ನವದೆಹಲಿ: ಪ್ರಸಿದ್ಧ ತಾಜ್ ಮಹಲ್ ನೊಳಗೆ “ಪವಿತ್ರ ಸಾವನ್ “(ಶ್ರಾವಣ ಮಾಸ)ತಿಂಗಳ ಪ್ರತಿ ಸೋಮವಾರ ಆರತಿ ಮೂಲಕ ಪೂಜೆ ನಡೆಸುವುದಾಗಿ ಶಿವಸೇನೆ ಬೆದರಿಕೆ ಹಾಕಿದ ನಿಟ್ಟಿನಲ್ಲಿ ತಾಜ್ ಮಹಲ್ ಗೆ ಮತ್ತಷ್ಟು ಬಿಗಿ ಬಂದೋಬಸ್ತ್ ಏರ್ಪಡಿಲಾಗಿದೆ.
ಶಿವಸೇನಾದ ಬೆದರಿಕೆಯ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಗೆ ಕ್ರಮಕೈಗೊಳ್ಳಬೇಕೆಂದು ಭಾರತೀಯ ಪುರಾತತ್ವ ಇಲಾಖೆ ಮನವಿ ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಆಗ್ರಾ ಜಿಲ್ಲಾಡಳಿತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿರುವುದಾಗಿ ವರದಿ ತಿಳಿಸಿದೆ.
ಯಾವುದೇ ವಿಧದ ಧಾರ್ಮಿಕ ಆಚರಣೆ, ಸಂಪ್ರದಾಯ ಸ್ಮಾರಕದೊಳಗೆ ನಡೆಸುವುದು 1958ರ ಪುರಾತನ ಸ್ಮಾರಕ ಮತ್ತು ಪುರಾತತ್ವ ಸ್ಥಳದ ಕಾಯ್ದೆಯನ್ನು ಉಲ್ಲಂಘಿಸಿದಂತೆ. ಹೀಗಾಗಿ ಯಾವುದೇ ರೀತಿಯ ಸಂಪ್ರದಾಯ, ಪೂಜೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಆಗ್ರಾ ಜಿಲ್ಲಾಡಳಿತಕ್ಕೆ ಬರೆದ ಪತ್ರದಲ್ಲಿ ವಿವರಿಸಿದೆ.
ತಾಜ್ ಮಹಲ್ ನೊಳಗೆ ಪೂಜೆ ನಡೆಸುತ್ತೇನೆ, ಸಾಧ್ಯವಾದರೆ ನನ್ನ ತಡೆಯಿರಿ ಎಂದು ಜುಲೈ 17ರಂದು ಆಗ್ರಾ ಶಿವಸೇನಾದ ಅಧ್ಯಕ್ಷ ವೀನು ಲಾವಣಿಯಾ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಸವಾಲು ಹಾಕಿದ್ದರು.
ತಾಜ್ ಮಹಲ್ ನಿಜಕ್ಕೂ ತೇಜೋ ಮಹಾಲಯ, ಇದು ಶಿವನ ದೇವಾಲಯವಾಗಿದೆ. ಹೀಗಾಗಿ ಪ್ರತಿ ಸೋಮವಾರ ನಾವು ತಾಜ್ ಮಹಲ್ ನೊಳಗೆ ಆರತಿಯನ್ನು ಬೆಳಗಿಸುವುದಾಗಿ ವೀನು ತಿಳಿಸಿದ್ದರು.