ಕೊಲ್ಕೊತ್ತಾ: ಇಲ್ಲಿನ ಈಡೆನ್ ಗಾರ್ಡನ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ ನಡೆಯುತ್ತಿರುವ ಮೊತ್ತ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯಾಟದಲ್ಲಿ ಭಾರತೀಯ ಬೌಲರ್ ಗಳ ನಿಖರ ದಾಳಿಗೆ ಅಂಜಿ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದ್ದಾರೆ. ಇದರ ಪರಿಣಾಮವಾಗಿ ಬಾಂಗ್ಲಾ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ 106 ರನ್ ಗಳಿಗೆ ಆಲೌಟಾಗಿದೆ.
ಪಿಂಕ್ ಚೆಂಡಿನ ಮೋಡಿಗೆ ಪರದಾಡಿದ ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕ ಬ್ಯಾಟ್ಸ್ ಮನ್ ಶದ್ಮಾನ್ ಇಸ್ಲಾಂ (29), ಲಿಟನ್ ದಾಸ್ (ಗಾಯಗೊಂಡು ನಿವೃತ್ತಿ 24) ಹಾಗೂ ನಯೀಮ್ ಹಸನ್ (19) ಮಾತ್ರವೇ ಎರಡಂಕೆ ಮೊತ್ತವನ್ನು ದಾಖಲಿಸಲು ಸಫಲರಾದರು. ಬಾಂಗ್ಲಾ ಬ್ಯಾಟಿಂಗ್ ಸರದಿಯಲ್ಲಿ ನಾಲ್ವರು ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದು ಭಾರತೀಯ ವೇಗಿಗಳ ಪಿಂಕ್ ಬಾಲ್ ಮೊನಚಿಗೆ ಸಾಕ್ಷಿಯಾಗಿತ್ತು.
ವೇಗಿ ಇಶಾಂತ್ ಶರ್ಮಾ ಅವರು 05 ವಿಕೆಟ್ ಪಡೆಯುವ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯಾಟದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಉಳಿದಂತೆ ಉಮೇಶ್ ಯಾದವ್ ಮತ್ತು ಮಹಮ್ಮದ್ ಶಮಿ ಕ್ರಮವಾಗಿ 03 ಮತ್ತ 02 ವಿಕೆಟ್ ಪಡೆದರು. ನಾಲ್ವರು ಬಾಂಗ್ಲಾ ಬ್ಯಾಟ್ಸ್ ಮನ್ ಗಳು ಬೌಲ್ಡ್ ಆಗಿದ್ದು ಇನ್ನಿಂಗ್ಸ್ ನ ಇನ್ನೊಂದು ವಿಶೇಷವಾಗಿತ್ತು.
ಬಾಂಗ್ಲಾದ ಸಾಧಾರಣ ಮೊತ್ತಕ್ಕೆ ಉತ್ತರವಾಗಿ ತನ್ನ ಪ್ರಥಮ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ ಈ ವರದಿ ಪ್ರಕಟವಾಗುವ ಸಮಯದವರೆಗೆ ಮಯಾಂಕ್ ಅಗರ್ವಾಲ್ (14) ಅವರ ವಿಕೆಟ್ ಕಳೆದುಕೊಂಡು 35 ರನ್ ಗಳಿಸಿ ಆಟವಾಡುತ್ತಿದೆ. ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಅವರು ಬ್ಯಾಟಿಂಗ್ ನಡೆಸುತ್ತಿದ್ದಾರೆ.
ಪ್ರಥಮ ಇನ್ನಿಂಗ್ಸ್ ನಲ್ಲಿ ಬಾಂಗ್ಲಾ ಆಟ 30.3 ಓವರ್ ಗಳಿಗೆ ಆಲೌಟ್ ಆಯ್ತು. ರಾತ್ರಿ ಬಳಿಕ ಈ ಮೈದಾನದಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಇರುವುದರಿಂದ ಎರಡನೇ ಅವಧಿಯ ಆಟ ಹೇಗೆ ಸಾಗಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳದ್ದಾಗಿದೆ.