Advertisement

ಶಿಕ್ಷಣದಿಂದ ಎಲ್ಲರಲ್ಲೂ ಸಮಾನತೆ ಮೂಡಲು ಸಾಧ್ಯ

02:18 PM Dec 10, 2019 | Team Udayavani |

ಎನ್‌.ಆರ್‌.ಪುರ: ಸಮಾಜದ ಎಲ್ಲರಲ್ಲೂ ಸಮಾನತೆ ಮೂಡಬೇಕಾದರೆ ಎಲ್ಲರೂ ಶಿಕ್ಷಣ ಕಲಿಯಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ಸಲಹೆ ನೀಡಿದರು.

Advertisement

ಸೀತೂರು ಗ್ರಾಮದ ಕೆರೆಗದ್ದೆಯಲ್ಲಿ ಶೃಂಗೇರಿ ಕ್ಷೇತ್ರದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕೃಷ್ಣಪ್ಪ ಬಣ) ಆಶ್ರಯದಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ಅವರ 63ನೇ ಪರಿನಿರ್ವಾಣ ದಿನ, ಗ್ರಾಮ ಶಾಖೆ ಉದ್ಘಾಟನೆ ಹಾಗೂ ಅಂಬೇಡ್ಕರ್‌ ಭವನದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅಂಬೇಡ್ಕರ್‌ ಅವರು ಸಂವಿಧಾನ ರಚಿಸದಿದ್ದರೆ ಭಾರತ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರಲಿಲ್ಲ. ದೇಶ ಬೆಳೆಯಲು ಕೇವಲ ಉದ್ಯಮಿಗಳು ಮಾತ್ರ ಕಾರಣವಲ್ಲ. ಭಾರತದ ರೈತರು, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರ ಕೊಡುಗೆಯೂ ಇದೆ. ಕೆಲವು ವಿಕೃತ ಮನಸ್ಸಿನ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೋಸ್ಕರ ಸಂವಿಧಾನವನ್ನು ಸುಟ್ಟು ಹಾಕುವ ಮಾತನಾಡುತ್ತಾರೆ. ಇದನ್ನು ನಾನು ಖಂಡಿಸುತ್ತೇನೆ ಎಂದರು.

ಅಂಬೇಡ್ಕರ್‌, ಮಹಾತ್ಮಾ ಗಾಂಧಿ, ಸುಭಾಷ್‌ ಚಂದ್ರ ಬೋಸ್‌ ಅಂತಹವರನ್ನು ದೇವರು ಎಂದು ಪೂಜಿಸಬೇಕಾಗಿದೆ. ಭಾರತ ವಿವಿಧತೆಯಲ್ಲಿ ಏಕತೆ, ಐಕ್ಯತೆ ಕಂಡ ದೇಶ. ಎಲ್ಲಾ ಧರ್ಮದವರ ಹೋರಾಟದ ಫಲದಿಂದಲೇ ಸ್ವಾತಂತ್ರ್ಯ ಬಂದಿದೆ ಎಂದರು. ಕೆರೆಗದ್ದೆಯ ಅಂಬೇಡ್ಕರ್‌ ಭವನಕ್ಕೆ 10 ಲಕ್ಷಕ್ಕೂ ಹೆಚ್ಚು ಅನುದಾನ ನೀಡುತ್ತೇನೆ ಎಂದು ಈ ಸಂದರ್ಭದಲ್ಲಿ ಟಿ.ಡಿ.ರಾಜೇಗೌಡ ಭರವಸೆ ನೀಡಿದರು.

ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ಶೂದ್ರ ಶ್ರೀನಿವಾಸ್‌ ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿ, 1956 ರ ಡಿಸೆಂಬರ್‌ ತಿಂಗಳಲ್ಲಿ ಅಂಬೇಡ್ಕರ್‌ ನಿಧನ ಹೊಂದಿದ್ದು, ಆ ದಿನವನ್ನು ಪರಿನಿರ್ವಾಣ ದಿನವನ್ನಾಗಿ ಆಚರಿಸುತ್ತಿದ್ದೇವೆ. ಈಗಲೂ ಕೆಲವು ಗ್ರಾಮಗಳಲ್ಲಿ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವಿಲ್ಲ. ಆದರೆ, ಮೇಲ್ವರ್ಗದವರ ಜತೆ ಸಂಘರ್ಷ ಮಾಡದೆ ಎಲ್ಲರೂ ಒಟ್ಟಾಗಿ ಬಾಳ್ಳೋಣ ಎಂದರು.

Advertisement

ತಾಲೂಕು ಪಂಚಾಯ್ತಿ ಅಧ್ಯಕ್ಷೆ ಜಯಶ್ರೀಮೋಹನ್‌ ಮಾತನಾಡಿ, ಅಂಬೇಡ್ಕರ್‌ ರಚಿಸಿದ ಸಂವಿಧಾನದ ಅಡಿ ಎಲ್ಲರೂ ಬದುಕುತ್ತಿದ್ದೇವೆ. ಯಾರೂ ನಾವು ದಲಿತರು ಎಂದು ಮನಸ್ಸಿಗೆ ತೆಗೆದುಕೊಳ್ಳಬಾರದು. ಈಗ ಹಿಂದಿಗಿಂತಲೂ ಎಲ್ಲರಿಗೂ ಸಮಾನ ಅವಕಾಶ ನೀಡುತ್ತಿದ್ದೇವೆ. ಮಾಜಿ ಶಾಸಕ ಡಿ.ಎನ್‌. ಜೀವರಾಜ್‌ ಕೆರೆಗದ್ದೆಯ ಅಂಬೇಡ್ಕರ್‌ ಭವನಕ್ಕೆ 10 ಲಕ್ಷ ಮಂಜೂರು ಮಾಡಿಸಿದ್ದರು ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಆರ್‌. ಸದಾಶಿವ ಮಾತನಾಡಿ, ಡಾ| ಅಂಬೇಡ್ಕರ್‌, ನಾರಾಯಣಗುರುಗಳು ಹಿಂದುಳಿದವರಿಗೆ ಶಕ್ತಿ ತುಂಬಿದವರು. ಹಿಂದೆ ಅವರವರ ಉದ್ಯೋಗಕ್ಕೆ ಅನುಗುಣವಾಗಿ ಅವರನ್ನು ಗುರುತಿಸಿದ್ದರು. ಇದು ಮುಂದೆ ಜಾತಿಯಾಗಿ ಪರಿವರ್ತನೆಯಾಯಿತು. ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳುವ ಅಭ್ಯಾಸವನ್ನು ರಾಜಕಾರಣಿಗಳು ರೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಜಿಪಂ ಸದಸ್ಯೆ ಚಂದ್ರಮ್ಮ ಅಂಬೇಡ್ಕರ್‌ ಭಾವಚಿತ್ರ ಅನಾವರಣ ಮಾಡಿದರು. ವಾಲ್ಮೀಕಿ ಸಂಘದ ಶೃಂಗೇರಿ ಅಧ್ಯಕ್ಷ ಎ.ಸಿ.ಶ್ರೀನಿವಾಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಡಿ.ರಾಮು ಅಧ್ಯಕ್ಷತೆ ವಹಿಸಿದ್ದರು. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್‌ .ನಾಗೇಶ್‌, ಸೀತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಎನ್‌.ಪಿ.ರಮೇಶ್‌, ಉಪಾಧ್ಯಕ್ಷೆ ಸುನಂದಾ, ಪಿಸಿಎಆರ್‌ಡಿ ಬ್ಯಾಂಕ್‌ ಅಧ್ಯಕ್ಷ ಬಿ.ವಿ.ಉಪೇಂದ್ರ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಮಹೇಂದ್ರಸ್ವಾಮಿ, ಗಂಗರಾಜು, ಲತಾ, ಹನುಮಂತ, ಗಂಗಯ್ಯ, ರವಿ, ಶೇಖರ್‌, ಸೀತೂರು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಭಾನು ಪ್ರಾರ್ಥಿಸಿ, ಶಿವಕುಮಾರ್‌ ಸ್ವಾಗತಿಸಿ, ಅಭಿಷೇಕ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next