ಎಡೆನೋಯ್ಡ ಮೂಗಿನ ಹಿಂದೆ ಮತ್ತು ಗಂಟಲಿನ ಮೇಲಿನ ಭಾಗದಲ್ಲಿ ಇರುವಂತಹ ಒಂದು ಅಂಗ. ಸಣ್ಣ ಮಕ್ಕಳಲ್ಲಿ ಅದರ ಗಾತ್ರವು ಜಾಸ್ತಿಯಾಗಿರುತ್ತದೆ. ಪದೇ ಪದೇ ನೆಗಡಿ ಆಗುವುದರಿಂದ ಎಡೆನೋಯ್ಡಗೂ ಸೋಂಕು ತಗಲಿ ಅದರ ಗಾತ್ರ ಇನ್ನೂ ಜಾಸ್ತಿ ಆಗುತ್ತದೆ.
ಎಡೆನೋಯ್ಡ ದೊಡ್ಡದಾದಾಗ ಮಕ್ಕಳಲ್ಲಿ ಕೆಳಗಿನ ಲಕ್ಷಣಗಳನ್ನು ಕಾಣಬಹುದು
1. ಮೂಗು ಕಟ್ಟುವುದು, ಬಾಯಿಯಲ್ಲಿ ಉಸಿರಾಡುವುದು, ಗೊರಕೆ, ರಾತ್ರಿ ನಿದ್ದೆಯಲ್ಲಿ ಉಸಿರು ಕಟ್ಟಿದಂತಾಗಿ ಚಡಪಡಿಸುವುದು, ಒಮ್ಮೆಲೆ ಏಳುವುದು.
2. ಪದೇ ಪದೇ ಶೀತ, ಸೈನಸ್‌ನ ಸೋಂಕು, ಯಾವತ್ತು ಮೂಗಿನಲ್ಲಿ ಸಿಂಬಳ, ಮೂಗಿನಲ್ಲಿ ರಕ್ತ ಬರುವುದು.
3. ಧ್ವನಿಯಲ್ಲಿ ಬದಲಾವಣೆ.
4. ಕಿವಿನೋವು, ಕಿವಿ ಒಳಗಡೆ ಕಫ ತುಂಬುವುದು, ಕಡಿಮೆ ಕೇಳುವುದು.
5. ಮೇಲಿನ ದವಡೆಯ ಎದುರಿನ ಹಲ್ಲುಗಳು ಮುಂದೆ ಬರುವುದು, ಮುಖದ ಆಕಾರ ಕೆಡುವುದು.6. ಏಕಾಗ್ರತೆಯ ಕೊರತೆ, ರಾತ್ರಿ ಸರಿ ನಿದ್ದೆ ಇಲ್ಲದ್ದರಿಂದ ಬೆಳಗಿನ ಸಮಯ ಶಾಲೆಯಲ್ಲಿ ತೂಕಡಿಕೆ, ದೇಹಕ್ಕೆ ಬೇಕಾದಷ್ಟು ಆಮ್ಲಜನಕ ಸಿಗದಿರುವುದು, ಕಿವಿ ಸರಿಯಾಗಿ ಕೇಳದಿರುವುದು, ಪ್ರತಿ ತಿಂಗಳು ಶೀತ ಸೋಂಕಿನಿಂದ ಕಲಿಕೆ ಹಾಗೂ ಚಟುವಟಿಕೆಗಳಲ್ಲಿ ಹಿನ್ನಡೆ.
7. ಊಟ ಮಾಡುವಾಗ ಉಸಿರಾಡಲು ಕಷ್ಟ ಮತ್ತು ಪದೇಪದೇ ಸೋಂಕಿನಿಂದ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ.
ಟಾನ್ಸಿಲ್‌ಗಳ ಗಾತ್ರ ತುಂಬಾ ದೊಡ್ಡದಾದರೆ ಉಸಿರಾಟಕ್ಕೆ ತೊಂದರೆ ಆಗಿ ಗೊರಕೆ ಬರಬಹುದು, ಮಾತು, ಉಚ್ಚಾರಣೆಯಲ್ಲಿ ವ್ಯತ್ಯಾಸವಾಗಬಹುದು. ಟಾನ್ಸಿಲ್‌ಗಳಲ್ಲಿ ಪದೇ ಪದೇ ಸೋಂಕು ತಗಲುವುದರಿಂದ ಗಂಟಲು ನೋವು, ಊಟ ನುಂಗಲು ತೊಂದರೆ, ಜ್ವರ, ಸುಸ್ತು, ಬಾಯಿ ವಾಸನೆ ಮುಂತಾದ ತೊಂದರೆಗಳು ಕಾಣಿಸಿಕೊಳ್ಳಬಹುದು. ಟಾನ್ಸಿಲ್‌ಗಳ ಇಂತಹ ಸೋಂಕಿಗೆ ಸರಿಯಾದ ಚಿಕಿತ್ಸೆ ಆಗದಿದ್ದರೆ ಕೀವು ಬೇರೆ ಕಡೆಗೆ ಹರಡಿ ಕುತ್ತಿಗೆಯಲ್ಲಿ, ಗಂಟಲಿನ ಹಿಂದೆ ಕೀವು ತುಂಬುವ ಸಾಧ್ಯತೆ ಇರುತ್ತದೆ. ಸೋಂಕು ಕಿವಿಗೆ, ಹೃದಯಕ್ಕೆ, ಕಿಡ್ನಿಗಳಿಗೂ ಹರಡಿ ಅಲ್ಲಿ ತೊಂದರೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಒಂದು ಬದಿಯ ಟಾನ್ಸಿಲಿYಂತ ಇನ್ನೊಂದು ತುಂಬಾ ದೊಡ್ಡದಾಗಿದ್ದರೆ, ಅದರಲ್ಲಿ ಕ್ಯಾನ್ಸರ್ ಇರುವ ಸಾಧ್ಯತೆ ಕೂಡ ಇರುತ್ತದೆ.
ಎಡೆನೋಯ್ಡ ಮತ್ತು ಟಾನ್ಸಿಲ್ ಸಣ್ಣ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಬೇಕಾಗುವಂತಹ ಒಂದು ಅಂಗ. ಆದರೆ ಈ ಎಡೆನೋಯ್ಡ ಅಥವಾ ಟಾನ್ಸಿಲ್‌ಗಳಿಗೆ ಪದೇ ಪದೇ, ಅಂದರೆ ವರ್ಷದಲ್ಲಿ ನಾಲ್ಕರಿಂದ ಹೆಚ್ಚು ಬಾರಿ ಸೋಂಕು ತಗಲಿ, ಜ್ವರ ಬಂದು, ನೋವಾಗಿ, ಶಾಲೆಗೆ ಅಥವಾ ಕೆಲಸಕ್ಕೆ ಹೋಗಲಾರದೆ, ವರ್ಷದಲ್ಲಿ ಎರಡು ವಾರ ಅಥವಾ ಜಾಸ್ತಿ ದಿನ ರಜೆ ಹಾಕುವ ಪರಿಸ್ಥಿತಿ ಬಂದರೆ, ಅದನ್ನು ತೆಗೆಯುವುದು ವಾಸಿ. ಅದೇ ರೀತಿ ಎಡೆನೋಯ್ಡ ಮತ್ತು ಟಾನ್ಸಿಲ್‌ಗಳಲ್ಲಿ ಸೋಂಕು ಇಲ್ಲದಿದ್ದರೂ ಗಾತ್ರದಲ್ಲಿ ತುಂಬ ದೊಡ್ಡದಾಗಿ ಉಸಿರಾಡಲು ತೊಂದರೆಯಾಗುತ್ತಿದ್ದರೆ, ಗೊರಕೆ ಬರುತ್ತಿದ್ದರೆ, ಅವುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕಾಗುತ್ತದೆ. ಈ ಶಸ್ತ್ರಚಿಕಿತ್ಸೆಗಳನ್ನು ಜನರಲ್ ಅನಸ್ತೇಶಿಯಾದಲ್ಲಿ ಮಾಡುತ್ತಾರೆ.
ಎಡೆನೋಯ್ಡನ್ನು ತೆಗೆಯುವ ಶಸ್ತ್ರ ಚಿಕಿತ್ಸೆಯನ್ನು ಹಲವಾರು ವಿಧಾನಗಳಲ್ಲಿ ಮಾಡಬಹುದು. ಸಹಜವಾಗಿ ಅದನ್ನು ತೆಗೆಯುವ ಶಸ್ತ್ರಚಿಕಿತ್ಸೆಯಲ್ಲಿ, ಎಡೆನೋಯ್ಡನ್ನು ನೋಡದೆಯೇ ಬಾಯಿಯ ಮೂಲಕ, ಗಂಟಲಿನ ಮೇಲ್ಭಾಗದಿಂದ ಅದನ್ನು ತೆಗೆಯುವುದರಿಂದ ಅದರ ತುಣುಕುಗಳು ಉಳಿದು ಮತ್ತೆ ಬೆಳೆಯುವ ಸಾಧ್ಯತೆ ಇರುತ್ತದೆ, ಪಕ್ಕದ ಬೇರೆ ಅಂಗಾಂಗಳಿಗೆ ಗಾಯ ಆಗುವ ಸಾಧ್ಯತೆ ಇರುತ್ತದೆ. ಕಾಬ್ಲೇಟರ್ ಉಪಯೋಗಿಸಿ ಎಡೆನೋಯ್ಡನ ಶಸ್ತ್ರ ಚಿಕಿತ್ಸೆ ಮಾಡುವುದರಿಂದ ರಕ್ತಸ್ರಾವ ಮತ್ತು ಶಸ್ತ್ರಚಿಕಿತ್ಸೆಯ ಅನಂತರ ನೋವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಎಂಡೊಸ್ಕೋಪ್ (ಕೀ ಹೋಲ್ ಸರ್ಜರಿ) ಮೂಲಕ ನೋಡಿ ಎಡೆನೋಯxನ್ನು ಪೂರ್ತಿ ತೆಗೆಯುವುದರಿಂದ ಅದರ ತುಣುಕುಗಳು ಬಾಕಿ ಆಗಿ ಪುನಃ ಬೆಳೆಯುವ ಸಾಧ್ಯತೆ ಇರುವುದಿಲ್ಲ.
ಟಾನ್ಸಿಲ್‌ಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲು ಕೂಡ ಹಲವಾರು ವಿಧಾನಗಳಿವೆ. ಸಹಜವಾಗಿ ಮಾಡುವ ಶಸ್ತ್ರಚಿಕಿತ್ಸೆಯಲ್ಲಿ ಬಾಯಿಯ ಒಳಗಿನಿಂದ ಗಂಟಲಿನಲ್ಲಿರುವ ಟಾನ್ಸಿಲ್‌ಗಳನ್ನು ತೆಗೆಯಲಾಗುತ್ತದೆ. ಅದರಲ್ಲಿ ರಕ್ತಸ್ರಾವ ಮತ್ತು ನೋವಿನ ತೀವ್ರತೆ ಜಾಸ್ತಿಯಾಗಿರುತ್ತದೆ. ಕಾಬ್ಲೇಟರ್ ಉಪಯೋಗಿಸುವುದರಿಂದ ಈ ರಕ್ತಸ್ರಾವ ಮತ್ತು ಶಸ್ತ್ರಚಿಕಿತ್ಸಾ ನಂತರದ ನೋವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದರಿಂದಾಗಿ ಆಸ್ಪತ್ರೆಯಲ್ಲಿ ನಿಲ್ಲಬೇಕಾದ ಸಮಯ ಮತ್ತು ಅದರಿಂದ ಬರುವ ಖರ್ಚನ್ನು ಕಡಿತಗೊಳಿಸಬಹುದು.
– ಡಾ. ದೇವಿಪ್ರಸಾದ್ ಡಿ.
ಅಸೋಸಿಯೇಟ್ ಪ್ರೊಫೆಸರ್,
ಇಎನ್‌ಟಿ ವಿಭಾಗ, ಕೆಎಂಸಿ ಆಸ್ಪತ್ರೆ ಮಂಗಳೂರು