Advertisement

ಜಿಎಸ್‌ಟಿ ಅಡಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರ: ಪಾರದರ್ಶಕತೆಗೆ ಸಹಕಾರಿ

09:00 AM Oct 14, 2017 | Team Udayavani |

ಆರ್ಥಿಕತೆ ಚಟುವಟಿಕೆಗಳಿಗೆ ಅತಿ ಹೆಚ್ಚಿನ ಯೋಗದಾನ ನೀಡುವ ವಲಯಗಳಲ್ಲಿ ರಿಯಲ್‌ ಎಸ್ಟೇಟ್‌ ಕೂಡ ಸೇರಿದೆ. ಒಂದು ಅಂದಾಜಿನ ಪ್ರಕಾರ 2020ಕ್ಕಾಗುವಾಗ ಭಾರತ‌ದ ರಿಯಲ್‌ ಎಸ್ಟೇಟ್‌ ವ್ಯವಹಾರ 12 ಲಕ್ಷ ಕೋಟಿಗೇರಲಿದೆ. ಕೃಷಿಯ ಬಳಿಕ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವುದು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ. ಜಿಡಿಪಿಗೆ ಸರಾಸರಿ ಶೇ.6 ಕೊಡುಗೆ ಸಲ್ಲುತ್ತಿರುವುದು ರಿಯಲ್‌ ಎಸ್ಟೇಟ್‌ನಿಂದ. ಈ ವಲಯನ್ನು ನಂಬಿಕೊಂಡು ಸುಮಾರು 250 ಉದ್ದಿಮೆಗಳಿವೆ. ಅತಿ ಹೆಚ್ಚು ಹಣ ಹೂಡಿಕೆಯಾಗುತ್ತಿರುವುದು ಕೂಡ ರಿಯಲ್‌ ಎಸ್ಟೇಟ್‌ ವಲಯದಲ್ಲಿ. ಆದರೆ ಇದೇ ವೇಳೆ ಅತಿ ಹೆಚ್ಚು ತೆರಿಗೆ ವಂಚನೆ ನಡೆಯುತ್ತಿರುವುದು ಮತ್ತು ಪಾರದರ್ಶಕತೆಯ ಕೊರತೆಯಿರುವುದು ಕೂಡ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಎನ್ನುವ ಸತ್ಯವನ್ನು ಕೂಡ ನಾವು ಒಪ್ಪಿಕೊಳ್ಳಬೇಕು. ದೇಶದ ಆರ್ಥಿಕತೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವ ರಿಯಲ್‌ ಎಸ್ಟೇಟ್‌ ಸದ್ಯ ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದರೆ ಇದೀಗ ಸರಕಾರ ರಿಯಲ್‌ ಎಸ್ಟೇಟ್‌ಗೆ ಜಿಎಸ್‌ಟಿ ಅನ್ವಯಿಸುವ ಕುರಿತು ಚಿಂತನೆ ನಡೆಸುತ್ತಿದೆ. ಹಣಕಾಸು ಸಚಿವ ಅರುಣ್‌ ಜೇತ್ಲೀ ಗುರುವಾರ ಈ ಕುರಿತು ಸುಳಿವೊಂದನ್ನು ನೀಡಿದ್ದಾರೆ. ನ.9ರಂದು ಗುವಾಹಟಿಯಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಿಯಲ್‌ ಎಸ್ಟೇಟ್‌ ಅನ್ನು ಜಿಎಸ್ಟಿಗೆ ವ್ಯಾಪ್ತಿಗೊಳಪಡಿಸುವ ಕುರಿತು ಚರ್ಚೆ ನಡೆಯಲಿದೆ ಎಂದಿದ್ದಾರೆ ಜೇತ್ಲೀ. ಒಂದೇ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಆದರೆ ಈ ನಿಟ್ಟಿನಲ್ಲಿ ಸರಕಾರ ಮುಂದಡಿ ಇಟ್ಟಿರುವುದು ಸಕಾರಾತ್ಮಕವಾದ ನಡೆ ಎನ್ನಬಹುದು. ಜಿಎಸ್‌ಟಿ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ನಡೆಯುತ್ತಿರುವ ನಕಲಿ ವ್ಯವಹಾರಗಳಿಗೆ ಕಡಿವಾಣ ಹಾಕಿ ಈ ಕ್ಷೇತ್ರಕ್ಕೆ ತೀರಾ ಅಗತ್ಯವಾಗಿರುವ ಪಾರದರ್ಶಕತೆಯನ್ನು ತರಲಿದೆ. 

Advertisement

ಪ್ರಸ್ತುತ ರಿಯಲ್‌ ಎಸ್ಟೇಟ್‌ಗೆ ವ್ಯಾಟ್‌, ಸೇವಾ ತೆರಿಗೆ, ಅಬಕಾರಿ ಸುಂಕ, ಪ್ರವೇಶ ತೆರಿಗೆ, ನೋಂದಣಿ ಶುಲ್ಕ, ಅಕ್ಟ್ರಾಯ್‌ ಎಂದು ಹತ್ತಾರು ರೀತಿಯ ತೆರಿಗೆಗಳಿವೆ. ಅಂತೆಯೇ ಈ ತೆರಿಗೆಗಳನ್ನು ತಪ್ಪಿಸುವ ಸಲುವಾಗಿ ಬಿಲ್ಡರ್‌ಗಳು ಮತ್ತು ಕಂಟ್ರಾಕ್ಟರ್‌ಗಳು ಹತ್ತಾರು ಒಳದಾರಿಗಳನ್ನು ಕೂಡ ಕಂಡುಕೊಂಡಿದ್ದಾರೆ. ಇವೆಲ್ಲವನ್ನೂ ಮನೆ ಅಥವಾ ಸ್ತಿರಾಸ್ಥಿಯ ಅಂತಿಮ ಬೆಲೆಯಲ್ಲಿ ಸೇರಿಸಿ ಖರೀದಿದಾರನ ಮೇಲೆ ಹೊರಿಸಲಾಗುತ್ತದೆ. ಈ ಅಂತಿಮ ತೆರಿಗೆ ಹೊರೆಯ ಭಾರವನ್ನು ಕಡಿಮೆಗೊಳಿಸಲು ಜಿಎಸ್‌ಟಿ ಅನ್ವಯಿಸುವುದು ಸರಕಾರದ ಉದ್ದೇಶ. ಜಿಎಸ್‌ಟಿ ಬಂದರೆ ತೆರಿಗೆಯಲ್ಲಿ ಏಕರೂಪತೆ ಜತೆಗೆ ತೆರಿಗೆ ಪ್ರಕ್ರಿಯೆಯೂ ಸರಳಗೊಳ್ಳಲಿದೆ. ಒಟ್ಟು ತೆರಿಗೆಯಲ್ಲಿ ತುಸು ಹೆಚ್ಚಳವಾದರೂ ಸರಳೀಕರಣ ಮತ್ತು ಏಕರೂಪತೆಯಿಂದಾಗಿ ಮನೆ ಖರೀದಿಸುವವರಲ್ಲಿ ಹೆಚ್ಚು ಗೊಂದಲ ಉಂಟಾಗುವ ಸಾಧ್ಯತೆಯಿಲ್ಲ. ಅಂತೆಯೇ ಸರಕಾರದ ಬೊಕ್ಕಸಕ್ಕೂ ದೊಡ್ಡ ಮೊತ್ತದ ಕಂದಾಯ ಹರಿದು ಬರಲಿದೆ. ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ತಜ್ಞರ ಪ್ರಕಾರ ಜಿಎಸ್‌ಟಿ ಅನ್ವಯವಾದರೆ ಜಿಡಿಪಿಗೆ ರಿಯಲ್‌ ಎಸ್ಟೇಟ್‌ ವಲಯದ ಕೊಡುಗೆ ಶೇ.2ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಆರ್ಥಿಕತೆಗೆ ಉತ್ತೇಜನ ಸಿಗಲಿದ್ದು, ಆರ್ಥಿಕ ಚಟುವಟಿಕೆಗಳು ಗರಿಗೆದರಿದರೆ ರಿಯಲ್‌ ಎಸ್ಟೇಟ್‌ ಉದ್ಯಮವೂ ಚೇತರಿಸಿಕೊಳ್ಳುತ್ತದೆ. ಏಕರೂಪದ ತೆರಿಗೆ ವ್ಯವಸ್ಥೆಯಡಿ ಬಂದರೆ ನಿರ್ಮಾಣ ವೆಚ್ಚವೂ ಕಡಿಮೆಯಾಗಲಿದೆ. ಹೀಗಾಗಿ ರಿಯಲ್‌ ಎಸ್ಟೇಟ್‌ಗೆ ಜಿಎಸ್‌ಟಿ ಅನ್ವಯಿಸುವುದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. 

ಕಟ್ಟಡ ನಿರ್ಮಾಣಕ್ಕೆ ಬಳಸುವ ಅನೇಕ ವಸ್ತುಗಳು ಈಗ ಜಿಎಸ್‌ಟಿಯಡಿಯಲ್ಲಿರುವುದರಿಂದ ನಿರ್ಮಾಣ ವೆಚ್ಚ ಕಡಿಮೆಯಾಗಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಬಿಲ್ಡರ್‌ಗಳು ನಿರಾಕರಿಸುತ್ತಿದ್ದಾರೆ. ಇದಕ್ಕೆ ಕಾರಣ ಮನೆಗಳ ಬೆಲೆ ನಿರ್ಮಾಣ ವೆಚ್ಚದ ಬದಲು ಮಾರುಕಟ್ಟೆಯ ವಿವಿಧ ಅಂಶಗಳ ಮೇಲೆ ನಿರ್ಧಾರ ಆಗುತ್ತಿರುವುದು. ಉದಾಹರಣೆಗೆ-ನಗರದಲ್ಲಿ, ಗ್ರಾಮೀಣ ಭಾಗಗಳಲ್ಲಿ 1000 ಚದರ ಅಡಿ ಮನೆಯ ಬೆಲೆಯಲ್ಲಿ ಭಾರೀ ಮೊತ್ತದ ಅಂತರವಿರುತ್ತದೆ. ಆದರೆ ನಗರದ ಕೆಲವು ಹೆಚ್ಚುವರಿ ತೆರಿಗೆಗಳನ್ನು ಹೊರತುಪಡಿಸಿದರೆ ಎರಡೂ ಮನೆ ನಿರ್ಮಾಣಕ್ಕೆ ಹೆಚ್ಚು ಕಡಿಮೆ ಒಂದೇ ರೀತಿಯ ಖರ್ಚು ವೆಚ್ಚವಾಗಿರುತ್ತದೆ. ಜಿಎಸ್‌ಟಿಯಡಿಯಲ್ಲಿ ಆಯಾಯ ಪ್ರದೇಶಗಳಿಗನುಗಣವಾಗಿ ಜಿಎಸ್‌ಟಿ ದರವನ್ನು ನಿರ್ಧರಿಸಲು ಅವಕಾಶವಿರುವುದರಿಂದ ಜನರು ಈ ರೀತಿಯ ವಂಚನೆ ಗೊಳಗಾಗುವುದನ್ನು ತಪ್ಪಿಸಬಹುದು. ಮೇಲ್ನೋಟಕ್ಕೆ ಜಿಎಸ್‌ಟಿಯಿಂದ ಬಿಲ್ಡರ್‌ಗಳಿಗೆ ನಷ್ಟವಾಗುವಂತೆ ಕಾಣಿಸುತ್ತಿದೆಯಾದರೂ ವಾಸ್ತವ ಹೀಗಿರುವುದಿಲ್ಲ. ಹಲವು ರೀತಿಯ ತೆರಿಗೆಗಳು ಹೋಗುವುದರಿಂದ ಅವರಿಗೆ ಲಾಭವಾಗಲಿದೆ. ಆದರೆ ಅವರು ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ಪಾಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next