Advertisement

ಜ್ಞಾನ ಸಂಪಾದಿಸಿ ಭವಿಷ್ಯ ರೂಪಿಸಿಕೊಳ್ಳಿ

09:33 AM Jan 15, 2019 | |

ಬೀದರ: ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳಲು ದುಶ್ಚಟಗಳಿಂದ ದೂರವಿರಬೇಕು ಮತ್ತು ಪೋಷಕರ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ಹೇಳಿದರು.

Advertisement

ನಗರದಲ್ಲಿ ನಡೆದ ಗುರುನಾನಕ ಪಬ್ಲಿಕ್‌ ಶಾಲೆಯ ವಾರ್ಷಿಕೋತ್ಸವ ಸಮಾರಂದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಹೆಚ್ಚಾಗಿ ಒತ್ತು ಕೊಡಬೇಕು. ಅಲ್ಲದೆ ಆಧುನಿಕ ವಿಶ್ವದಲ್ಲಿ ಸಾಧನೆ ಮಾಡಬೇಕಾದರೆ ವಿದ್ಯಾರ್ಥಿಗಳು ಪುಸ್ತಕ ಹಾಗೂ ಆಧುನಿಕ ಎಲೆಕ್ಟ್ರಾನಿಕ್ಸ್‌ ಯಂತ್ರಗಳಿಗೂ ಮಹತ್ವ ನೀಡಬೇಕು. ಕಾಲಕ್ಕೆ ತಕ್ಕಂತೆ ಜ್ಞಾನ ಪಡೆದುಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಮಕ್ಕಳ ಓದಿಗೆ ಪಾಲಕರು ಕೂಡ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕಾರ್ಯ ಮಾಡಬೇಕು ಎಂದರು.

ಮಕ್ಕಳು ಹೆಚ್ಚು ಪುಸ್ತಕಗಳನ್ನು ಓದಿ ತಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಭವಿಷ್ಯದಲ್ಲಿ ಎಲ್ಲರೂ ಕೈ ಬಿಟ್ಟರೂ ವಿದ್ಯೆಯು ನಿಮ್ಮನ್ನು ಎಂದೂ ಕೈ ಬಿಡುವುದಿಲ್ಲ ಎಂಬುವುದನ್ನು ಮನವರಿಕೆ ಮಾಡಿಕೊಳ್ಳಬೇಕು. ಕಲಿತಿರುವ ವಿದ್ಯೆ ಸದಾ ನಿಮ್ಮನ್ನು ಕಾಪಾಡುತ್ತದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಆಯಾ ಸಂದರ್ಭ ಅನುಸಾರವಾಗಿ ಸಮಾಲೋಚನೆಗಳನ್ನು ಏರ್ಪಡಿಸಲಾಗುತ್ತಿದ್ದು, ಹೆಚ್ಚು ವಿದ್ಯಾರ್ಥಿಗಳು ಅವಕಾಶಗಳನ್ನು ಬಳಸಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ಹಿಂದಿನ ದಿನಗಳಲ್ಲಿ ನಮಗೆಲ್ಲ ಇಂತಹ ಸದಾವಕಾಶಗಳು ದೊರಕುತ್ತಿರಲಿಲ್ಲ. ಆದರೆ, ಇಂದಿನ ಯುವಕರಿಗೆ ಎಲ್ಲ ತರಹದ ಅವಕಾಶಗಳು ದೊರೆಯುತ್ತಿದ್ದು, ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಪಶು ವಿಶ್ವವಿದ್ಯಾಲಯದ ಡೀನ್‌ ಎನ್‌.ಎ. ಪಾಟೀಲ ಮಾತನಾಡಿ, ವಿಶ್ವದಲ್ಲಿ ಭಾರತ ದೇಶದ ಜನ ಸಂಖ್ಯೆ 139 ಕೋಟಿಗಳಷ್ಟಿದ್ದರೂ ಸಹ ಇತ್ತೀಚೆಗೆ ವಿಶ್ವಮಟ್ಟದ ವಿಜ್ಞಾನಿಗಳ ಸಮ್ಮೇಳನದಲ್ಲಿ ಭಾಗವಹಿಸಿದ 4000 ವಿಜ್ಞಾನಿಗಳ ಪೈಕಿ ನಮ್ಮ ದೇಶದ ವಿಜ್ಞಾನಿಗಳ ಸಂಖ್ಯೆ ಕೇವಲ 04 ಆಗಿತ್ತು. ಇದು ದುಖಃಕರ ಸಂಗತಿಯಾಗಿದೆ. ಕಾರಣ ನಮ್ಮ ದೇಶದಲ್ಲಿ ವಿಜ್ಞಾನ ಕ್ಷೇತ್ರದ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕಾಗಿದೆ. ಅಲ್ಲಿ ಅನೇಕ ಅವಕಾಶಗಳು ಕೂಡ ಇವೆ ಎಂದು ವಿವರಿಸಿದರು.

ಬೀದರ ವಿಭಾಗದ ಸಹಾಯುಕ್ತ ಶಿವಕುಮಾರ ಶೀಲವಂತ ಮಾತನಾಡಿ, ಗುರು ನಾನಕ ಪಬ್ಲಿಕ್‌ ಶಾಲೆ ಒಳ್ಳೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ಹಾಗೂ ವಿದೇಶಗಳಲ್ಲಿ ಒಳೊಳ್ಳೆ ಸಾಧನೆಗಳನ್ನು ಮಾಡತೊಡಗಿದ್ದಾರೆ. ಇಂತಹ ಗುಣಮಟ್ಟದ ಶಿಕ್ಷಣ ನಿರಂತರವಾಗಿ ಮುಂದುವರಿಯಲಿ ಎಂದರು.

Advertisement

ಇದೇ ವೇಳೆ ತೆಲಂಗಾಣದ ಡಿಐಜಿ ಸುಭಾಷ ಧಮಾಲೆ ಅವರು ಶಿಕ್ಷಣ ಸಂಸ್ಥೆಯ ಸಾಧನೆ ಹಾಗೂ ಗುಣಮಟ್ಟದ ಶಿಕ್ಷಣದ ಕುರಿತು ಮಾತನಾಡಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಡಾ| ಸರದಾರ ಬಲಬೀರ್‌ ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷೆ ರೇಷ್ಮಾ ಕೌರ, ಪ್ರಾಚಾರ್ಯ ಪವನಾ ಪ್ರಿಯಾ, ಮುಖ್ಯಗುರು ಆರಿಫ್‌ ಹಾದಿ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next