ದೇವದುರ್ಗ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಭವಿಷ್ಯದ ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳಬೇಕಾದರೆ ಪ್ರತಿಯೊಬ್ಬರು ಅಕ್ಷರಸ್ಥರಾಗಬೇಕು. ಅಂದಾಗ ಮಾತ್ರ ಉತ್ತಮ ನಾಡು ಕಟ್ಟಲು ಸಾಧ್ಯವಾಗುತ್ತದೆ ಎಂದು ಕೊಪ್ಪರ ಜಿಪಂ ಸದಸ್ಯೆ ಬಸಮ್ಮ ಲಿಂಗನಗೌಡ ಹೇಳಿದರು. ಜೋಳದಹೆಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 2018-19ನೇ ಸಾಲಿನ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕಾಗಿದೆ. ಅದನ್ನು ಯಾರು ಕಸಿದುಕೊಳ್ಳಬಾರದು ಎಂದು ಹೇಳಿದರು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರತಾಗಲೇ ಅವರು ಪ್ರಜ್ಞಾವಂತ ನಾಗರಿಕರಾಗಿ ರೂಪುಗೊಳ್ಳುವರು. ಅವರನ್ನು ತಿದ್ದುವ ತೀಡುವ ಜವಾಬ್ದಾರಿ ಶಿಕ್ಷಕರದ್ದಾಗಿದ್ದು. ಈ ನಿಟ್ಟಿನಲ್ಲಿ ಜೋಳದಹೆಡಗಿ ಮಕ್ಕಳು ಉತ್ತಮ ಶಿಕ್ಷಕರನ್ನು ಪಡೆದಿರುವುದು ಪುಣ್ಯವೇ ಸರಿ. ಮಕ್ಕಳ ಅಂತರಾಳವನ್ನು ಅರಿತುಕೊಂಡು ಅವರ ಭವಿಷ್ಯ ಶಿಕ್ಷಕರು ರೂಪಿಸುವ ಜವಾಬ್ದಾರಿಯುತ ಸ್ಥಾನ ಹೊಂದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಸಿ.ಎಸ್. ಪಾಟೀಲ, ಶಾಲೆಯಲ್ಲಿ ಉತ್ತಮ ಶಿಕ್ಷಕ ವರ್ಗ ಕಾರ್ಯನಿರ್ವಹಿಸುತ್ತಿದ್ದು, ಅವರೊಂದಿಗೆ ಮಕ್ಕಳು ಹಾಗೂ ಗ್ರಾಮದ ನಾಗರಿಕರು ಕೈಜೋಡಿಸಿದರೆ ಮಕ್ಕಳ ಭವಿಷ್ಯ ಪ್ರಜ್ವಲಿಸುವಂತೆ ಮಾಡಬಹುದು. ಶಿಕ್ಷಕರ ಶ್ರಮದ ಜತೆ ಪಾಲಕರು ಪಾಲ್ಗೊಂಡರೆ ನಮ್ಮೂರಿನ ಶಾಲೆಯನ್ನು ಮಾದರಿಯನ್ನಾಗಿ ರೂಪಿಸಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಶಿವರಾಜ ಬಿರಾದಾರ, ಶಿಕ್ಷಣ ಸಂಯೋಜಕ ಸುರೇಶ ಪಾಟೀಲ, ಬಿಆರ್‌ಪಿ ವಿಶ್ವನಾಥ ಮಾಲಿಪಾಟೀಲ, ಬಿಆರ್‌ಪಿ ಭೀಮರಡ್ಡಿ ಪಾಟೀಲ, ಸಿಆರ್‌ಪಿಗಳಾದ ಗಂಗಾಧರ ಬಿ. ಶಾಂತಗೌಡ, ಎಸ್‌ಡಿಎಂಸಿ ಅಧ್ಯಕ್ಷೆ ಶಾಂತಾ ಮಲ್ಲಿಕಾರ್ಜುನ ಬನ್ನಿಮರ, ಮುಖ್ಯಶಿಕ್ಷಕಿ ತುನಾಜಾ, ಶಿಕ್ಷಕರಾದ ಬಾಲಕೃಷ್ಣ, ಮಂಜುನಾಥ, ಮಹ್ಮದ್ ಖತಲ್, ಈರಮ್ಮ ಸೇರಿದಂತೆ ಗ್ರಾಮದ ಹಿರಿಯ ನಾಗರಿಕರು ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕವಿತಾ ನಾಗರತ್ನ, ಮುತ್ತಪ್ಪ ಗಣತಿ ನಿರೂಪಿಸಿದರು.