Advertisement

ಅಗಲಿದ ಶ್ರೇಷ್ಠ ವ್ಯಕ್ತಿತ್ವ ನಿಸಾರ್‌ ಅಹಮದ್‌

01:10 AM May 05, 2020 | Hari Prasad |

ಸಹೃದಯಿ, ಸರಳಜೀವಿ, ಅತ್ಯುತ್ತಮ ಕವಿ ಮತ್ತು ಶ್ರೇಷ್ಠ ಮನುಷ್ಯ – ಇದೆಲ್ಲವೂ ಆಗಿದ್ದವರು ನಿಸಾರ್‌ ಅಹಮದ್‌. ಅವರು ಕನ್ನಡ ಸಾಹಿತ್ಯದ ತೋಟಕ್ಕೆ ಹೊಸ ಬಗೆಯ ಗಿಡ, ಮರ, ಬಳ್ಳಿ ಮತ್ತು ಹೂವುಗಳನ್ನು ತಂದವರು. ಆ ಮೂಲಕ, ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದವರು.

Advertisement

ಶೋರೂಮ್‌ನಿಂದ ಆಗಷ್ಟೇ ತಂದದ್ದೇನೋ ಅನ್ನುವಷ್ಟು ನೀಟ್‌ ಆಗಿರುತ್ತಿದ್ದ ಕೋಟ್‌, ಅದಕ್ಕೆ ಒಪ್ಪುವ ಪ್ಯಾಂಟ್‌, ಈ ದಿರಿಸಿಗೆಂದೇ ‘ಸೃಷ್ಟಿಯಾಗಿದ್ದ’ ಟೈ, ಮಿರಮಿರ ಮಿಂಚುವ ಶೂ-ಹೆಚ್ಚಾಗಿ ಹೊರಗಿನ ಜನರಿಗೆ ನಿಸಾರ್‌ ಕಾಣಿಸುತ್ತಿದ್ದುದು ಹೀಗೆ.

ಅದನ್ನು ಕಂಡವರು, ನಿಸಾರ್‌ ಯಾವಾಗಲೂ ಕೋಟ್‌ ಹಾಕಿಕೊಂಡೇ ಇರ್ತಾರೆ, ಬೇಸಿಗೆಯಲ್ಲೂ ಕೂಡ ಅವರು ಕೋಟ್‌ ತೆಗೆಯುವುದಿಲ್ಲವಂತೆ ಹೌದಾ? ಎಂದು ಮುಗ್ಧವಾಗಿ ಕೇಳುವ ಜನರಿದ್ದರು.

ವಾಸ್ತವ ಏನೆಂದರೆ, ಸಭೆ- ಸಮಾರಂಭಗಳಿಗೆ ಬರುವಾಗೆಲ್ಲ, ಶಿಸ್ತಿನ ಸಿಪಾಯಿಯಂತೆ ಸೂಟುಧಾರಿಯಾಗಿ ನಿಸಾರ್‌ ಬರುತ್ತಿದ್ದುದು ನಿಜ. ಆದರೆ, ಉಳಿದ ಸಂದರ್ಭಗಳಲ್ಲಿ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು.

ಕಾವ್ಯ, ಪ್ರಬಂಧ, ವಿಜ್ಞಾನ ಬರಹ, ವಿಮರ್ಶೆ- ಹೀಗೆ ಎಲ್ಲಾ ಕ್ಷೇತ್ರದಲ್ಲೂ ನಿಸಾರ್‌ ಕೈಯ್ಯಾಡಿಸಿದರು. ನೂರು ಮಂದಿ ಅಹುದಹುದು ಅನ್ನುವ ಹಾಗೆ ಬರೆಯಬೇಕು ಎಂದು ಯೋಚಿಸಿದರು. ಹಾಗೆಯೇ ಬರೆದರು. ಆದರೂ ಕಾವ್ಯದಲ್ಲಿ ಸಿಕ್ಕಿದಂಥ ಯಶಸ್ಸು ಅವರಿಗೆ ಉಳಿದ ಪ್ರಕಾರಗಳಲ್ಲಿ ಸಿಗಲಿಲ್ಲ.

Advertisement

ಅದಕ್ಕಾಗಿ ನಿಸಾರ್‌ ಅವರಿಗೆ ಬೇಸರವಾಗಲಿ, ವಿಷಾದವಾಗಲಿ ಇರಲಿಲ್ಲ. ಉಳಿದವರಂತೆ ನಾನಾಗಲಿಲ್ಲ ಅನ್ನುವುದನ್ನು ಕೂಡ – ನಿಮ್ಮೊಡನಿದ್ದೂ ನಿಮ್ಮಂತಾಗದೆ ಎಂದು ಕವಿತೆಯ ಮೂಲಕವೇ ಹೇಳಿಬಿಟ್ಟರು.”ಬೆಣ್ಣೆ ಕದ್ದ ನಮ್ಮ ಕೃಷ್ಣಾ… ” ಪದ್ಯದ ಮೂಲಕ ಕವಿತೆಗೆ ಧರ್ಮದ ಹಂಗಿಲ್ಲ ಎಂದು ಸಾರಿದರು.

ಇಂಗ್ಲಿಷ್‌, ಹಿಂದಿ, ಉರ್ದು, ಪರ್ಷಿಯನ್‌- ಇವಿಷ್ಟು ಭಾಷೆಯಲ್ಲಿ ನಿಸಾರ್‌ ಅವರಿಗೆ ಪಾಂಡಿತ್ಯವಿತ್ತು. ಈ ಭಾಷೆಯಲ್ಲಿರುವ ಚೆಂದದ ಪದಗಳನ್ನು ಆಗಾಗ ಅವರು ಕನ್ನಡಕ್ಕೆ ತರುತ್ತಿದ್ದರು. ಅದುವರೆಗೂ ಎಲ್ಲೂ ಕೇಳಿರದ ಹೊಸ ಪದವೊಂದನ್ನು ಕಂಡಾಗ, ಕನ್ನಡ ಸಾಹಿತ್ಯ ಲೋಕ ಕೂಡ ಪುಳಕಗೊಳ್ಳುತ್ತಿತ್ತು.

ನಿಸಾರ್‌ ಅವರು ಈ ಪದವನ್ನು ಬಳಸಿದ್ದಾರೆ ಅಂದರೆ, ಅದಕ್ಕೆ ಒಂದು ಹಿನ್ನೆಲೆ, ಪ್ರಾಮುಖ್ಯತೆ ಇದ್ದೇ ಇರುತ್ತದೆ. ಅದರಲ್ಲಿ ಅನುಮಾನ ಬೇಡ ಎಂದು ಒಪ್ಪಿಕೊಳ್ಳುತ್ತಿತ್ತು. ತನ್ನ ಬರಹದಿಂದ ಹತ್ತು ಜನರಿಗೆ ಖುಷಿಯಾಗಿದೆ ಎಂದು ತಿಳಿದರೆ, ಮಗುವಿನಂತೆ ಸಂಭ್ರಮಿಸುತ್ತಿದ್ದರು.

ಅನನ್ಯ ಕಾವ್ಯಗಳು, ಅಪರೂಪದ ಬರಹಗಳು, ಶ್ರೇಷ್ಠ ವ್ಯಕ್ತಿತ್ವ ಮತ್ತು ಸೌಜನ್ಯ ಶೀಲ ಮಾತುಗಾರಿಕೆಯ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದ ಆ ಹಿರಿಯರ ಕಣ್ಮರೆಯಿಂದಾಗಿ, ನಾಡು ಬಡವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next