Advertisement

ಸುಸ್ಥಿರ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಅಗತ್ಯ

12:48 AM Feb 24, 2020 | Lakshmi GovindaRaj |

ಬೆಂಗಳೂರು: ರಾಜ್ಯ ಅಥವಾ ದೇಶದ ಸುಸ್ಥಿರ ಅಭಿ ವೃದ್ಧಿಯ ಗುರಿ ಮುಟ್ಟಲು ಶಿಕ್ಷಣ ಸಂಸ್ಥೆಗಳ ಪಾತ್ರ ಮಹ ತ್ವದಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಸಮರ್ಥ ಭಾರತ ಸಂಘಟನೆಯು ಮಿಥಿಕ್‌ ಸೊಸೈಟಿ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಉತ್ತಮ ನಾಗು – ಉಪಕಾರಿಯಾಗು ಅಭಿಯಾನದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಭಾನುವಾರ ಮಿಥಿಕ್‌ ಸೊಸೈಟಿ ಸಭಾಂಗಣದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಶಿಕ್ಷಣ, ಸಾಮಾಜಿಕ ಸ್ಥಾನಮಾನಕ್ಕೆ ಸೀಮಿತವಾಗದೆ ಸಮಾಜ ನಿರ್ಮಾಣಕ್ಕೆ ಪೂರಕವಾಗಿರಬೇಕು. ಹಿಂದೆ ಗುರುಕುಲ ಪದ್ಧತಿಯಿದ್ದಾಗ ಪರಿಸರ, ಆಚಾರ, ವಿಚಾರಗಳ ಮೂಲಕ ಶಿಕ್ಷಣ ಪಡೆದು ಸಾಕಷ್ಟು ಜ್ಞಾನ, ತಿಳುವಳಿಕೆಯನ್ನು ಹೊಂದುತ್ತಿದ್ದರು. ಈಗ ಶಿಕ್ಷಣ ಸಂಸ್ಥೆಗಳ ಮುಖಾಂತರ ಶಿಕ್ಷಣ ಪಡೆಯುವ ವ್ಯವಸ್ಥೆ ಬಂದಿದೆ. ಸಾಕಷ್ಟು ಸೌಲಭ್ಯವಿದ್ದರೂ ವೈಯಕ್ತಿಕ ಏಳ್ಗೆಗೆ ಶಿಕ್ಷಣ ಬಳಕೆಯಾಗುತ್ತಿದೆ. ಸಮಾಜದ ಉನ್ನತಿಗೆ ಶಿಕ್ಷಣ ಉಪಯೋಗವಾಗಬೇಕು ಎಂದರು.

ವೈಯಕ್ತಿಕ ಜ್ಞಾನ ಬೆಳೆಯಬೇಕಾದರೆ ಯುವಕರು ವಿವೇಕಾನಂದರ ಆದರ್ಶವನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು. ವಿದೇಶದವರು ಭಾರತದ ಸಂಸ್ಕೃತಿ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಭಾರತದಲ್ಲಿ ಸಂಶೋಧನೆ ಮಾಡುವವರ ಸಂಖ್ಯೆ ಕಡಿಮೆಯಿದೆ. ಶಿಕ್ಷಣ ಪದವಿಗೋಸ್ಕರ ಎನ್ನುವಂತಾ ಗಿದೆ. ಶಿಕ್ಷಣ ಕೇವಲ ಸಾಮಾಜಿಕ ಸ್ಥಾನಮಾನಕ್ಕೆ ಸೀಮಿತವಾಗದೆ ಸಮಾಜ ನಿರ್ಮಾಣಕ್ಕೆ ಪೂರಕ ವಾಗಿರಬೇಕು ಎಂದು ಕಿವಿಮಾತು ಹೇಳಿದರು.

ಮಿಥಿಕ್‌ ಸೊಸೈಟಿ ಗೌರವ ಕಾರ್ಯದರ್ಶಿ ವಿ.ನಾಗರಾಜ್‌ ಮಾತನಾಡಿ, ವಿವೇಕಾನಂದರ ಜೀವನ, ಸಾಧನೆ ಮತ್ತು ಅವರು ಮಾಡಿರುವ ಕೆಲಸಗಳು ಸದಾಕಾಲಕ್ಕೂ ಪ್ರಸ್ತುತ. ಅಹಿಂಸಾತ್ಮಾಕ ಹೋರಾಟ ನಡೆಸಿದ ಗಾಂಧೀಜಿಸಹಿತವಾಗಿ ಅನೇಕ ಹೋರಾಟಗಾರರಿಗೆ ಮತ್ತು ಕ್ರಾಂತಿಕಾರರಿಗೆ ವಿವೇಕಾನಂದರೇ ಸ್ಫೂರ್ತಿ ಎಂದು ವಿವರಿಸಿದರು.

Advertisement

ಕೆಎಸ್‌ಒಯು ಕುಲಪತಿ ಡಾ.ಎಸ್‌.ವಿದ್ಯಾಶಂಕರ ಮಾತನಾಡಿ, ಭಾರತವನ್ನು ತಿಳಿದುಕೊಳ್ಳಬೇಕಾದರೆ ವಿವೇಕಾನಂದರನ್ನು ಓದಬೇಕು ಎಂದು ರವೀಂದ್ರನಾಥ್‌ ಠಾಗೋರ್‌ ಬಣ್ಣಿಸಿದ್ದರು. ಅದರಂತೆ ವಿವೇಕಾನಂದರು ದೇಶದ ಬಗ್ಗೆ ದೂರದೃಷ್ಟಿ ಹೊಂದಿದ್ದರು. ತನ್ನ ಭವಿಷ್ಯವನ್ನು ತನ್ನ ಸಾಮರ್ಥ್ಯದ ಮೂಲಕ ತಾನೇ ಕಟ್ಟಿಕೊಳ್ಳಬೇಕು ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ವಿವೇಕಾನಂದರು ಹೇಳಿದ್ದರು ಎಂದು ವಿವರಿಸಿದರು.

ಮಿಥಿಕ್‌ ಸೊಸೈಟಿ ಅಧ್ಯಕ್ಷ ಪ್ರೊ.ಕೃ.ನರಹರಿ, ಸಮರ್ಥ ಭಾರತದ ಮಾರ್ಗದರ್ಶಕರಾದ ನಾ.ತಿಪ್ಪೇಸ್ವಾಮಿ, ಟ್ರಸ್ಟಿ ರಾಜೇಶ್‌ ಪದ್ಮಾರ್‌ ಇತರರಿದ್ದರು.

30 ಪ್ರಬಂಧಗಳಿಗೆ ಸಮಾಧಾನಕರ ಬಹುಮಾನ: ಪ್ರಬಂಧ ಸ್ಪರ್ಧೆಯಲ್ಲಿ ಬೆಳಗಾವಿಯ ಕಿತ್ತೂರಿನ ವಿಜಯಾ ಪಾಟೀಲ್‌ ಪ್ರಥಮ ಸ್ಥಾನ, ಬೆಂಗಳೂರಿನ ಪೂಜಾ ಡಿ.ಎಸ್‌ ದ್ವಿತೀಯ, ತುಮಕೂರಿನ ಭಾಗ್ಯಲಕ್ಷ್ಮೀ ಬಿ.ಆರ್‌. ತೃತೀಯ ಸ್ಥಾನ ಪಡೆದಿದ್ದರು. ಸುಮಾರು 700 ಕಾಲೇಜುಗಳ 2281 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆರು ಹಂತದಲ್ಲಿ ಮೌಲ್ಯಮಾಪನ ಮಾಡಿದ ನಂತರ ವಿಜೇತರನ್ನು ಗುರುತಿಸಲಾಗಿದೆ. 30 ಪ್ರಬಂಧಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next