ಕ್ವಿಟೋ(ಈಕ್ವೆಡಾರ್): ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗಲೇ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫೆರ್ನಾಂಡೋ ವಿಲ್ಲಾವಿಸೆನ್ಸಿಯೋ(59ವರ್ಷ) ಅವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಬುಧವಾರ (ಆಗಸ್ಟ್ 09) ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Eden Garden ಡ್ರೆಸ್ಸಿಂಗ್ ರೂಮ್‌ನಲ್ಲಿ ಅಗ್ನಿ ಅವಘಡ: ವಿಶ್ವಕಪ್ ತಯಾರಿಯಲ್ಲಿದ್ದ ಕ್ರೀಡಾಂಗಣ
ಹಂತಕನನ್ನು ಶಿಕ್ಷೆಗೆ ಗುರಿಪಡಿಸದೇ ಬಿಡುವುದಿಲ್ಲ ಎಂದು ಈಕ್ವೆಡಾರ್ ಅಧ್ಯಕ್ಷ ಗುಲ್ಲೆರ್ಮೊ ಲಾಸ್ಸೋ ಪ್ರತಿಜ್ಞೆಗೈದಿದ್ದಾರೆ. ಸ್ಥಳೀಯ ಮಾಧ್ಯಮದ ವರದಿ ಪ್ರಕಾರ, ಮಾಜಿ ಸಂಸದ ಫೆರ್ನಾಂಡೋ ಅವರು ಕ್ವಿಟೋದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗಲೇ ಈ ದುರ್ಘಟನೆ ನಡೆದಿರುವುದಾಗಿ ವಿವರಿಸಿದೆ.
ಅಪರಿಚಿತ ಗನ್ ಮ್ಯಾನ್ ಸಾರ್ವಜನಿಕರ ನಡುವೆಯೇ ಫೆರ್ನಾಂಡೋ ಅವರಿಗೆ ಗುಂಡು ಹಾರಿಸಿರುವುದಾಗಿ ವರದಿ ತಿಳಿಸಿದೆ. ದಕ್ಷಿಣ ಅಮೆರಿಕದ ದೇಶವಾದ ಈಕ್ವೆಡಾರ್ ನಲ್ಲಿ ಮಾದಕ ವಸ್ತು ಕಳ್ಳಸಾಗಣೆ ಮತ್ತು ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಇಂತಹ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವುದಾಗಿ ಅಧ್ಯಕ್ಷ ಗುಲ್ಲೆರ್ಮೊ ಭರವಸೆ ನೀಡಿದ್ದಾರೆ.
ಬಿಲ್ಡ್ ಈಕ್ವೆಡಾರ್ ಮೂವ್ ಮೆಂಟ್ ನ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಫೆರ್ನಾಂಡೋ ದೇಶದಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದಿದ್ದರು. 2007ರಿಂದ 2017ರವರೆಗೆ ಅಧ್ಯಕ್ಷರಾಗಿದ್ದ ರಾಫೇಲ್ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ಕಾನೂನು ಸಮರ ಸಾರಿದ್ದರು ಎಂದು ವರದಿ ತಿಳಿಸಿದೆ.