ರಾಂಚಿ : ರೈಲ್ವೆ ಹೊಟೇಲ್ ಅಲಾಟ್‌ಮೆಂಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಇಂದು ಗುರುವಾರ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಣ ದುರುಪಯೋಗದ ಕೇಸನ್ನು ದಾಖಲಿಸಿಕೊಂಡಿದ್ದು ಇದು ಆರ್‌ಜೆಡಿಗೆ ಒದಗಿರುವ ಭಾರೀ ದೊಡ್ಡ ಹೊಡೆತವೆಂದು ತಿಳಿಯಲಾಗಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಆಡಳಿತೆಯ ವೇಳೆ ನಡೆದಿರುವ ಭ್ರಷ್ಟಾಚಾರದ ಪ್ರಕರಣ ಇದಾಗಿದೆ ಎಂದು ಪಿಟಿಐ ಹೇಳಿದೆ.
ಬಿಹಾರದಲ್ಲಿನ ಮಹಾ ಘಟ ಬಂಧನದ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ನಿನ್ನೆ ಬುಧವಾರ ಹಠಾತ್ ರಾಜೀನಾಮೆ ನೀಡಿ ಇಂದು ಗುರುವಾರ ಜೆಡಿಯು-ಬಿಜೆಪಿ ಮೈತ್ರಿಕೂಟದ ನೂತನ ಸರಕಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ಲಾಲು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಜಾರಿ ನಿರ್ದೇಶನಾಲಯ ಭ್ರಷ್ಟಾಚಾರದ ಕೇಸನ್ನು ದಾಖಲಿಸಿಕೊಂಡಿರುವುದು ಕಾಕತಾಳೀಯವಾಗಿದೆ.
“ನನ್ನ ಹಾಗೂ ನನ್ನ ಕುಟುಂಬ ಸದಸ್ಯರ ವಿರುದ್ಧ ಭ್ರಷ್ಟಾಚಾರ ಕೇಸುಗಳನ್ನು ದಾಖಲಿಸುವಂತೆ ಮಾಡುವಲ್ಲಿ ಮತ್ತು ಸ್ವಂತ ಲಾಭದಾಸೆಗಾಗಿ ನಿತೀಶ್ ಕುಮಾರ್ ಅವರು ಬಿಜೆಪಿ ಜತೆ ಕೈಜೋಡಿಸಿದ್ದಾರೆ ಎಂದು ಕೋಪೋದ್ರಿಕ್ತ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ.
“ನಿತೀಶ್ ಕುಮಾರ್ ಅವರು ಬಿಹಾರದ ಜನರಿಗೆ ದ್ರೋಹ ಬಗೆದಿದ್ದರೆ. ಸಿಬಿಐ ನನ್ನ ಮತ್ತು ನನ್ನ ಕುಟುಂಬ ಸದಸ್ಯರ ವಿರುದ್ಧ ಭ್ರಷ್ಟಾಚಾರದ ಕೇಸುಗಳನ್ನು ಹಾಕುವುದಕ್ಕೆ ನಿತೀಶ್ ಬಿಜೆಪಿ ಜತೆ ಸೇರಿಕೊಂಡಿದ್ದಾರೆ’ ಎಂದು ಲಾಲು ಆರೋಪಿಸಿದರು.