Advertisement

ಮುನಿಯಾಲು ಶಾಲೆಯಲ್ಲಿನ್ನು 1ರಿಂದ 12ರವರೆಗೆ ಶಿಕ್ಷಣ  

06:25 AM Jul 27, 2018 | Team Udayavani |

ಅಜೆಕಾರು: ಒಂದೇ ಸೂರಿನಡಿ 1ರಿಂದ 12ರವರೆಗೆ ಶಿಕ್ಷಣ ನೀಡುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಯೋಜನೆಗೆ ಕಾರ್ಕಳ ತಾ| ಮುನಿಯಾಲು ಪ್ರಾಥಮಿಕ ಶಾಲೆ ಆಯ್ಕೆಯಾಗಿದ್ದು, ಈ ವರ್ಷದಿಂದ ದಾಖಲಾತಿ ಶುರುವಾಗಿದೆ. 

Advertisement

ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಯಾಗದಂತೆ ಮಾಡುವ ಉದ್ದೇಶ ಇದರದ್ದು. ಈ ಯೋಜನೆಯಿಂದಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಬಳಿಕ ಪ್ರೌಢ, ಪಿಯುಸಿ ಹಂತಕ್ಕೆ ಬೇರೆ ಬೇರೆ ಶಾಲೆಗಳಿಗೆ ಹೋಗಬೇಕಿಲ್ಲ. ಒಂದೇ ಕಡೆ ಶಿಕ್ಷಣ ಪಡೆಯಲು ಅವಕಾಶವಿದೆ. 

ಮುನಿಯಾಲು ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು 500 ಮೀಟರ್‌ ವ್ಯಾಪ್ತಿಯ ಒಳಗಡೆ ಬರುತ್ತಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾರಂಭ ಮಾಡುವುದರಿಂದ ಸುಸಜ್ಜಿತ ಲ್ಯಾಬ್‌, ಗ್ರಂಥಾಲಯ, ಕ್ರೀಡಾಂಗಣ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ದೊರೆಯಲಿದೆ.
  
ದಾಖಲೆಯ ವಿದ್ಯಾರ್ಥಿಗಳು
ಸದ್ಯ ಇಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ಸೇರಿ ಮೂರೂ ವಿಭಾಗಗಳಲ್ಲಿ 773 ವಿದ್ಯಾರ್ಥಿಗಳು ವ್ಯಾಸಂಗ ಮಾಡು ತ್ತಿದ್ದು ಪ್ರಾಥಮಿಕ ಶಾಲೆಯಲ್ಲಿ 240 ವಿದ್ಯಾರ್ಥಿಗಳು, ಪ್ರೌಢ ಶಾಲೆಯಲ್ಲಿ 312 ವಿದ್ಯಾರ್ಥಿಗಳು, ಪಿಯುಸಿಯಲ್ಲಿ 221 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ನೂತನ ಯೋಜನೆಯಿಂದಾಗಿ ಪದವಿ ಪೂರ್ವ ಕಾಲೇಜಿನ ಆಡಳಿತದಡಿ ಈ ಶಾಲೆ ಬರಲಿದ್ದು ಪಿಯುಸಿಯ ಪ್ರಾಂಶುಪಾಲರು ಮುಖ್ಯಸ್ಥರಾಗಲಿದ್ದಾರೆ. 

ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ಉಪಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್‌ ತರಬೇತಿ ಸಿಗಲಿದೆ.

ಮೂಲ ಸೌಕರ್ಯಕ್ಕೆ ಪ್ರಸ್ತಾವನೆ
ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ರಾಜ್ಯದ 176 ಕಡೆಗಳಲ್ಲಿ ಪ್ರಾರಂಭಗೊಳ್ಳುತ್ತಿದ್ದು ಮುನಿಯಾಲು ಕೂಡ ಒಂದು ಇಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳ ಪಟ್ಟಿಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ಮೂರೂ ಶಾಲೆಗಳ ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಅಭಿವೃದ್ಧಿ ಸಮಿತಿ ಪದಾಧಿಕಾರಿಗಳು ಸಭೆ ನಡೆಸಿ ಪೋಷಕರ ಅಭಿಪ್ರಾಯವನ್ನು ಪಡೆದು ಯೋಜನೆಗೆ ಅಗತ್ಯವಿರುವ ಲ್ಯಾಬ್‌, ತರಗತಿ ಕೋಣೆಗಳು, ಕ್ರೀಡಾಂಗಣ, ಗ್ರಂಥಾಲಯ, ಮಕ್ಕಳ ಸಂಚಾರಕ್ಕೆ ವಾಹನದ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Advertisement

 ಸರಕಾರಕ್ಕೆ ಪ್ರಸ್ತಾವನೆ 
ಮುನಿಯಾಲು ಪಬ್ಲಿಕ್‌ ಸ್ಕೂಲ್‌ ಬಗಗೆ  ಮೂರು ಶಾಲೆಗಳು ಒಗ್ಗೂಡಿ ಶಾಲಾಭಿವೃದ್ಧಿ ಸಮಿತಿ ಸಭೆ ನಡೆಸಲಾಗಿದ್ದು ಸೂಕ್ತ ನಿರ್ಣಯ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.       
– ಬೇಬಿ ಶೆಟ್ಟಿ
ಪ್ರಾಂಶುಪಾಲರು,ಸ.ಪ.ಪೂ.ಕಾಲೇಜು ಮುನಿಯಾಲು

 ಗುಣ ಮಟ್ಟದ ಶಿಕ್ಷಣ
ಗ್ರಾಮೀಣ ಭಾಗದ ಮೂರು ದರ್ಜೆಯ ಶಿಕ್ಷಣ ಕೇಂದ್ರ ಒಂದೇ ಸೂರಿನಡಿ ತರುವ ಸರಕಾದ ಪ್ರಯತ್ನ ಶ್ಲಾಘ ನೀಯ. ಇದರಿಂದಾಗಿ ಗುಣಮಟ್ಟದ ಶಿಕ್ಷಣ ದೊರೆಯುವ ಜತೆಗೆ ಸರಕಾರಿ ಕನ್ನಡ ಶಾಲೆಗಳಿಗೆ ಮಕ್ಕಳ ಸಂಖ್ಯೆ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳು ಉಳಿಯ ಬಹುದಾಗಿದೆ.
– ಸಮೃದ್ಧಿ ಪ್ರಕಾಶ್‌ ಶೆಟ್ಟಿ,ಸಾಮಾಜಿಕ ಕಾರ್ಯಕರ್ತರು, ಮುನಿಯಾಲು

Advertisement

Udayavani is now on Telegram. Click here to join our channel and stay updated with the latest news.

Next