ತಿರುವನಂತಪುರ: ಕೇರಳ ಮೂಲದ ಪ್ರಸಿದ್ಧ ಉದ್ಯಮಿ, ಜೋಯ್ ಆಲುಕ್ಕಾಸ್ ಗ್ರೂಪ್‌ನ ಎಂ.ಡಿ ಜೋಯ್ ಆಲುಕ್ಕಾಸ್ ಮೇಲೆ ಶುಕ್ರವಾರ ಇ.ಡಿ ದಾಳಿ ನಡೆಸಿದೆ. ಫೆ. 24 ರಂದು ಜೋಯ್ ಆಲುಕ್ಕಾಸ್ ಅವರ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯ ಸೆಕ್ಷನ್ 37A ಅಡಿಯಲ್ಲಿ ಬರೋಬ್ಬರಿ 305.84 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿರುವುದಾಗಿ ತಿಳಿಸಿದೆ.
ದುಬೈನಿಂದ ಹವಾಲಾ ಮೂಲಕ ದೊಡ್ಡ ಮಟ್ಟದಲ್ಲಿ ಹಣ ವರ್ಗಾಯಿಸಿದ ಮಾಹಿತಿ ಆಧರಿಸಿ ಜೋಯ್ ಆಲುಕ್ಕಾಸ್ ಮೇಲೆ ಶುಕ್ರವಾರ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಮೂಲಕ ಜಾಗತಿಕ ಚಿನ್ನಾಭರಣದ ಬೃಹತ್ ಸಂಸ್ಥೆ ಸೆಕ್ಷನ್ 4ನ್ನು ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ದುಬೈನಲ್ಲಿರುವ ಜೋಯ್ ಆಲುಕ್ಕಾಸ್ ವರ್ಗೀಸ್ ಅವರ ಜೋಯ್ ಆಲುಕ್ಕಾಸ್ ಜುವೆಲ್ಲರಿಯಲ್ಲಿ ಹೂಡಿಕೆ ಮಾಡಲಾಗಿತ್ತು ಎಂದೂ ಮಾಹಿತಿ ನೀಡಿದ್ಧಾರೆ.
ಈ ಆರೋಪಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳು, ಜೋಯ್ ಆಲುಕ್ಕಾಸ್ ಅವರಿಗೆ ಸಂಬಂಧಿಸಿದ ಬರೋಬ್ಬರಿ 305.84 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ. ಅದರಲ್ಲಿ 81.54ಕೋಟಿ ಮೌಲ್ಯದ 33 ಸ್ಥಿರಾಸ್ಥಿ, 3 ಬ್ಯಾಂಕ್ ಅಕೌಂಟ್‌ಗಳು ಮತ್ತು ಜೋಯ್ ಆಲುಕ್ಕಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ 217.81 ಕೋಟಿ ಮೌಲ್ಯದ ಶೇರುಗಳೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಯಾರು ಈ ಜೋಯ್ ಆಲುಕ್ಕಾಸ್ ?
ಕೇರಳ ಮೂಲದ ಉದ್ಯಮಿಯಾಗಿರುವ ಜೋಯ್ ಆಲುಕ್ಕಾಸ್, ಜೋಯ್ ಆಲುಕ್ಕಾಸ್ ಗ್ರೂಪ್‌ನ ಮುಖ್ಯಸ್ಥರಾಗಿದ್ಧಾರೆ. ಅವರ ತಂದೆ, ಸ್ವರ್ಣೋದ್ಯಮಿ ವರ್ಗೀಸ್ ಆಲುಕ್ಕಾಸ್ 1956ರಲ್ಲಿ ಕೇರಳದಲ್ಲಿ ತಮ್ಮ ಮೊದಲ ಸ್ವರ್ಣ ಮಳಿಗೆಯನ್ನು ಸ್ಥಾಪಿಸಿದ್ದರು. ಆ ಬಳಿಕ ಅವರ ಕುಟುಂಬ ಹಿಂದಿರುಗಿ ನೋಡಿದ್ಧೇ ಇಲ್ಲ. ಈಗ ಜೋಯ್ ಆಲುಕ್ಕಾಸ್ ಜ್ಯುವೆಲ್ಲರ್ಸ್ ಕೇರಳದ ತ್ರಿಶ್ಶೂರ್ ಮತ್ತು ದುಬೈನಲ್ಲಿ ತಮ್ಮ ಕಛೇರಿಗಳನ್ನು ಹೊಂದಿದ್ದು ಭಾರತದಾದ್ಯಂತ ಸುಮಾರು 85 ಚಿನ್ನಾಭರಣ ಮಳಿಗೆ, ವಿದೇಶಗಳಲ್ಲಿ ಸುಮಾರು 45 ಮಳಿಗೆಗಳನ್ನು ಹೊಂದಿದೆ. ಅದಲ್ಲದೇ, ಜೋಯ್ ಆಲುಕ್ಕಾಸ್, ಫಾರೆವರ್ ಮಾರ್ಕ್ ಹೊಂದಿರುವ ವಜ್ರಗಳ ಮಾರಾಟದಲ್ಲಿಯೂ ಹೆಸರುವಾಸಿಯಾಗಿದೆ.
ಫೋರ್ಬ್ಸ್‌ನ ಪ್ರಕಾರ ಜೋಯ್ ಆಲುಕ್ಕಾಸ್ ಅವರ ಆಸ್ತಿ ಸುಮಾರು 25,000 ಕೋಟಿ ರೂಪಾಯಿಗಳಾಗಿದ್ದು 2022 ರ ವರದಿಯ ಪ್ರಕಾರ ಜೋಯ್ ಆಲುಕ್ಕಾಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ 69 ಸ್ಥಾನದಲ್ಲಿದ್ದಾರೆ. ಅವರು 1987ರಲ್ಲಿ ಅಬುಧಾಬಿಯಲ್ಲಿ ತಮ್ಮ ಮೊದಲ ವಿದೇಶೀ ಮಳಿಗೆಯನ್ನು ತೆರೆದಿದ್ದರು. 2007ರಲ್ಲಿ ಅವರು ಚೆನ್ನೈನಲ್ಲಿ ವಿಶ್ವದ ಅತ್ಯಂತ ದೊಡ್ಡ ಸ್ವರ್ಣಾಭರಣ ಮಳಿಗೆ ಪ್ರಾರಂಭಿಸಿದ್ಧಾರೆ. ಕೇವಲ ಜುವೆಲ್ಲರಿಯಷ್ಟೇ ಅಲ್ಲದೇ ಮಾಲ್‌ಗಳು, ರಿಯಲ್ ಎಸ್ಟೇಟ್ ಜೊತೆಗೆ ಹಣ ವರ್ಗಾವಣೆ ಕ್ಷೇತ್ರದಲ್ಲೂ ಪ್ರಸಿದ್ಧರಾಗಿದ್ದಾರೆ. ಅವರ ಮಾಲ್ ಆಫ್ ಜೋಯ್, ಜೋಲಿ ಸಿಲ್ಕ್ಸ್, ಜೋಯಾಲುಕ್ಕಾಸ್ ಎಕ್ಸ್‌ಚೇಂಜ್, ಜೋಯಾಲುಕ್ಕಾಸ್ ಡೆವಲಪರ್ಸ್ ಸಂಸ್ಥೆಗಳು ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ತಮ್ಮ ಕಛೇರಿಗಳನ್ನು ಹೊಂದಿದೆ. ಅವರ ಪುತ್ರ ಜಾನ್ ಪೌಲ್ ವಿದೇಶಿ ಸ್ವರ್ಣಾಭರಣ ಮಳಿಗೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.