ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಎರಡು ಬಾರಿ ಸಮನ್ಸ್ ತಪ್ಪಿಸಿದ ಹಿನ್ನೆಲೆಯಲ್ಲಿ ಮುಂಬೈನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಭಾನುವಾರ ಶೋಧ ನಡೆಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಉಲ್ಲೇಖಿಸಿ ಸಮನ್ಸ್ ತಪ್ಪಿಸಿಕೊಂಡಿದ್ದ ರಾವತ್ ರನ್ನು ನಂತರ ಜುಲೈ 27 ರಂದು ತನಿಖಾ ಸಂಸ್ಥೆಯು ಕರೆಸಿತ್ತು.
ರವಿವಾರ ಬೆಳಿಗ್ಗೆ 7 ಗಂಟೆಗೆ, ತನಿಖಾ ಸಂಸ್ಥೆ ತಂಡವು ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಮುಂಬೈನ ಪೂರ್ವ ಉಪನಗರದಲ್ಲಿರುವ ಬಂಡಪ್‌ನಲ್ಲಿರುವ ಸಂಜಯ್ ರಾವತ್ ಅವರ ಮನೆಗೆ ದಾಳಿ ಮಾಡಿ ಶೋಧ ನಡೆಸಿತು.
ಹಣಕಾಸು ವರ್ಗಾವಣೆ ಸಂಬಂಧಿತ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಂಜಯ್ ರಾವತ್ ರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪ್ರಶ್ನಿಸಲು ಬಯಸಿದ್ದಾರೆ. ಉದ್ಧವ್ ಠಾಕ್ರೆ ಶಿಬಿರದಲ್ಲಿರುವ ಶಿವಸೇನೆ ಸಂಸದ ಸಂಜಯ್ ರಾವುತ್ ಈ ಆರೋಪವನ್ನು ನಿರಾಕರಿಸಿದ್ದು, ರಾಜಕೀಯ ದ್ವೇಷದ ಕಾರಣ ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಸುರತ್ಕಲ್ ಫಾಝಿಲ್ ಕೊಲೆ ಪ್ರಕರಣ: ಕೃತ್ಯಕ್ಕೆ ಬಳಸಿದ ಕಾರು ಚಾಲಕನ ಬಂಧನ
“ಸುಳ್ಳು ಕ್ರಮ, ಸುಳ್ಳು ಸಾಕ್ಷಿ.. ನಾನು ಶಿವಸೇನೆಯನ್ನು ಬಿಡುವುದಿಲ್ಲ.. ನಾನು ಸತ್ತರೂ ಶರಣಾಗುವುದಿಲ್ಲ.. ನನಗೂ ಯಾವುದೇ ಹಗರಣಕ್ಕೂ ಸಂಬಂಧವಿಲ್ಲ ಎಂದು ಶಿವಸೇನೆಯ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಆಣೆಯಾಗಿ ಹೇಳುತ್ತೇನೆ. ಬಾಳಾ ಸಾಹೇಬರು ನಮಗೆ ಹೋರಾಡಲು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ” ಎಂದು ಇಡಿ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದ ಸ್ವಲ್ಪ ಸಮಯದ ನಂತರ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.