ಶಿರಾ: ಎಲ್ಕೆಜಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಖರ್ಚಿಲ್ಲದೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಕೊಡಿಸಬಹುದು ಎಂಬ ರೈತ ಮತ್ತು ಬಡ ಕಾರ್ಮಿಕರ ಆಸೆಗೆ ಶಿಕ್ಷಣ ಇಲಾಖೆ ತಣ್ಣಿರೆರಚಿದೆ.
ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ 2019-20ನೇ ಸಾಲಿನ ಪ್ರವೇಶ ಪಡೆಯಲು ಸರ್ಕಾರ ಕರ್ನಾಟಕ ಪಬ್ಲಿಕ್ ಸ್ಕೂಲ್ ತರೆದಿದೆ. ಎಲ್ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಮುಂದಾಗಿರುವುದು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಸಾವಿರಾರು ರೂ. ಹಣ ನೀಡಿ ಓದಿಸಲಾಗದ ಪೋಷಕರಿಗೆ ಹರ್ಷ ಉಂಟು ಮಾಡಿತ್ತು.
30 ಮಂದಿಗೆ ಮಾತ್ರ ಪ್ರವೇಶ: ಸರ್ಕಾರಿ ಶಾಲೆ ಎಂದ ಮೇಲೆ ಯಾವುದೇ ಸೀಟ್‌ಗಳನ್ನು ನಿಗದಿ ಮಾಡದೆ ಪ್ರವೇಶ ಬಯಸಿ ಬರುವಂತ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು.
ಇದಕ್ಕೆ ತದ್ವಿರುದ್ಧ ಎಂಬಂತೆ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ತೆರೆದಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೇ 29ಕ್ಕೆ ಪ್ರವೇಶಾತಿಗೆ ಆರ್ಜಿ ಆಹ್ವಾನಿಸಿ, 30 ವಿದ್ಯಾರ್ಥಿಗಳು ಅಂದೇ ದಾಖಲಿಸಿಕೊಂಡು ಉಳಿದ ವಿದ್ಯಾರ್ಥಿಗಳಿಗೆ ಪ್ರವೇಶ ಸಾಧ್ಯವಿಲ್ಲ. ಶಿಕ್ಷಣ ಇಲಾಖೆ ಎಲ್ಕೆಜಿಗೆ 30 ಸೀಟು ನಿಗದಿ ಮಾಡಿದ್ದು, ಅಷ್ಟು ಭರ್ತಿಯಾಗಿವೆ ಎಂದು ಸೂಚನ ಫಲಕದಲ್ಲಿ ಹಾಕಿರುವುದು ಸಾರ್ವ ಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಎಲ್ಲಾ ಮಕ್ಕಳಿಗೂ ಪ್ರವೇಶ ನೀಡಿ: ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಶೈಕ್ಷಣಿಕ ಪ್ರಗತಿಗಾಗಿ ಹಾಗೂ ಬಡ ವಿದ್ಯಾರ್ಥಿಗಳು ಸಹ ಆಂಗ್ಲ ಮಾಧ್ಯಮದಲ್ಲಿ ಉಚಿತವಾಗಿ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿದ್ದು, ಯಾವುದೇ ಸೀಟುಗಳ ನಿರ್ಬಂಧ ಹೇರದೆ ಬರುವಂತ ಎಲ್ಲಾ ಮಕ್ಕಳಿಗೂ ಪ್ರವೇಶ ನೀಡುವ ಮೂಲಕ ಬಡವರ ಪಾಲಿನ ಹೂಸ ಭರವಸೆಯಾಗಿಲಿ ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.
ಮಧ್ಯಮ ವರ್ಗಕ್ಕೆ ಅನ್ಯಾಯ: ಆಂಗ್ಲ ಮಾಧ್ಯಮ ಶಾಲೆ ಸರ್ಕಾರ ತೆರೆದಿದ್ದು, ಬಡ ಪೋಷಕರಿಗೆ ಅನುಕೂಲವಾಗಿತ್ತು. ನಮ್ಮೂರ ಶಾಲೆಯಲ್ಲಿ ಎಲ್ಕೆಜಿ ಸೀಟುಗಳು ಒಂದೇ ದಿನಕ್ಕೆ ಭರ್ತಿಯಾಗಿರುವುದು ನಮ್ಮಂತ ಮಧ್ಯಮ ವರ್ಗದ ಕುಟುಂಬಗಳಿಗೆ ಅನ್ಯಾಯವಾಗಿದೆ.
ಪಬ್ಲಿಕ್ ಶಾಲೆಗೆ ಬರುವಂತ ಎಲ್ಲಾ ಮಕ್ಕಳಿಗೆ ಪ್ರವೇಶ ಸಿಗುವಂತಾದಾಗ ಮಾತ್ರ ಸರ್ಕಾರದ ಉದ್ದೇಶ ಯಶಸ್ವಿಯಾಗಲಿದೆ ಎಂದು ಕಾಮಗೊಂಡನಹಳ್ಳಿ ಮಾಳಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.