Advertisement

ಡಿಕೆಶಿಗೆ ಸಮನ್ಸ್ ನೀಡಿದ ಇಡಿ ಅಧಿಕಾರಿಗಳು

09:54 AM Aug 30, 2019 | sudhir |

ಬೆಂಗಳೂರು: ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ (ಇಡಿ) ಜಾರಿಗೊಳಿಸಿದ್ದ ಸಮನ್ಸ್‌ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ. ಇದರೊಂದಿಗೆ ಶಿವಕುಮಾರ್‌ ಬಂಧನದ ಭೀತಿ ಎದುರಿಸುತ್ತಿದ್ದಾರೆ.

Advertisement

ಆದಾಯ ತೆರಿಗೆ ಇಲಾಖೆಯ (ಐಟಿ) ದಾಳಿ ವೇಳೆ ದಿಲ್ಲಿಯ ಮನೆಗಳಲ್ಲಿ ಸಿಕ್ಕಿದ್ದ ಬೇನಾಮಿ ಹಣ ಹಾಗೂ ಆಸ್ತಿಗಳ ದಾಖಲೆಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್‌ ಜಾರಿಗೊಳಿಸಿತ್ತು. ಇದೇ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್‌ ಅವರ ಆಪ್ತರೆನ್ನಲಾದ ಇತರ ಆರೋಪಿಗಳಾದ ಸಚಿನ್‌ ನಾರಾಯಣ, ಸುನಿಲ್‌ ಕುಮಾರ್‌ ಶರ್ಮಾ, ಆಂಜನೇಯ ಹನುಮಂತಯ್ಯ ಹಾಗೂ ರಾಜೇಂದ್ರ ಅವರ ಅರ್ಜಿಗಳನ್ನೂ ಹೈಕೋರ್ಟ್‌ ವಜಾಗೊಳಿಸಿದೆ.

ಶಿವಕುಮಾರ್‌ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿ ಗುರುವಾರ ತೀರ್ಪು ಪ್ರಕಟಿಸಿದ ನ್ಯಾ| ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಎಲ್ಲ ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ “ಇಸಿಐಆರ್‌’ (ಜಾರಿ ಪ್ರಕರಣ ತನಿಖಾ ವರದಿ) ದಾಖಲಿಸಿಕೊಂಡಿದೆ.

ಇದೊಂದು ತನಿಖೆಗೆ ಯೋಗ್ಯವಾದ ಪ್ರಕರಣವಾಗಿದೆ. ಅಲ್ಲದೆ ಆದಾಯ ತೆರಿಗೆ ಪ್ರಧಾನ ನಿರ್ದೇಶಕರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾರೆ. ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವುದು ಅಥವಾ
ಸಮನ್ಸ್‌ಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ಮಾನ್ಯ ಮಾಡುವುದು ಸಮರ್ಥನೀಯವಲ್ಲ. ಹಾಗಾಗಿ ಅರ್ಜಿಗಳನ್ನು ವಜಾ ಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

Advertisement

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಯಾವಾಗ, ಎಲ್ಲಿಗೆ ವಿಚಾರಣೆಗೆ ಕರೆದರೂ ನಾನು ಹಾಜರಾಗುತ್ತೇನೆ. ಉಳಿದ ವಿಚಾರಗಳನ್ನು ನಾಳೆ ಮಾತನಾಡುತ್ತೇನೆ.
-ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next