ಹೊಸದಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ದ ಮುಖ್ಯಸ್ಥ, ಪದಾಧಿಕಾರಿಗಳು ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕರ್ನಾಟಕ ಸೇರಿದಂತೆ 9 ರಾಜ್ಯಗಳ ಒಟ್ಟು 26 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಪ್ರಿವೆನ್ಶನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್ ಪ್ರಕಾರ ಈ ದಾಳಿ ನಡೆಸಲಾಗಿದೆ. ಪಿಎಫ್ ಐ ಮುಖ್ಯಸ್ಥ ಒಎಂಎ ಸಲಾಮ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸರುದ್ದೀನ್ ಎಲಮರಂ ಮನೆಗಳ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ನಟಿ ಭಾರತಿ ಸಿಂಗ್ ಬೇಲ್ ಗೆ ನೆರವು: ಇಬ್ಬರು ಎನ್ ಸಿಬಿ ಅಧಿಕಾರಿಗಳು ಅಮಾನತು!
ಕೇರಳದ ಕೊಚ್ಚಿ, ಮಲಪ್ಪುರಂ ಮತ್ತು ತಿರುವನಂತಪುರಂ ಸೇರಿದಂತೆ ಆರು ಸ್ಥಳಗಳು, ತಮಿಳುನಾಡಿನಲ್ಲಿ ಐದು (ತೆಂಕಸಿ, ಮಧುರೈ ಮತ್ತು ಚೆನ್ನೈ), ಪಶ್ಚಿಮ ಬಂಗಾಳದಲ್ಲಿ ಎರಡು (ಕೋಲ್ಕತಾ ಮತ್ತು ಮುರ್ಷಿದಾಬಾದ್), ಕರ್ನಾಟಕದ ಬೆಂಗಳೂರು, ದೆಹಲಿಯ ಶಾಹೀನ್ ಬಾಗ್, ಉತ್ತರ ಪ್ರದೇಶದ ಲಕ್ನೋ ಮತ್ತು ಬರಾಬಂಕಿ, ಬಿಹಾರದ ದರ್ಭಂಗಾ ಮತ್ತು ಪೂರ್ಣಿಯಾ, ಮಹಾರಾಷ್ಟ್ರದ ಔರಂಗಾಬಾದ್, ಮತ್ತು ರಾಜಸ್ಥಾನದ ಜೈಪುರದಲ್ಲಿ ಇ.ಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಪಿಎಫ್ ಐ ಸಂಘಟನೆಯ ಮುಖ್ಯಸ್ಥ ಮತ್ತು ಆರು ಜನರ ಮೇಲೆ ಈಗಾಗಲೇ ಕೇಸು ದಾಖಲಿಸಲಾಗಿದೆ. ದೆಹಲಿಯಲ್ಲಿ ಸಿಎಎ ವಿರುದ್ಧ ನಡೆದ ಹೋರಾಟದಲ್ಲಿ ಗಲಭೆ ನಡೆಸಲು ಪಿಎಫ್ ಐ ಹಣ ವರ್ಗಾವಣೆ ಮಾಡಿತ್ತು ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.