Advertisement

ಅಮೆರಿಕ –ಚೀನಾ ಜಗಳ ಸತ್ಯ ಹೊರಬರುವುದಿಲ್ಲ

01:17 AM May 05, 2020 | Hari Prasad |

ಕೋವಿಡ್ 19 ವೈರಸ್‌ ಎಲ್ಲಿಂದ ಹರಡಿತು? ವುಹಾನ್‌ನ ಪ್ರಯೋಗಾಲಯದಿಂದಲೋ ಅಥವಾ ಚೀನಾದ ಮಾಂಸ ಮಾರುಕಟ್ಟೆಯಿಂದಲೋ ಎನ್ನುವ ಬಗ್ಗೆ ಇನ್ನೂ ಚರ್ಚೆಗಳು ನಡೆದೇ ಇವೆ. ಯಾವ ದೇಶಕ್ಕೂ ಕೂಡ ಇದುವರೆಗೂ ಸ್ಪಷ್ಟ ಪುರಾವೆ ದೊರೆತಿಲ್ಲ.

Advertisement

ವಿಶ್ವ ಆರೋಗ್ಯ ಸಂಸ್ಥೆಯೂ ಸಹ, ಈ ವೈರಸ್‌ ಪ್ರಯೋಗಾಲಯದಲ್ಲಿ ಹುಟ್ಟಿಲ್ಲ ಎಂದು ಚೀನಾದ ಮಾತನ್ನೇ ಪುನರುಚ್ಚರಿಸುತ್ತಿದೆ. ಆದರೆ, ಇದರ ಹೊರತಾಗಿಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತ್ರ ಕಳೆದೊಂದು ತಿಂಗಳಿಂದ ಚೀನಾದ ಮೇಲೆ ನಿರಂತರ ದಾಳಿ ಮಾಡುತ್ತಾ ಬರುತ್ತಿರುವುದನ್ನು ನೋಡಿದರೆ, ಅವರು ಇಷ್ಟಕ್ಕೇ ನಿಲ್ಲುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಕೋವಿಡ್‌-19 ಅನ್ನು ವುಹಾನ್‌ನ ಪ್ರಯೋಗಾಲಯದಲ್ಲಿ ಸೃಷ್ಟಿಸಲಾಗಿದೆ ಎನ್ನುವುದಕ್ಕೆ ಪುರಾವೆ ಸಿಕ್ಕಿದೆ ಎಂದೇ ಹೇಳುತ್ತಿದ್ದಾರೆ ಟ್ರಂಪ್‌. ಆದಾಗ್ಯೂ ಅಮೆರಿಕ ಅಷ್ಟೇ ಅಲ್ಲದೇ, ವಿಶ್ವದ ಅನೇಕ ರಾಷ್ಟ್ರಗಳಿಗೂ ಈ ವಿಚಾರದಲ್ಲಿ ಚೀನಾದ ಬಗ್ಗೆ ಅನುಮಾನ – ಅಸಮಾಧಾನವಿದೆಯಾದರೂ, ಅವ್ಯಾವೂ ಕೂಡ ಅಮೆರಿಕದಂತೆ ನೇರಾನೇರ ಚೀನಾದ ಮೇಲೆ ದಾಳಿ ಮಾಡುತ್ತಿಲ್ಲ.

ಸತ್ಯವೇನೆಂದರೆ, ಚೀನಾವನ್ನು ಕಟಕಟೆಯಲ್ಲಿ ನಿಲ್ಲಿಸಲೇಬೇಕು ಎನ್ನುವ ಅಮೆರಿಕ ಅಧ್ಯಕ್ಷರ ಪ್ರಯತ್ನದ ಹಿಂದೆ, ಅನ್ಯ ಕಾರಣಗಳೂ ಇವೆ. ಮೊದಲನೆಯದಾಗಿ, ಕಳೆದೊಂದು ವರ್ಷದಿಂದ ಅಮೆರಿಕ – ಚೀನಾ ನಡುವೆ ನಡೆಯುತ್ತಾ ಬಂದಿರುವ ವ್ಯಾಪಾರ ಸಮರದ ಅಡ್ಡ ಪರಿಣಾಮವಿದು. ಮತ್ತು ಎರಡನೆಯದಾಗಿ ಈ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳಿದ್ದು, ಕೋವಿಡ್ 19 ಹಾವಳಿಯು ಎಲ್ಲಿ ತಮ್ಮ ಕನಸಿಗೆ ತಣ್ಣೀರು ಎರಚುತ್ತದೋ ಎಂಬ ಭಯವಂತೂ ಟ್ರಂಪ್‌ಗೆ ಇದೆ.

ಈಗಾಗಲೇ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 11 ಲಕ್ಷದ ಗಡಿ ದಾಟಿದ್ದು, ಮೃತಪಟ್ಟವರ ಸಂಖ್ಯೆ 68 ಸಾವಿರಕ್ಕೂ ಅಧಿಕವಿದೆ. ಈ ಅಪಾರ ಪ್ರಮಾಣದ ಹಾನಿಯನ್ನು ಟ್ರಂಪ್‌ ಆಡಳಿತದ ವೈಫ‌ಲ್ಯ ಎಂದೇ ಜನರು ನೋಡುತ್ತಿದ್ದಾರೆ, ಚೀನಾ ಕೂಡ ಪರೋಕ್ಷವಾಗಿ ರೋಗ ತಡೆಯುವಲ್ಲಿ ಅಮೆರಿಕದ ಅಸಾಮರ್ಥ್ಯವನ್ನು ಅಣಕಿಸುತ್ತಿದೆ.

Advertisement

ಹಾಗೆಂದು, ಟ್ರಂಪ್‌ ಆರೋಪಗಳು ಸುಳ್ಳಿರಬಹುದು ಎಂದೂ ಖಡಾಖಂಡಿತವಾಗಿ ಅಲ್ಲಗಳೆಯಲೂ ಸಾಧ್ಯವಿಲ್ಲ. ಈಗಿನ ಸಮಯದಲ್ಲಿ ಮದ್ದು-ಬಾಂಬುಗಳ ಸಂಶೋಧನೆಗೆ ತೊಡಗಿಸುವಷ್ಟೇ ಸಂಪನ್ಮೂಲವನ್ನು ಹಲವು ದೇಶಗಳು ಗುಪ್ತವಾಗಿ ಜೈವಿಕ ಅಸ್ತ್ರಗಳ ಸಂಶೋಧನೆಗೂ ತೊಡಗಿಸಿವೆ.

ಆದರೆ, ಯಾವುದೇ ದೇಶವೂ ತಾನೂ ಜೈವಿಕ ಅಸ್ತ್ರದ ಉತ್ಪಾದನೆಯಲ್ಲಿ ತೊಡಗಿದ್ದೇನೆ ಎಂದು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ, ಕೋವಿಡ್ 19 ವೈರಸ್ ನಿಜಕ್ಕೂ ಪ್ರಯೋಗಾಲಯದ ಫ‌ಲವೇ ಅಥವಾ ಮಾಂಸ ಮಾರುಕಟ್ಟೆಯಿಂದ ಹರಡಿತೇ ಎನ್ನುವ ಪ್ರಶ್ನೆಗೆ ಉತ್ತರವಂತೂ ಖಂಡಿತ ಸಿಗುವುದಿಲ್ಲ.

ಇನ್ನೊಂದೆಡೆ ಪುರಾವೆಯಿಲ್ಲದೇ ಚೀನಾದ ಮೇಲೆ ಆರೋಪ ಮಾಡುವುದೂ ಎಷ್ಟು ಸರಿ ಎನ್ನುವ ಪ್ರಶ್ನೆ ಏಳುತ್ತದೆ. ಈಗ ಟ್ರಂಪ್‌ ಚೀನಾದ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸುವ ಧಮಕಿ ಹಾಕಿದ್ದಾರೆ. ಇದರಿಂದ ಖಂಡಿತ ಚೀನಾ ಕೆರಳಲಿದೆ.

ಒಂದಂತೂ ಸತ್ಯ, ಆರಂಭದ ದಿನಗಳಲ್ಲಿ ಚೀನಾ ಕೋವಿಡ್ ಅಪಾಯವನ್ನು ಮುಚ್ಚಿಡಲು ನಡೆಸಿದ ಪ್ರಯತ್ನ, ಹಾಗೂ ಪರಿಸ್ಥಿತಿಯ ಗಾಂಭೀರ್ಯತೆಯನ್ನು ಅರಿಯದೆಯೇ ಚೀನಾದ ಮಾತನ್ನೇ ಪುನರುಚ್ಚರಿಸಿದ ವಿಶ್ವ ಆರೋಗ್ಯ ಸಂಸ್ಥೆಯ ತಪ್ಪು ಹೆಜ್ಜೆಯಿಂದಾಗಿ ಇಂದು ಇಡೀ ಜಗತ್ತೇ ತತ್ತರಿಸಿದೆ.

ಇದೇನೇ ಇದ್ದರೂ, ವಿಶ್ವದ ದೊಡ್ಡಣ್ಣನಾಗಲು ಆ ದೇಶ ಈಗ ಎಷ್ಟೇ ಪ್ರಯತ್ನಿಸಿದರೂ, ಅದರೊಂದಿಗಿನ ಅನೇಕ ರಾಷ್ಟ್ರಗಳ ಸಂಬಂಧವಂತೂ ಹದಗೆಡಲಿದೆ. ತನಗಂಟಿದ ಈ ಕಪ್ಪುಚುಕ್ಕೆಯನ್ನು ತೊಲಗಿಸಲು ಚೀನಾಕ್ಕೆ ವರ್ಷಗಳೇ ಹಿಡಿಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next