Advertisement
ಈ ವಿಚಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಆರೋಗ್ಯ ಸಂಸ್ಥೆಯ ಮೇಲೆ ಕೆಲ ದಿನಗಳಿಂದ ಆರೋಪ ಮಾಡುತ್ತಾ ಬಂದಿದ್ದರು. ಈಗ ಟ್ರಂಪ್, ಕೊರೊನಾ ಸಾಂಕ್ರಾಮಿಕ ಹರಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಬಗ್ಗೆ ತನಿಖೆಯಾಗುವವರೆಗೂ ಅಮೆರಿಕ ಈ ಸಂಸ್ಥೆಗೆ ಹಣ ಸಹಾಯ ಮಾಡುವುದಿಲ್ಲ(ತಡೆಹಿಡಿದಿದ್ದಾರೆ) ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
Related Articles
Advertisement
ಅಮೆರಿಕದಿಂದ ಹಣ ಸಹಾಯ ನಿಂತಿತು ಎಂದರೆ ನಿಸ್ಸಂಶಯವಾಗಿಯೇ ಕೋವಿಡ್ 19 ವೈರಸ್ ವಿರುದ್ಧದ ಹೋರಾಟಕ್ಕೆ ದೊಡ್ಡ ಅಡಚಣೆ ಎದುರಾಗಲಿದೆ. ಆದರೆ ಇದೇ ವೇಳೆಯಲ್ಲೇ, ವಿಶ್ವ ಆರೋಗ್ಯ ಸಂಸ್ಥೆಯಷ್ಟೇ ಅಲ್ಲದೇ, ವಿಶ್ವಸಂಸ್ಥೆಯ ವಿವಿಧ ಅಂಗಗಳಲ್ಲಿಯೂ ಚೀನದ ಅಧಿಪತ್ಯ ಅಧಿಕವಾಗುತ್ತಿದ್ದು, ಈಗಲಾದರೂ ವಿಶ್ವಸಮುದಾಯ ಒಕ್ಕೊರಲಲ್ಲಿ ಈ ಸಂಸ್ಥೆಗಳಿಗೆ ಎಚ್ಚರಿಸಲೇಬೇಕಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ ತಿಳಿದೂ ತಿಳಿದೂ ಚೀನದ ಎಡವಟ್ಟುಗಳಿಗೆ ಪರದೆ ಎಳೆಯುವ ಕೆಲಸ ಮಾಡಿದೆಯೇ ಎನ್ನುವ ಬಗ್ಗೆಯೂ ತನಿಖೆಯಾಗಬೇಕಿದೆ.
ಇಂದು ಪ್ರಪಂಚದಾದ್ಯಂತ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ 20ಲಕ್ಷಕ್ಕೂ ಅಧಿಕವಾಗಿದೆ. 1 ಲಕ್ಷಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಈ ಸಾಂಕ್ರಾಮಿಕವನ್ನು ಸೋಲಿಸುವಂಥ ಪರಿಣಾಮಕಾರಿ ದಾರಿ ಈಗಲೂ ಗೋಚರಿಸುತ್ತಿಲ್ಲ. ಅದರಲ್ಲೂ ದೊಡ್ಡಣ್ಣ ಅಮೆರಿಕದ ಪರಿಸ್ಥಿತಿಯಂತೂ ಹೀನಾಯವಾಗಿದೆ. ಅಲ್ಲಿನ ಆರ್ಥಿಕತೆ ನೆಲಕಚ್ಚುವ ಹಂತದಲ್ಲಿದೆ. ಅಲ್ಲದೇ, ಈ ವರ್ಷದಲ್ಲಿ ಅಲ್ಲಿ ಅಧ್ಯಕ್ಷೀಯ ಚುನಾವಣೆಗಳೂ ನಡೆಯಬೇಕಿದೆ.
‘ಹೀಗಾಗಿ, ಟ್ರಂಪ್ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಎಲ್ಲರತ್ತಲೂ ಬೆರಳು ತೋರಿಸುತ್ತಾ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ವಿಶ್ವ ಆರೋಗ್ಯ ಸಂಸ್ಥೆ-ಚೀನವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದಾರೆ’ ಎನ್ನುವ ಆರೋಪವೂ ಇದೆ.
ಆದರೆ, ಈ ಜಾಗತಿಕ ಸಂಸ್ಥೆಯೇನಾದರೂ ಆರಂಭದಲ್ಲೇ ಚೀನದಲ್ಲಿನ ನಿಜ ಸ್ಥಿತಿಯನ್ನು ಅವಲೋಕಿಸಿ ಜಗತ್ತಿಗೆ ಎಚ್ಚರಿಸಿದ್ದರೆ, ಇಂದು ರೋಗ ಇಷ್ಟು ತೀವ್ರತೆ ಪಡೆಯುತ್ತಿರಲಿಲ್ಲವೇನೋ. ಸತ್ಯವೇನೆಂದರೆ, ಆರಂಭಿಕ ಕೆಲವು ತಪ್ಪುಗಳ ನಂತರ ವಿಶ್ವ ಆರೋಗ್ಯ ಸಂಸ್ಥೆ ಎಚ್ಚೆತ್ತು ಈಗ ರೋಗ ನಿಯಂತ್ರಣಕ್ಕೆ ಬಹಳ ಯತ್ನಿಸುತ್ತಿದೆ.
ಹೀಗಾಗಿ, ವಿಶ್ವ ಆರೋಗ್ಯ ಸಂಸ್ಥೆಗೆ ದೇಣಿಗೆಯನ್ನು ನಿಲ್ಲಿಸುವುದರಿಂದ ಅಮೆರಿಕಕ್ಕೆ ತಾತ್ಕಾಲಿಕವಾಗಿ ಸಿಟ್ಟು ಕಡಿಮೆಯಾಗಬಹುದೇನೋ, ಆದರೆ, ಇದರಿಂದಾಗಿ ಪ್ರಪಂಚದ ಮೇಲಂತೂ ಭಾರೀ ಒತ್ತಡ ಬೀಳಲಿದೆ. ಸದ್ಯಕ್ಕೆ ಅಮೆರಿಕ ಈ ವಿಚಾರದಲ್ಲಿ ತನ್ನ ಮನಸ್ಸು ಬದಲಿಸಿಕೊಳ್ಳುವುದು ಒಳಿತು.