ಬೆಂಗಳೂರು: ನಮ್ಮೂರಿನ ಅಭಿವೃದ್ಧಿಯೇ ನಮ್ಮ ಪರಮ ಧ್ಯೇಯವಾಗಿದೆ… -ಇದು ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅದೆಷ್ಟೋ ವಿದ್ಯಾವಂತರ ಆಶಯ. ಗ್ರಾ.ಪಂ. ಚುನಾವಣೆಯ ದಿನಾಂಕ ನಿಗದಿಯಾಗುತ್ತಿದ್ದಂತೆ, “ಉದಯವಾಣಿ’ ಪತ್ರಿಕೆ “ಹಸನಾಗಲಿ ಹಳ್ಳಿ’ ಎಂಬ ಆಶಯದೊಂದಿಗೆ ಗ್ರಾಮ ಕಟ್ಟುವ ಕೆಲಸದಲ್ಲಿ ವಿದ್ಯಾವಂತರು ಕೈಜೋಡಿಸಲಿ ಎಂಬ ಆಶಯ ವ್ಯಕ್ತಪಡಿಸಿತ್ತು.
ಈಗ ಎರಡೂ ಹಂತಗಳ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಸಾವಿರಾರು ವಿದ್ಯಾವಂತರು ಕಣದಲ್ಲಿದ್ದಾರೆ. ನಮ್ಮಿಂದಲೇ ನಮ್ಮೂರ ಅಭಿವೃದ್ಧಿಯಾಗಲಿ ಎಂದು ಹೇಳಿಕೊಂಡಿದ್ದಾರೆ.
ನಗರದಲ್ಲಿ ಎಂಜಿನಿಯರ್ ಆಗಿದ್ದು ಕೆಲಸ ಬಿಟ್ಟು ಹಳ್ಳಿಗೆ ಹೋಗಿ ಕಣಕ್ಕಿಳಿದವರು ಕೆಲವರಾದರೆ, ಹಲವೆಡೆ ಉಪನ್ಯಾಸಕರು ಸ್ಪರ್ಧೆಗಿಳಿದಿದ್ದಾರೆ. ರಾಜಕೀಯ ಹಿನ್ನೆಲೆ ಇಲ್ಲದ ಯುವತಿಯರೂ ಇರುವುದು ವಿಶೇಷ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯುವಸಮೂಹ ಕಣಕ್ಕಿಳಿದಿದೆ ಎಂಬುದು ಜಿಲ್ಲಾ ಚುನಾವಣಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿಯಲ್ಲಿ ಸ್ಪಷ್ಟವಾಗುತ್ತದೆ.
ಕೋವಿಡ್-19ರಿಂದಾಗಿ ಅತ್ಯಂತ ಅಸಾಧಾರಣ ಮತ್ತು ಸವಾಲಿನ ಸಂದರ್ಭದಲ್ಲಿ ಈ ಬಾರಿಯ ಚುನಾವಣೆ ನಡೆಯುತ್ತಿದೆ. ಕೊರೊನಾ ಲಕ್ಷಾಂತರ ಮಂದಿಯನ್ನು ಹಳ್ಳಿಗಳತ್ತ ತೆರಳುವಂತೆ ಮಾಡಿದೆ. ಅವರು ಹಳ್ಳಿಯಲ್ಲೇ ಇದ್ದು ಬದುಕಿಗೊಂದು ನೆಲೆ ಕಂಡುಕೊಳ್ಳುವ “ಆವಿಷ್ಕಾರ’ಗಳಲ್ಲಿ ತೊಡಗಿದ್ದಾರೆ. ಅದರಲ್ಲೂ ಸೇವಾ ಮನೋಭಾವ ಹೊಂದಿರುವವರಿಗೆ ಗ್ರಾ.ಪಂ. ಚುನಾವಣೆ ಹೊಸ ಅವಕಾಶವನ್ನು ತೆರೆದಿದೆ. ವಿಶೇಷವಾಗಿ ಉನ್ನತ ಶಿಕ್ಷಣ ಪಡೆದವರು, ಟೆಕ್ಕಿಗಳ ಸಹಿತ ವಿದ್ಯಾವಂತರ ದೊಡ್ಡ ವರ್ಗವೊಂದು ಈ ಬಾರಿಯ ಗ್ರಾ.ಪಂ. ಚುನಾವಣೆಯ ಕಣಕ್ಕಿಳಿದಿದೆ.
ಇಂಥ ವಿದ್ಯಾವಂತರು ಕಣಕ್ಕಿಳಿದರೆ ಗ್ರಾಮಗಳು ಉದ್ಧಾರವಾಗಬಹುದು, ಗ್ರಾ.ಪಂ.ಗಳ ಮೂಲ ಆಶಯ ಈಡೇರಬಹುದು ಎಂಬುದು ರಾಜ್ಯ ಚುನಾವಣಾ ಆಯೋಗದ ಆಶಯವೂ ಆಗಿದೆ. ರಾಜ್ಯದ ಗ್ರಾ. ಪಂ.ಗಳಿಗೆ ಡಿ. 22 ಮತ್ತು ಡಿ. 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ವಿದ್ಯಾವಂತರು, ಅರ್ಹರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂಬುದು ಚುನಾವಣ ಅಯೋಗದ ಆಶಯ. ಅದರಂತೆ ಈ ಬಾರಿ ವಿದ್ಯಾವಂತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಮತ್ತು ಆಶಾದಾಯಕ ಬೆಳವಣಿಗೆ.
– ಡಾ| ಬಿ. ಬಸವರಾಜು, ರಾಜ್ಯ ಚುನಾವಣ ಆಯುಕ್ತ