Advertisement

ಪಠ್ಯಪುಸ್ತಕ ವಿತರಣೆಗೆ ಶಿಕ್ಷಣ ಇಲಾಖೆ ಸಜ್ಜು

03:00 PM May 27, 2019 | Team Udayavani |

ಚಿಕ್ಕೋಡಿ: ಪ್ರಸಕ್ತ ವರ್ಷದ ಬೇಸಿಗೆ ರಜೆ ಮುಕ್ತಾಯವಾಗಿ ಇದೇ ಮೇ. 29ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಲಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಂಟು ವಲಯಗಳ ವ್ಯಾಪ್ತಿಯಲ್ಲಿರುವ ಶಾಲೆಗಳಿಗೆ ಸಲ್ಲಿಸಿದ ಪಠ್ಯಪುಸ್ತಕಗಳ ಬೇಡಿಕೆಯ ಶೇ.80.03ರಷ್ಟು ಸರಬರಾಜು ಆಗಿದ್ದು, ಶಾಲಾ ಪ್ರಾರಂಭೋತ್ಸವದ ದಿನವೇ ಮಕ್ಕಳಿಗೆ ಪಠ್ಯಪುಸ್ತಕಗಳ ವಿತರಣೆಗೆ ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ.

Advertisement

ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಂದ ಎಸ್‌ಎಟಿಎಸ್‌ ಅನ್ವಯ ಬೇಡಿಕೆ ಸಲ್ಲಿಸಲಾದ ಪ್ರಮಾಣದಲ್ಲಿ ಪಠ್ಯಪುಸ್ತಕಗಳನ್ನು ಸರಬರಾಜು ಮಾಡಲಾಗಿದ್ದು, ಇನ್ನು ಕೇವಲ ಶೇ. 20ರಷ್ಟು ಪಠ್ಯಪುಸ್ತಕಗಳ ಸರಬರಾಜು ಆಗಬೇಕಾಗಿದೆ. ಶಾಲೆ ಪ್ರಾರಂಭವಾದ ಒಂದು ವಾರದೊಳಗೆ ಎಲ್ಲ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲು ಶಿಕ್ಷಣ ಇಲಾಖೆ ಸೂಕ್ತಕ್ರಮ ಕೈಗೊಂಡಿದೆ.ಪಠ್ಯಪುಸ್ತಕ ಪೂರೈಕೆ ಎಲ್ಲೆಲ್ಲಿ, ಎಷ್ಟು: ಅಥಣಿ ವಲಯದಿಂದ 5,21,384 ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿದ್ದು, 4,38,718 ಪುಸ್ತಕಗಳು ಸರಬರಾಜು ಆಗಿವೆ. ಚಿಕ್ಕೋಡಿ ವಲಯದಿಂದ 4,01,820 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 3,54,661 ಸರಬರಾಜು ಆಗಿವೆ. ಗೋಕಾಕ ವಲಯದಿಂದ ಸಲ್ಲಿಸಲಾದ 3,78,661 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 3,22,357 ಪುಸ್ತಕಗಳು ಸರಬರಾಜು ಆಗಿವೆ. ಹುಕ್ಕೇರಿ ವಲಯದಲ್ಲಿ ಸಲ್ಲಿಸಲಾದ 4,98,661 ಬೇಡಿಕೆ ಪೈಕಿ 4,37,249 ಪುಸ್ತಕಗಳು ಸರಬರಾಜು ಆಗಿವೆ. ಕಾಗವಾಡ ವಲಯದಲ್ಲಿ 1,77,705 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 1,44,014 ಪುಸ್ತಕಗಳು ಸರಬರಾಜು ಆಗಿವೆ.

ಮೂಡಲಗಿ ವಲಯದಿಂದ 5,39,489 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 4,81,808 ಪಠ್ಯಪುಸ್ತಕಗಳು ಸರಬರಾಜು ಆಗಿವೆ. ನಿಪ್ಪಾಣಿ ವಲಯದಿಂದ 3,20,370 ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿದ್ದು, 2,43,907 ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ರಾಯಬಾಗ ವಲಯದಿಂದ 5,45,622 ಪಠ್ಯಪುಸ್ತಕಗಳ ಬೇಡಿಕೆ ಪೈಕಿ 4,78,809 ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಾಗಿದೆ. ಎಂಟೂ ವಲಯಗಳಿಂದ ಸಲ್ಲಿಸಲಾದ ಒಟ್ಟಾರೆ 33,83,712 ಪಠ್ಯಪುಸ್ತಕಗಳ ಪೈಕಿ 29,01,523 ಪಠ್ಯಪುಸ್ತಕಗಳು ಸರಬರಾಜು ಆಗಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 27,07,845 ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. ಸರಾಸರಿ 80.03ರಷ್ಟು ಪಠ್ಯಪುಸ್ತಕಗಳು ಸರಬರಾಜು ಆಗಿವೆ.

ಶಾಲಾ ಪ್ರಾರಂಭೋತ್ಸವದಂದೇ ಪುಸ್ತಕಗಳ ವಿತರಣೆ: ಮೇ 29ರಂದು ಶಿಕ್ಷಣ ಇಲಾಖೆ ವತಿಯಿಂದ ಶಾಲೆ ಪ್ರಾರಂಭೋತ್ಸವ ನಡೆಯಲಿದ್ದು, ಅಂದು ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸುವ ನಿಟ್ಟಿನಲ್ಲಿ ಆಯಾ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಸರಬರಾಜು ಮಾಡುತ್ತಿದೆ. ಗ್ರಾಮಗಳಲ್ಲಿ ಶಾಲಾ ಬಂಡಿ ಸಂಚರಿಸಲಿದ್ದು, ಮಕ್ಕಳಿಗೆ ಸಿಹಿ ಊಟ ನೀಡಲಾಗುವುದು. ಸ್ಥಳೀಯ ಜನಪ್ರತಿನಿಧಿಗಳಿಂದ ಮಕ್ಕಳಿಗೆ ಪಠ್ಯಪುಸ್ತಕ ಮತ್ತಿತರ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಗುವುದು. ಒಂದು ವಾರದಲ್ಲಿ ಸಮವಸ್ತ್ರಗಳೂ ಪೂರೈಕೆಯಾಗಲಿದ್ದು, ಅವುಗಳನ್ನೂ ಮಕ್ಕಳಿಗೆ ವಿತರಿಸಲು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ವ್ಯವಸ್ಥೆ ಕಲ್ಪಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next