ಹೊಸದಿಲ್ಲಿ: ದೇಶದ ಅತೀ ದೊಡ್ಡ ಹವಾಲಾ ಜಾಲವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆರು ದೇಶಗಳಿಗೆ ಬೇಕಾಗಿರುವ ನರೇಶ್ ಕುಮಾರ್ ಜೈನ್ ನನ್ನು ಈಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಮೇರಿಕಾ, ಯುಕೆ, ಇಟಲಿ, ಸ್ಪೇನ್, ನೆದರ್ಲ್ಯಾಂಡ್ ಮತ್ತು ಯುಎಇ ದೇಶಗಳಲ್ಲಿ ಈ ನರೇಶ್ ಕುಮಾರ್ ಜೈನ್ ವಾಂಟೆಡ್ ಲಿಸ್ಟ್ ನಲ್ಲಿದ್ದ. ಭೂಗತ ಪಾತಕಿಗಳು, ಉದ್ಯಮಿಗಳು, ಡ್ರಗ್ ಮಾಫಿಯಾ ಸೇರಿದಂತೆ ಹಲವರಿಗಾಗಿ ಕಳೆದ ಐದು ವರ್ಷಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಹವಾಲಾ ಮೂಲಕ ಸರಬರಾಜು ಮಾಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವೈಯಕ್ತಿಕ ವೆಬ್ ಸೈಟ್ ನ ಟ್ವಿಟ್ಟರ್ ಖಾತೆ ಹ್ಯಾಕ್ !
ಹಣವನ್ನು ಅಕ್ರಮವಾಗಿ ಸಾಗಿಸಲು ನರೇಶ್ ಕುಮಾರ್ ಜೈನ್ ಬಳಸಿದ 942 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಮತ್ತು 554 ಶೆಲ್ ಕಂಪನಿಗಳನ್ನು ಈಡಿ ಗುರುತಿಸಿದೆ. ಹಾಂಗ್ ಕಾಂಗ್, ದುಬೈ ಮತ್ತು ಸಿಂಗಾಪುರದಲ್ಲಿ ಭಾರಿ ವ್ಯವಹಾರ ಮಾಡಿದ್ದು, ಜೈನ್ ಬಳಸಿದ ಕನಿಷ್ಠ 337 ವಿದೇಶಿ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಲಾಗಿದೆ.
ಹರ್ಯಾಣದ ಪಾಣಿಪತ್ ಮೂಲದವನಾಗಿರುವ 61 ವರ್ಷದ ನರೇಶ್ ಕುಮಾರ್ ಜೈನ್, 1995ರಲ್ಲಿ ಭಾರತ ಬಿಟ್ಟು ಪರಾರಿಯಾಗಿದ್ದ. 2009ರ ಮೇ ವರೆಗೆ ದುಬೈನಲ್ಲಿದ್ದ ಈತ ಅಲ್ಲಿ ಕುಮಾರ್ ಟ್ರೇಡಿಂಗ್ ಕಂಪೆನಿ ಮಾಡಿಕೊಂಡಿದ್ದ. ನಂತರ ಹವಾಲಾ ದಂಧೆಯಲ್ಲಿ ತೊಡಗಿದ್ದ ಈತನ ಜಾಲ ಯೂರೋಪ್ ಮತ್ತು ಆಫ್ರಿಕನ್ ದೇಶಗಳಲ್ಲೂ ಹಬ್ಬಿತ್ತು.