೆ ಶಿಕ್ಷಣವು ಅತ್ಯಂತ ಸಾರ್ವಕಾಲಿಕ ಆಗಿದೆ. ಶಿಕ್ಷಣವು ಮಗುವಿನ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗಿದೆ. ಆದರೆ ಈ ಹೊತ್ತಿನಲ್ಲಿ ಸಮಾರಂಭದವೊಂದರಲ್ಲಿ ಹಿರಿಯೊಬ್ಬರು ಹೇಳಿದ ಮಾತು ಹೀಗಿದೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯು ಮಕ್ಕಳಿಗೆ ಭವಿಷ್ಯದಲ್ಲಿ ಹೇಗೆ ಕೂಲಿ ಮಾಡಬೇಕೆಂಬುದನ್ನಷ್ಟೇ ಕಲಿಸುತ್ತಿದೆ. ಇಂತಹ ಅಪವಾದಗಳಿಂದ ಮುಕ್ತವಾಗುವುದರ ಜೊತೆಗೆ ನಮ್ಮ ಶಿಕ್ಷಣ ವ್ಯವಸ್ಥೆಗೆ ಆಮೂಲಾಗ್ರ ಬದಲಾವಣೆ ಬೇಕಿದೆ.

ಈಗಾಗಲೇ ರಾಷ್ಟ್ರಕ್ಕೆ ನೂತನ ಶಿಕ್ಷಣ ನೀತಿ ಘೋಷಣೆಯಾಗಿದ್ದು, ಅದು ಪ್ರಸ್ತುತ ತಲ್ಲಣಗಳನ್ನು ದಾಟಿ, ಮುಂಬರುವ ದಿನಗಳಲ್ಲಿ ಶಿಕ್ಷಣವೇ ಶಕ್ತಿ ಎಂಬ ವಾಕ್ಯದ ಬೆನ್ನತ್ತಿ ಹೊರಟಲ್ಲಿ ನಮ್ಮ ಸನಾತನ ಶಿಕ್ಷಣ ಪದ್ಧತಿಗೆ ಒಂದು ಬೆಲೆ ತರಲು ಸಾಧ್ಯ. ಕೇವಲ ಓದು, ಬರಹವನ್ನು ಕಲಿಸಿ ಮಕ್ಕಳನ್ನು ಯಂತ್ರಮಾನವರನ್ನಾಗಿಸುವ ಶಿಕ್ಷಣದ ಬದಲಿಗೆ ನಮಗಿಂದು ಅಗತ್ಯವಿರುವುದು ಮೌಲ್ಯಾಧಾರಿತ ಶಿಕ್ಷಣ. ಮಕ್ಕಳಲ್ಲಿ ಮೌಲ್ಯಗಳು ಕ್ಷೀಣಿಸುತ್ತಿದ್ದು, ಇದರೊಂದಿಗೆ ಇಡಿಯ ನಮ್ಮ ಸಮಾಜದ ದಿಕ್ಕೇ ಬದಲಾಗಿ ಹೋಗುತ್ತಿದೆ. ಶಿಕ್ಷಣವನ್ನು ಪ್ರಗತಿಪರ ಕಾರ್ಯಗಳಿಗೆ ಬಳಸಿಕೊಳ್ಳುವ ಮಂದಿಗಿಂತ ಇಂದು ಅದನ್ನು ಸ್ವಾರ್ಥ ಮತ್ತು ಸರ್ವನಾಶಕ್ಕೆ ಬಳಸಿಕೊಳ್ಳುತ್ತಿರುವುದು ದುಸ್ತರ ಭವಿಷ್ಯದ ಮುನ್ಸೂಚನೆಯಾಗಿದೆ. ಇಂದು ಈ ಜಗತ್ತನ್ನು ನಿಜಕ್ಕೂ ನಾಶ ಮಾಡುತ್ತಿರುವವರು ಬಹುತೇಕ ವಿದ್ಯಾವಂತರೆಂಬ ಕಳಂಕ ಪಿಸುಗುಡುತ್ತಿದೆ. ಬದಲಾದ ಜಾಯಮಾನದಲ್ಲಿ ನಾವು ಇವುಗಳಿಂದ ಮುಕ್ತಗೊಳ್ಳಬೇಕಿದೆ. ಶಿಕ್ಷಣವು ಒಂದು ಉದ್ಯಮವಲ್ಲವೆಂಬುದನ್ನು ಸಾಬೀತುಪಡಿಸಬೇಕಿದೆ.

ವಿ.ಕೆ ಕುಮಾರಸ್ವಾಮಿ
ವಿರುಪಾಪುರ, ಮಾಗಡಿ ತಾಲ್ಲೂಕು. ರಾಮನಗರ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next