Advertisement

ಶಿಕ್ಷಣ ಸಂಸ್ಥೆಗಳ ರಾಂಕಿಂಗ್: ಐಐಎಸ್‌ಸಿಗೆ ಮೊದಲ ಸ್ಥಾನ

03:45 AM Apr 04, 2017 | Harsha Rao |

ಹೊಸದಿಲ್ಲಿ: ಕಳೆದ ತಿಂಗಳು “ಟೈಮ್ಸ್‌ ಹೈಯರ್‌ ಎಜುಕೇಶನ್‌’ ಪಟ್ಟಿಯಲ್ಲಿ ಎಂಟನೇ ಸ್ಥಾನ ಗಳಿಸಿದ್ದ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸೋಮವಾರ ಪ್ರಕಟಿಸಿದ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ರಾಂಕಿಂಗ್ನ ಎಲ್ಲ ವಿಭಾಗಗಳಲ್ಲಿಯೂ ಅಗ್ರ ಸ್ಥಾನ ಪಡೆದುಕೊಂಡಿದೆ.

Advertisement

ನ್ಯಾಶನಲ್ಸ್‌ ಇನ್‌ಸ್ಟಿಟ್ಯೂಷನ್ಸ್‌ ರಾಂಕಿಂಗ್ ಫ್ರೆàಮ್‌ವರ್ಕ್‌ (ಎನ್‌ಐಆರ್‌ಎಫ್) ಸಿದ್ಧ ಪಡಿಸಿರುವ ಈ ರಾಂಕಿಂಗ್ ಪಟ್ಟಿಯಲ್ಲಿ ಏಳು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ) ಕೂಡ ಟಾಪ್‌ 10ರಲ್ಲೇ ಸ್ಥಾನ ಪಡೆದುಕೊಂಡಿವೆ. ಟಾಪ್‌ 10ರ ಕಡೆಯ ಎರಡು ಸ್ಥಾನಗಳಲ್ಲಿ ಬನಾರಸ್‌ ಹಿಂದೂ ವಿವಿ (ಬಿಎಚ್‌ಯು) ಮತ್ತು ಜವಾಹರಲಾಲ್‌ ನೆಹರೂ ವಿವಿ (ಜೆಎನ್‌ಯು) ಇವೆ.

ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಈ ಕುರಿತು ಮಾಹಿತಿ ನೀಡಿದರು. ಕಳೆದ ವರ್ಷ ಈ ಸಮಯದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌ ಮತ್ತು ಎಂಜಿನಿಯರಿಂಗ್‌ ಹಾಗೂ ಸಮಗ್ರ ರಾಂಕಿಂಗ್ ಬಿಡುಗಡೆಗೊಳಿಸಲಾಗಿತ್ತು. ಸಮಗ್ರ ಮತ್ತು ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಎಸ್‌ಸಿ ಅಗ್ರಸ್ಥಾನ ಗಳಿಸಿ, ಈಗಲೂ ಆ ಸ್ಥಾನ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಉಗ್ರ ಅಫ‌jಲ್‌ ಗುರು ಪರ ಕಾರ್ಯಕ್ರಮದಿಂದ ವಿಶ್ವಾದ್ಯಂತ ಸುದ್ದಿಯಾಗಿದ್ದ ದಿಲ್ಲಿಯ ಜವಾಹರ್‌ಲಾಲ್‌ ನೆಹರೂ ವಿವಿ ಕಳೆದ ಬಾರಿ ಎರಡನೇ ಸ್ಥಾನದಲ್ಲಿತ್ತು. ಈ ಬಾರಿ ಉತ್ತಮ ವಿವಿಗಳ ಪಟ್ಟಿಯಲ್ಲಿ 2ನೇ ಸ್ಥಾನಗಳಿಸಿದೆ.

ಉತ್ತಮ ರಾಂಕಿಂಗ್ಗೆ ಹೆಚ್ಚು ನಿಧಿ: ಉತ್ತಮ ರಾಂಕಿಂಗ್ಗೆ ಹೆಚ್ಚಿನ ಅನುದಾನ ಮತ್ತು ಸ್ವಾಯತ್ತತೆ ಸಿಗಲಿದೆ. ಇದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ ಮಾತು. ಪಟ್ಟಿ ಬಿಡುಗಡೆಗೊಳಿಸಿದ ಅನಂತರ ಮಾತನಾಡಿದ ಅವರು, ವಿವಿಗಳು ಮತ್ತು ಕಾಲೇಜುಗಳ ನಡುವೆ ಉತ್ತಮ ಸ್ಪರ್ಧೆ ಏರ್ಪಡಲಿ ಎಂಬ ಉದ್ದೇಶದಿಂದ ಈ ರಾಂಕಿಂಗ್ ಪ್ರಕಟಿಸಲಾಗಿದೆ. ಹೆಚ್ಚಿನ ಶ್ರೇಣಿ ಪಡೆದ ಸಂಸ್ಥೆಗಳಿಗೆ ಸರಕಾರದ ಹೆಚ್ಚುವರಿ ಸೌಲಭ್ಯ ದೊರೆಯಲಿದೆ ಎಂದು ಹೇಳಿದ್ದಾರೆ.

ಐಐಎಸ್‌ಸಿ ವಿಶೇಷತೆ: ಬೆಂಗಳೂರಿನಲ್ಲಿರುವ ದೇಶದ ಪ್ರತಿಷ್ಠಿತ ಹಾಗೂ 108 ವರ್ಷಗಳ ಇತಿಹಾಸವುಳ್ಳ ಶಿಕ್ಷಣ ಸಂಸ್ಥೆ ಐಐಎಸ್‌ಸಿ. ವೈಜ್ಞಾನಿಕ ಸಂಶೋಧನೆ ಮತ್ತು ಉನ್ನತ ಶಿಕ್ಷಣ ನೀಡುವ ಮುಕ್ತ ವಿಶ್ವವಿದ್ಯಾಲಯ ಇದಾಗಿದೆ. ಮೈಸೂರು ಮಹಾರಾಜ ನಾಲ್ಕನೇ ಕೃಷ್ಣರಾಜ ಒಡೆಯರ್‌ ಮತ್ತು ಜೆಮ್‌ಶೇಟ್‌ಜೀ ಟಾಟಾ ಅವರ ಸಹಕಾರದಿಂದ 1909ರಲ್ಲಿ ಆರಂಭವಾಯಿತು. ಈಗಲೂ ಇದನ್ನು “ಟಾಟಾ ಇನ್‌ಸ್ಟಿಟ್ಯೂಟ್‌’ ಎಂದು ಕರೆಯಲಾಗುತ್ತದೆ. ವಿಶ್ವದ ಅಗ್ರಸ್ಥಾನದಲ್ಲಿರುವ ವಿಶ್ವವಿದ್ಯಾಲಯ ಗಳಲ್ಲಿ ಇದೂ ಒಂದು. ಐಐಎಸ್‌ಸಿಯಲ್ಲಿ 3,700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ರಾಜ್ಯದ ಎರಡು ಕಡೆಗಳಲ್ಲಿ ಕ್ಯಾಂಪಸ್‌ ಇದ್ದು, ಪ್ರಧಾನ ಕ್ಯಾಂಪಸ್‌ ಬೆಂಗ ಳೂರು ನಗರದ ಉತ್ತರ ಭಾಗದಲ್ಲಿದೆ. ಇನ್ನೊಂದು ಕ್ಯಾಂಪಸ್‌ ಚಳ್ಳಕೆರೆಯಲ್ಲಿದೆ. ಐಐಎಸ್‌ಸಿ ವಿಶ್ವದ ಟಾಪ್‌ 10 ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡ ಮೊದಲ ವಿಶ್ವವಿದ್ಯಾಲಯ.

Advertisement

ಸಚಿವಾಲಯ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಉತ್ತಮ ಸ್ಥಾನ ಗಳಿಸಿರುವ ಸಂಸ್ಥೆಗಳಿಗೆ ಮುಂದಿನ ದಿನಗಳಲ್ಲಿ ಸ್ವಾಯತ್ತೆ, ಹೆಚ್ಚಿನ ಧನ ಸಹಾಯ ಮತ್ತು ಇತರ ನೆರವನ್ನು ನೀಡಲಾಗುತ್ತದೆ. ಈ ಬಗ್ಗೆ ಶೀಘ್ರ ನಿರ್ಧಾರ ಪ್ರಕಟಿಸಲಾಗುತ್ತದೆ.
-ಪ್ರಕಾಶ್‌ ಜಾವಡೇಕರ್‌, 
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next