Advertisement

ಲಾಕ್‌ಡೌನ್‌ ಪರಿಣಾಮ : ಚೇತರಿಸಿಕೊಳ್ಳಲಿ ಆರ್ಥಿಕತೆ

12:17 AM Apr 16, 2020 | Hari Prasad |

ಇಡೀ ದೇಶವೀಗ ಲಾಕ್‌ಡೌನ್‌ನಲ್ಲಿದೆ. ಏಪ್ರಿಲ್‌ 14ಕ್ಕೆ 21 ದಿನಗಳ ಲಾಕ್‌ಡೌನ್‌ ಮುಗಿಯಲಿದ್ದು, ಕೋವಿಡ್ 19 ವೈರಸ್ ವಿರುದ್ಧದ ಸಮರ ಇನ್ನೂ ದೊಡ್ಡದಿದೆ ಎನ್ನುವುದಂತೂ ಸತ್ಯ. ದೇಶದಲ್ಲಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ ದಿನೇ ದಿನೇ ಬೆಳೆಯುತ್ತಲೇ ಸಾಗಿದೆ, ಈ ಕಾರಣಕ್ಕಾಗಿಯೇ ಈಗಾಗಲೇ ಅನೇಕ ರಾಜ್ಯಸರ್ಕಾರಗಳು ತಿಂಗಳ ಅಂತ್ಯದವರೆಗೆ ಲಾಕ್‌ಡೌನ್‌ ಅವಧಿಯನ್ನು ವಿಸ್ತರಿಸಿವೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಪ್ರಧಾನಿ ಮೋದಿಯವರು ಏಪ್ರಿಲ್‌ 14ರಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಅವರೂ ಈ ನಿಟ್ಟಿನಲ್ಲೇ ಘೋಷಣೆ ಮಾಡುವ ನಿರೀಕ್ಷೆ ಇದೆ.

Advertisement

ಆದರೆ ಇದೇ ವೇಳೆಯಲ್ಲೇ ಕೆಲವು ಸವಾಲುಗಳೂ ದೇಶಕ್ಕೆ ಎದುರಾಗಿವೆ. ಈ ಬಗ್ಗೆ ಶನಿವಾರ ಮುಖ್ಯಮಂತ್ರಿಗಳೊಂದಿಗಿನ ಚರ್ಚೆಯಲ್ಲಿ ಪ್ರಧಾನಿಗಳೂ ಮಾತನಾಡಿದ್ದಾರೆ. ಆ ವಿಡಿಯೋ ಕಾನ್ಫರೆನ್ಸಿಂಗ್‌ ಅಲ್ಲಿ ಅವರು “ಜಾನ್‌ ಹೇ, ತೊ ಜಹಾನ್‌ ಹೇ'(ಜೀವವಿದ್ದರೆ ಜಗತ್ತು) ಎಂಬ ಹೇಳಿಕೆಯನ್ನು ಬದಲಿಸಿ ಜೀವವೂ ಮುಖ್ಯ, ಜಗತ್ತೂ ಮುಖ್ಯ ಎಂಬರ್ಥದ ಸಂದೇಶ ನೀಡಿದ್ದಾರೆ. ಅಂದರೆ, ದೇಶದ ಅರ್ಥವ್ಯವಸ್ಥೆಯನ್ನು, ಅದರಲ್ಲೂ ಕೃಷಿ ಸೇರಿದಂತೆ ಅನೇಕ ಆರ್ಥಿಕ ಗತಿವಿಧಿಗಳನ್ನು ಹಳಿಯೇರಿಸುವ ನಿಟ್ಟಿನಲ್ಲಿ ಅವರು ಮಾತನಾಡಿದ್ದಾರೆ ಎನ್ನುವುದು ವಿದಿತ.

21 ದಿನಗಳ ಈ ಲಾಕ್‌ಡೌನ್‌ನಲ್ಲಿ ದೇಶದ ಉತ್ಪಾದನಾ ವಲಯ ಅಜಮಾಸು ನಿಂತೇಹೋಗಿದೆ, ಕೃಷಿ ವಲಯ ಸಂಕಷ್ಟಕ್ಕೆ ಸಿಲುಕಿದೆ, ನಿರುದ್ಯೋಗ ಸಮಸ್ಯೆಯೂ ಎದುರಾಗಿದೆ. ಒಂದುವೇಳೆ ಆರ್ಥಿಕ ಚಟುವಟಿಕೆಗಳು ತ್ವರಿತವಾಗಿ ಆರಂಭವಾಗದಿದ್ದರೆ, ದೇಶದೆದುರು ಮತ್ತೂಂದು ಬೃಹತ್‌ ಸಮಸ್ಯೆ ಎದುರಾಗಿ ನಿಂತುಬಿಡುತ್ತದೆ.
ಲಾಕ್‌ಡೌನ್‌ ಸಮಯದಲ್ಲಿ ಸೋಷಿಯಲ್‌ ಡಿಸ್ಟೆನ್ಸಿಂಗ್‌ ಪಾಲನೆಯಾಗುವುದು ಎಷ್ಟು ಮುಖ್ಯವೋ, ಅದೇ ರೀತಿಯಲ್ಲಿ ಸಮಾಜದ ವಿಭಿನ್ನ ವರ್ಗಗಳ ಅವಶ್ಯಕತೆಗಳನ್ನು ಪೂರೈಸುವುದೂ ಅಷ್ಟೇ ಮುಖ್ಯ.

ಇಂಟರ್‌ನ್ಯಾಷನಲ್‌ ಲೇಬರ್‌ ಆರ್ಗನೈಸೇಷನ್‌ನ ಪ್ರಕಾರ, ಕೋವಿಡ್ 19 ವೈರಸ್ ಸಂಕಷ್ಟದಿಂದಾಗಿ ಭಾರತದ ಅಸಂಘಟಿತ ಕ್ಷೇತ್ರದ 40 ಕೋಟಿಗೂ ಅಧಿಕ ಶ್ರಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮಾರ್ಚ್‌ ಕೊನೆಯ ವಾರದ ವೇಳೆಗೆ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ, ಅನ್ಯ ರಾಜ್ಯಗಳಲ್ಲಿ ಸಿಲುಕಿರುವ ಲಕ್ಷಾಂತರ ಕೂಲಿ ಕಾರ್ಮಿಕರಲ್ಲಿ 80 ಪ್ರತಿಶತಕ್ಕಿಂತ ಹೆಚ್ಚು ಜನರ ಬಳಿ ಏಪ್ರಿಲ್‌ 14ರ ಒಳಗೆ ರೇಷನ್‌ ಖಾಲಿಯಾಗಿಬಿಟ್ಟಿರುತ್ತದೆ! ಈ ಕಾರಣಕ್ಕಾಗಿಯೇ, ರಾಜ್ಯ-ಕೇಂದ್ರ ಸರ್ಕಾರ, ಈ ಜನರಿಗೆ ಆಹಾರ ಪೂರೈಸುವುದನ್ನು ಆದ್ಯತೆಯಾಗಿಸಿಕೊಳ್ಳಬೇಕಿದೆ.

ಇದಷ್ಟೇ ಅಲ್ಲದೆ, ಸರ್ಕಾರಿ ಯೋಜನೆಗಳೆಲ್ಲ ಅರ್ಹರ ಬಳಿಗೆ ತಲುಪುತ್ತಿದೆಯೋ ಇಲ್ಲವೋ ಎನ್ನುವುದನ್ನು ಖಾತ್ರಿಪಡಿಸಬೇಕಿದೆ. ಇನ್ನು ಎಲ್ಲಕ್ಕಿಂತ ಮುಖ್ಯವಾಗಿ, ಕೃಷಿ ಕ್ಷೇತ್ರವು ಅಜಮಾಸು ನಿಲುಗಡೆಗೆ ಬಂದಿದ್ದು ಮತ್ತೆ ಕೃಷಿ ಚಟುವಟಿಕೆಗಳಿಗೆ, ಖರೀದಿ ಪ್ರಕ್ರಿಯೆಗೆ ವೇಗ ನೀಡುವ ತುರ್ತಿದೆ.

Advertisement

ಇದರೊಟ್ಟಿಗೆ, ಲಾಕ್‌ಡೌನ್‌ ಸಮಯದಲ್ಲಿ ಅಂತಾರಾಜ್ಯಗಳ ನಡುವಿನ ಆಹಾರ ಪೂರೈಕೆ ವಾಹನಗಳ ಓಡಾಟ ಇನ್ನೂ ಹೆಚ್ಚುವಂತೆ ಮಾಡಿ, ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಿದೆ.

ಟೆಸ್ಟಿಂಗ್‌ ಸಂಖ್ಯೆಯೂ ಅಧಿಕಗೊಳಿಸುವ ಅಗತ್ಯವಿದ್ದು, ಪ್ರಸಕ್ತ ದಿನಕ್ಕೆ ಸರಾಸರಿ 17000 ಟೆಸ್ಟ್‌ಗಳಾಗುತ್ತಿದ್ದು, ಇದನ್ನು ಒಂದು ಲಕ್ಷಕ್ಕೆ ವಿಸ್ತರಿಸಬೇಕಿದೆ. ಒಟ್ಟಲ್ಲಿ, ಎಲ್ಲಾ ರಾಜ್ಯಗಳೂ ಲಾಕ್‌ ಡೌನ್‌ ವಿಸ್ತರಣೆಗೆ ಸಿದ್ಧವಿವೆ ಎನ್ನುವುದಂತೂ ಸ್ಪಷ್ಟವಾಗುತ್ತಿದೆ. ಆದರೆ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರಗಳ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next