Advertisement

ಕೋವಿಡ್ ಗೆ ಕುಸಿದ ಆರ್ಥಿಕತೆಗೆ ಚೇತೋಹಾರಿ ಪರಿಹಾರ

06:50 AM Jun 23, 2021 | Team Udayavani |

ದೇಶದಲ್ಲಿ ಕೊರೊನಾ ಇನ್ನಿಲ್ಲದ ರೀತಿಯಲ್ಲಿ ಸವಾಲುಗಳನ್ನು ತಂದೊ ಡ್ಡಿದೆ ಎಂಬುದು ಸತ್ಯವೇ. ಆದರೆ ದೇಶದ ಅರ್ಥ ವ್ಯವಸ್ಥೆ 2020ರಲ್ಲಿ ಅದರ ಪ್ರಭಾವವನ್ನು ಸಮರ್ಥವಾಗಿ ಎದುರಿಸಿತ್ತು. ಆದರೂ ಒಟ್ಟು ದೇಶೀಯ ಉತ್ಪಾದನೆ -ನಾಮಿನಲ್‌(ಜಿಡಿಪಿ) 197.5 ಲಕ್ಷ ಕೋಟಿ ರೂ.ಗೆ ಬಂದಿತ್ತು. 2019-20ನೇ ಸಾಲಿಗೆ ಹೋಲಿಕೆ ಮಾಡಿದರೆ ಶೇ.3ರಷ್ಟು ಕುಗ್ಗಿದೆ. ಈ ಅವಧಿಯಲ್ಲಿ ಜಿಡಿಪಿ ಮೌಲ್ಯ 203.5 ಲಕ್ಷ ಕೋಟಿ ರೂ. ಆಗಿತ್ತು. ಸರಿಯಾದ ರೀತಿಯ ಜಿಡಿಪಿ (ರಿಯಲ್‌ ಜಿಡಿಪಿ) ಮಾಪನದ ರೀತಿಯಲ್ಲಿ ನೋಡುವುದಿದ್ದರೆ ಶೇ.7.3ರಷ್ಟು ಕುಸಿತ ಕಂಡಿದೆ. 2020-21ನೇ ಸಾಲಿನ ನಾಲ್ಕನೇ ತ್ತೈಮಾಸಿಕದ ಜಿಡಿಪಿ ಪ್ರಮಾಣ 2019-20ನೇ ಸಾಲಿಗೆ ಹೋಲಿಕೆ ಮಾಡಿದರೆ ಶೇ.1.6ರಷ್ಟು ಹೆಚ್ಚಾಗಿದೆ. ಮಾರ್ಚ್‌ನಲ್ಲಿ ಜಿಎಸ್‌ಟಿ ಸಂಗ್ರಹ 1.41 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಇದು ಅತ್ಯಂತ ಗರಿಷ್ಠ ಸಂಗ್ರಹವೂ ಹೌದು.

Advertisement

ದುರದೃಷ್ಟವಶಾತ್‌ ಇದೇ ಅವಧಿಯಲ್ಲಿ ಕೊರೊನಾದ ಎರಡನೇ ಅಲೆ ದೇಶಕ್ಕೆ ಅಪ್ಪಳಿಸಿತು. ಹೆಚ್ಚಿನ ರಾಜ್ಯಗಳು ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿದವು. ಇದರಿಂದಾಗಿ ಸೋಂಕಿನ ಪ್ರತಿಕೂಲ ಛಾಯೆ ಮರೆತು, ಚೇತರಿಕೆಯತ್ತ ಸಾಗುತ್ತಿದ್ದ ಅರ್ಥ ವ್ಯವಸ್ಥೆಗೆ ತಡೆಯಾದಂತಾಯಿತು. ಲಾಕ್‌ಡೌನ್‌ ಸೇರಿದಂತೆ ಹಲವು ಪ್ರತಿಬಂಧನಾತ್ಮಕ ಕ್ರಮಗಳಿಂದ ವ್ಯಾಪಾರ, ಉದ್ಯಮ- ವಹಿ ವಾಟು ಮತ್ತೆ ಸ್ಥಗಿತವಾಯಿತು. ಇದರಿಂದಾಗಿ ಮರು ವಲಸೆ ಪ್ರಕ್ರಿಯೆ ಕೂಡ ಉಂಟಾಯಿತು. ಪ್ರಸಕ್ತ ವಿತ್ತೀಯ ವರ್ಷ ಅಂದರೆ 2021- 22ನೇ ಸಾಲಿನ ಮೊದಲ ತ್ತೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯ ಬೆಳವಣಿ ಗೆಯ ದರ ಕಡಿಮೆಯಾಗಲಿರುವುದು ನಿಶ್ಚಿತ. ಜುಲೈಯಿಂದ ಅರ್ಥ ವ್ಯವಸ್ಥೆ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ.

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅರ್ಥ ವ್ಯವಸ್ಥೆ ಶೇ.10ರಿಂದ ಶೇ.12.5ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಶೇ.9.5ರಿಂದ ಶೇ.10.5ಕ್ಕೆ ಕುಸಿದಿದೆ. ಬೇಡಿಕೆ ಹೆಚ್ಚಿಸು ವಿಕೆ, ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆ, ಬೃಹತ್‌ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮ ಸೇರಿದಂತೆ ಹಲವು ಚೇತರಿಕೆ ಕ್ರಮಗಳ ಮೂಲಕ ಸೋಂಕು ಪ್ರಭಾವಿತ ಅರ್ಥ ವ್ಯವಸ್ಥೆಗೆ ಧನಾತ್ಮಕ ಬೆಳವಣಿಗೆ ಕಾರಣಕರ್ತರಾಗಬೇಕಾಗಿದೆ. 2019-20ನೇ ಸಾಲಿನಲ್ಲಿ ಖಾಸಗಿಯಾಗಿ ಖರ್ಚು ವೆಚ್ಚಗಳು 123 ಲಕ್ಷ ಕೋಟಿ ರೂ.ಗಳಿಂದ (ಜಿಡಿಪಿಯ ಶೇ.60.5) 2020-21ನೇ ಸಾಲಿನಲ್ಲಿ 116 ಲಕ್ಷ ಕೋಟಿ ರೂ. (ಜಿಡಿಪಿಯ ಶೇ.58.6)ಗೆ ಇಳಿಕೆಯಾಗಿತ್ತು. ಕೇಂದ್ರ ಸರಕಾರ ಪ್ರೋತ್ಸಾ ಹದಾಯಕ ಕ್ರಮ ಕೈಗೊಳ್ಳದೇ ಇದ್ದರೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಅಧಿಕವಾಗಿದೆ. ಹೀಗಾಗಿ ಕೇಂದ್ರ ಸರಕಾರ ಅರ್ಥ ವ್ಯವಸ್ಥೆಯ ಪುನಃಶ್ಚೇತನಕ್ಕೆ ಈ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.

ಬೇಡಿಕೆ ಹೆಚ್ಚಿಸಲು ಕ್ರಮಗಳು
ವಾಹನೋದ್ಯಮ ವಲಯ: ಉತ್ಪಾದನ ವಲಯದ ಶೇ.42ರಷ್ಟು ವಾಹನೋದ್ಯಮವೇ ಆಗಿದೆ. ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ ಸೋಂಕು ಪ್ರತಿಬಂಧಕ ಕ್ರಮಗಳಿಂದ ಉತ್ಪಾದನೆಗೆ ಅಡಚಣೆಯಾಗಿದ್ದರಿಂದ ಪ್ರೋತ್ಸಾಹದಾಯಕ ಕ್ರಮಗಳು ಬೇಕಿವೆ. ಅದಕ್ಕಾಗಿ ಜು.1ರಿಂದ ಮೂರು ತಿಂಗಳ ಅವಧಿಗೆ ಪರಿಹಾರ ಸೆಸ್‌ ಪಾವತಿಯಿಂದ ವಿನಾಯಿತಿ ನೀಡಬೇಕು. ಪ್ರತೀ ತಿಂಗಳಿಗೆ ಈ ಸೆಸ್‌ನಿಂದ ಒಟ್ಟು 9 ಸಾವಿರ ಕೋಟಿ ರೂ. ಜಮೆಯಾಗುತ್ತದೆ. ಈ ಪೈಕಿ 5 ಸಾವಿರ ಕೋಟಿ ರೂ. ಈ ಕ್ಷೇತ್ರದಿಂದಲೇ ಸಂಗ್ರಹವಾಗುತ್ತದೆ. ಮೂರು ತಿಂಗಳ ವಿನಾಯಿತಿಯಿಂದ 15 ಸಾವಿರ ಕೋಟಿ ರೂ. ಮೊತ್ತವನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ಪರಿಹಾರವಾಗಿ ನೀಡಬೇಕು.

ಸಾರ್ವಜನಿಕ ಸಾರಿಗೆ: ಸಾರ್ವಜನಿಕ ಸಾರಿಗೆಗಾಗಿ ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳಿಗೆ 50 ಸಾವಿರ ವಿದ್ಯುತ್‌ ಚಾಲಿತ ಬಸ್‌ಗಳನ್ನು ಖರೀದಿಸಲು ಅವಕಾಶ ನೀಡಬೇಕು. ಇದರಿಂದಾಗಿ ಹಾಲಿ ಇರುವ 25 ಸಾವಿರ ಹಳೆಯ ಬಸ್‌ಗಳನ್ನು ಬದಲಿಸಬಹುದು. ಬ್ಯಾಟರಿ ವೆಚ್ಚ ಹೊರತುಪಡಿಸಿ ಪ್ರತೀ ಬಸ್‌ಗೆ 15 ಲಕ್ಷ ರೂ. ಪ್ರೋತ್ಸಾಹದಾಯಕ ವೆಚ್ಚ ಎಂದು ಪರಿಗಣಿಸಿದರೂ ಶೇ.50-ಶೇ.60ರಷ್ಟು ವೆಚ್ಚವನ್ನು ಭರಿಸಿ ದಂತಾಗುತ್ತದೆ. ಬ್ಯಾಟರಿಯನ್ನು ಲೀಸ್‌ ಮೂಲಕವಾದರೂ ಖರೀದಿ ಸಲು ಅವಕಾಶ ಇದೆ ಮತ್ತು ಇಂಧನದಲ್ಲಿ ಉಳಿತಾಯ ಮಾಡಲು ಸಾಧ್ಯವಾಗಲಿದೆ. ಕಡಿಮೆ ಪ್ರಮಾಣದಲ್ಲಿ ಪರಿಸರಕ್ಕೆ ಮಾಲಿನ್ಯ, ಉತ್ಪಾದನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಲು ಮತ್ತು ದೇಶದಲ್ಲಿ ಹೊಸ ರೀತಿಯ ಕೈಗಾರಿಕೆ ಆರಂಭಕ್ಕೆ ಅವಕಾಶವಾಗ ಲಿದೆ. ಇದರಿಂದಾಗಿ 2025ರೊಳಗಾಗಿ ಪೂರ್ಣ ಪ್ರಮಾಣದ ವಿದ್ಯುತ್‌ ಬಸ್‌ ಹೊಂದಲು ಮತ್ತು ಬ್ಯಾಟರಿ ಉತ್ಪಾದನೆ ಮಾಡುವ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದಂತಾಗಲಿದೆ. ಅದಕ್ಕಾಗಿ ಉತ್ಪಾದನ ಆಧಾರಿತ ಪ್ರೋತ್ಸಾಹಧನ ವ್ಯವಸ್ಥೆಯನ್ನೂ ಕೇಂದ್ರ ಸರಕಾರ ಜಾರಿಗೊಳಿಸಿದೆ. ದೇಶಾದ್ಯಂತ ಟಾಟಾ ಪವರ್‌ ವಿದ್ಯುತ್‌ ಚಾಲಿತ ವಾಹನಗಳನ್ನು ಚಾರ್ಜ್‌ ಮಾಡುವ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿದೆ. ಅದಕ್ಕಾಗಿ 7,500 ಕೋಟಿ ರೂ. ವೆಚ್ಚವಾಗಲಿದ್ದು, ಪ್ರಸಕ್ತ ವರ್ಷವೇ 5 ಸಾವಿರ ಕೋಟಿ ರೂ. ಮೊತ್ತವನ್ನು ಬ್ಯಾಟರಿ ಉತ್ಪಾದನೆಗೆ ಬಳಸ ಬಹುದು. ಇದರಿಂದಾಗಿ ಮಾರಾಟ ಕ್ಷೇತ್ರ ಪ್ರಗತಿ ಕಾಣಲಿದೆ ಮತ್ತು 2 ಸಾವಿರ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಲಿದೆ.

Advertisement

ರಿಯಲ್‌ ಎಸ್ಟೇಟ್‌ ಮತ್ತು ಗೃಹ ನಿರ್ಮಾಣ: ರಿಯಲ್‌ ಎಸ್ಟೇಟ್‌ಸಂಬಂಧ ಮುಂಬಯಿಯಲ್ಲಿ ನೋಂದಣಿ ಶುಲ್ಕದ ಪ್ರಮಾಣವನ್ನು ಮಾ.31ರ ವರೆಗೆ ಶೇ.6ರಿಂದ ಶೇ.3ಕ್ಕೆ ಇಳಿಸಲಾಗಿದೆ. ಈ ಪ್ರಯೋಗ ಯಶಸ್ಸು ಕಂಡಿದ್ದು, 60 ಸಾವಿರ ಕೋಟಿ ರೂ.ಗಳಿಗಿಂತಲೂ ಅಧಿಕ ಮೊತ್ತ ಭೂ ವ್ಯವಹಾರ/ ನಿರ್ಮಾಣ ಕ್ಷೇತ್ರದ ಕಂಪೆನಿಗಳ ಕ್ಷೇತ್ರದಲ್ಲಿ ಬಂದಿದೆ. ಈ ಪೈಕಿ ಕೆಲವೊಂದು ಅನುತ್ಪಾದಕ ಆಸ್ತಿಯಾಗಿದೆ. ಇದರಿಂ ದಾಗಿ ಸರಕಾರಕ್ಕೆ ಆದಾಯ ಹೆಚ್ಚಾಗಿದೆ. ದೇಶದಲ್ಲಿ ಈಗ 5 ಲಕ್ಷ ಕೋಟಿ ರೂ. ಮೌಲ್ಯದಷ್ಟು ಮನೆಗಳು ಮಾರಾಟವಾಗದೇ ಉಳಿದಿವೆ. ಜು.1ರಿಂದ ಡಿ.31ರ ವರೆಗೆ ನೋಂದಣಿ ಶುಲ್ಕದ ಪ್ರಮಾಣವನ್ನು ಶೇ.6 ರಿಂದ ಶೇ.3ಕ್ಕೆ ಇಳಿಕೆ ಮಾಡಲು ಸಲಹೆ ಮಾಡಬಹುದು. ಇದರಿಂದಾಗಿ ರಾಜ್ಯಗಳಿಗೂ ಶೇ.50ರಷ್ಟು ಆದಾಯ ಗಳಿಸುವ ಅವಕಾಶ ಲಭ್ಯ ವಾಗಲಿದೆ. 6 ತಿಂಗಳ ಅವಧಿಯಲ್ಲಿ 2 ಲಕ್ಷ ಕೋಟಿ ರೂ.ಮೌಲ್ಯದ ಮನೆಗಳು ಮಾರಾಟವಾಯಿತು ಎಂದರೂ, 6 ಸಾವಿರ ಕೋಟಿ ರೂ. ಮೌಲ್ಯದ ಪೈಕಿ ಪ್ರೋತ್ಸಾಹ ಮೌಲ್ಯವೆಂದರೂ 3 ಸಾವಿರ ಕೋಟಿ ರೂ. ಸರಕಾರಗಳಿಗೆ ಸಿಗಲಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರ ಪುಟಿದೇಳಲಿದೆೆ.

2 ಸಾವಿರ ಪಟ್ಟಣಗಳಲ್ಲಿ ಹೂಡಿಕೆ
ದೇಶದಲ್ಲಿ 7,500 ಪಟ್ಟಣಗಳಿದ್ದು, ಅವು ಮುಂದಿನ ದಿನಗಳಲ್ಲಿ ದೇಶದ ಬೆಳವಣಿಗೆಯ ಮುನ್ನೋಟಕ್ಕೆ ಮುನ್ನುಡಿ ಬರೆಯಲಿವೆ. ಈ ಪಟ್ಟಣಗಳ ಪೈಕಿ 2 ಸಾವಿರ ಪಟ್ಟಣಗಳ ಪೈಕಿ ಕೈಗಾರಿಕ ಕ್ಷೇತ್ರಗಳು, ಗೃಹ ನಿರ್ಮಾಣ ಮತ್ತು ಅವುಗಳಿಗೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ರಾಜ್ಯ ಸರಕಾರಗಳಿಗೆ ಪ್ರತೀ ನಗರಕ್ಕೆ 10 ಕೋಟಿ ರೂ. ಎಂಬಂತೆ ಮೊತ್ತವನ್ನು ಕೇಂದ್ರ ಸರಕಾರ ನೀಡಬಹುದು ಮತ್ತು ಈ ಮೊತ್ತದಿಂದ ರಸ್ತೆ ಅಭಿವೃದ್ಧಿ, ಬೆಳಕು, ಒಳಚರಂಡಿ, ನೀರು ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಸಾಧ್ಯ. ಇದಕ್ಕಾಗಿ ಕೇಂದ್ರ 20 ಸಾವಿರ ಕೋಟಿ ರೂ.ಗಳನ್ನು ವ್ಯಯಿಸಬೇಕಾಗಿ ಬರಬಹುದು. ಈ ಪೈಕಿ 10 ಸಾವಿರ ಕೋಟಿ ರೂ. ಮೊತ್ತವನ್ನು ಇಂಧನದ ಮೇಲೆ ವಿಧಿಸಲಾಗುವ ಸೆಸ್‌ ಮತ್ತು ಉಳಿದ ಮೊತ್ತವನ್ನು ಸರಕಾರದ ಆರ್ಥಿಕ ಪ್ಯಾಕೇಜ್‌ನಲ್ಲಿರುವ ಮೊತ್ತದ ಮೂಲಕ ಭರಿಸಲು ಅವಕಾಶ ಉಂಟು.

ಬೃಹತ್‌ ಪ್ರಮಾಣದ ಉದ್ಯೋಗ
ನಮ್ಮ ದೇಶದಲ್ಲಿ ಹೆಚ್ಚಿನ ಕೈಗಾರಿಕೆಗಳು ಹೆಚ್ಚು ವೆಚ್ಚದಾಯಕ ಸ್ಥಳಗಳಲ್ಲಿ ಕೇಂದ್ರೀಕೃತವಾಗಿವೆ. ಇದರಿಂದಾಗಿ ಉತ್ಪಾದನ ವೆಚ್ಚವೂ ಅನಗತ್ಯವಾಗಿ ಹೆಚ್ಚಾಗುತ್ತದೆ. ಇಂಥ ಪರಿಸ್ಥಿತಿ ತಪ್ಪಿಸಲು ಗ್ರಾಮೀಣ ಪ್ರದೇಶಗಳಿಗೆ ವಿಶೇಷವಾಗಿ- ಅಭಿವೃದ್ಧಿಗೊಳಿಸಲು ಗುರುತಿಸಲಾಗುವ ದೇಶದ 2 ಸಾವಿರ ವಿವಿಧ ನಗರ ಅಥವಾ ಪಟ್ಟಣ ಪ್ರದೇಶಗಳ ಸಮೀಪದ‌ ಗ್ರಾಮೀಣ ಪ್ರದೇಶಕ್ಕೆ ಸ್ಥಳಾಂತರಗೊಳಿಸಿದರೆ ಕಾರ್ಮಿಕರ ಮೇಲೆ ಹೂಡಿಕೆ ಮಾಡುವ ವೆಚ್ಚದ ಪ್ರಮಾಣ ತಗ್ಗಲಿದೆ. ಇದರಿಂದಾಗಿ ಸ್ಪರ್ಧಾತ್ಮಕ ವಾತಾವರಣದಲ್ಲಿ ಉತ್ಪಾದನೆಗೆ ಅವಕಾಶ ನೀಡಿದಂತಾಗುತ್ತದೆ. ಈ 2 ಸಾವಿರ ಪಟ್ಟಣಗಳಿಗೆ ಹೊಂದಿಕೊಂಡಂತಿ ರುವ 250 ಜಿಲ್ಲೆಗಳನ್ನು ವಿಶೇಷ ಕೈಗಾರಿಕಾ ವಲಯವೆಂದು ಪರಿಗಣಿಸ ಬಹುದು. ಕೈಗಾರಿಕ ಚಟುವಟಿಕೆಗಳು ಹೆಚ್ಚಿದಂತೆ ಅಭಿವೃದ್ಧಿ ಹೆಚ್ಚಾಗ ಲಿವೆ. ಈ 250 ಜಿಲ್ಲೆಗಳಲ್ಲಿ ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹ ನೀಡಬೇಕು. ಹತ್ತು ವರ್ಷಗಳ ಅವಧಿಯಲ್ಲಿ ಮಾಡುವ ಉದ್ಯೋಗ ಸೃಷ್ಟಿಗಾಗಿ ಅಂಥ ಸಂಸ್ಥೆಗಳಿಗೆ ಶೇ.150ರಷ್ಟು ಆದಾಯ ತೆರಿಗೆ ಕಡಿಮೆ ವಿಧಿಸಬೇಕು. ಭವಿಷ್ಯ ನಿಧಿ ಮತ್ತು ರಾಜ್ಯ ಕಾರ್ಮಿಕ ವಿಮೆ ಜಾರಿ ಮಾಡಿರುವುದನ್ನು ಉದ್ಯೋಗಿಗಳಿಗೆ ಸಂಬಳ ನೀಡಿದ್ದಕ್ಕೆ ಖಾತರಿ ಎಂದು ಪರಿಗಣಿಸಬೇಕು. ಇಲ್ಲಿ ಸ್ಥಾಪನೆಯಾಗಿರುವ ಉದ್ದಿಮೆಗಳು ಪ್ರತೀ ವರ್ಷ 5 ಲಕ್ಷ ಕೋಟಿ ರೂ.ಮೌಲ್ಯದ ವಸ್ತು ಮಾರಾಟ ಮಾಡಲು ಸಾಮರ್ಥ್ಯ ಹೊಂದಿವೆ ಎಂದಾದರೆ ಮತ್ತು ಶೇ.60ರಷ್ಟು ವೇತನ ನೀಡುತ್ತಾರೆ ಎಂದು ಪರಿಗಣಿಸಿದರೆ ಅದರ ಮೌಲ್ಯವೇ 3 ಲಕ್ಷ ಕೋಟಿ ರೂ. ಪ್ರತೀ ವರ್ಷ ಪ್ರತೀ ಉದ್ಯೋಗಿಗೆ 2 ಲಕ್ಷ ರೂ. ವೇತನ ಎಂದು ಪರಿಗಣಿಸಿದರೂ ವರ್ಷಕ್ಕೆ 1.5 ಕೋಟಿ ಉದ್ಯೋಗ ನೀಡಿದಂತಾಗುತ್ತದೆ.

ವೈದ್ಯಕೀಯ ಮೂಲ ಸೌಕರ್ಯ
ಹಾಲಿ ಪರಿಸ್ಥಿತಿ ನಮ್ಮ ದೇಶದಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಒರೆಗೆ ಹಚ್ಚಿ ಸುಧಾರಿಸುವ ಅಂಶ ಇದೆ ಎಂಬುದನ್ನು ಜಾಹೀರುಪ ಡಿಸಿದೆ. ದೇಶದ ಪ್ರತೀ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಟರ್ಶರಿ ಆಸ್ಪತ್ರೆ ನಿರ್ಮಾಣವಾಗಬೇಕಾಗಿದೆ. ಪ್ರತೀ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಗತ್ಯವಾಗಿರುವ ವೈದ್ಯರು ಮತ್ತು ದಾದಿ ಯರ ತರಬೇತಿ ಆಗಬೇಕಾಗಿದೆ. ಪ್ರತೀ ವರ್ಷ 1.5 ಲಕ್ಷ ವೈದ್ಯರು ಮತ್ತು 2.5 ಲಕ್ಷ ನರ್ಸ್‌ಗಳಿಗೆ ತರಬೇತಿ ನೀಡುವ ಕಾರ್ಯವೂ ಆಗ ಬೇಕಾಗಿದೆ. “ದ ಸಂಡೇ ಗಾರ್ಡಿಯನ್‌’ನಲ್ಲಿ 2021ರ ಮೇ 21ರಂದು ಪ್ರಕಟವಾಗಿದ್ದ ಲೇಖನ ದಲ್ಲಿ ದೇಶದ ಆರೋಗ್ಯ ಮೂಲ ಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ 9 ಅಂಶಗಳ ಕಾರ್ಯಸೂಚಿ ನೀಡಲಾಗಿತ್ತು. ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಲಸಿಕೆಗಾಗಿ 35 ಸಾವಿರ ಕೋಟಿ ರೂ. ಮತ್ತು 60 ಸಾವಿರ ಕೋಟಿ ರೂ.ಗಳನ್ನು ನೀರಿನ ಪೂರೈಕೆಗಾಗಿ ಮೀಸಲಾಗಿ ಇರಿಸ ಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಕೇಂದ್ರ ಸರಕಾರ ಯಶಸ್ವಿ ಯಾಗಿ ಯೋಜನೆ ಅನುಷ್ಠಾನಗೊಳಿಸಿದಲ್ಲಿ ಬಜೆಟ್‌ನಲ್ಲಿ ಈ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಮೊತ್ತ ವಿನಿಯೋಗಿಸಲು ಶಕ್ತಿ ಬಂದಂತೆ ಆಗುತ್ತದೆ.

ವಿತ್ತೀಯ ಕ್ರಮಗಳು
ಆದಾಯ ತೆರಿಗೆ: ಸೋಂಕಿನ ಈ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗ ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ತೊಂದರೆಯಾಗಿದೆ. ವಿಶೇಷ ವಾಗಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನಿರೀಕ್ಷಿತವಾಗಿ ಹೆಚ್ಚಿದ ವೆಚ್ಚ ಅವರನ್ನು ಕಂಗೆಡಿಸಿದೆ. ಹೀಗಾಗಿ ಪ್ರಸಕ್ತ ವರ್ಷ ತೆರಿಗೆ ಹಂತ ಗಳನ್ನು ಸರಳಗೊಳಿಸಬೇಕೆನ್ನುವುದು ನಮ್ಮ ಸಲಹೆ. ವಾರ್ಷಿಕವಾಗಿ 5 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ಆದಾಯ ತೆರಿಗೆ ವಿಧಿಸು ವುದು ಬೇಡ. ವಾರ್ಷಿಕ ಆದಾಯ 5 ಲಕ್ಷ ರೂ.ಗಳಿಂದ 10 ಲಕ್ಷ ರೂ. ವರೆಗೆ ಇರುವವರಿಗೆ ಶೇ.10ರಷ್ಟು ತೆರಿಗೆ, ವಾರ್ಷಿಕವಾಗಿ 10 ಲಕ್ಷ ರೂ.ಗಳಿಂದ 15 ಲಕ್ಷ ರೂ. ಆದಾಯ ಇರುವವರಿಗೆ ಶೇ.20, ವಾರ್ಷಿಕ ವಾಗಿ 15 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಇರುವವರಿಗೆ ಶೇ.30 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆದಾಯ ತೆರಿಗೆ ವಿಧಿಸಬೇಕು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ರಲ್ಲಿ ವಿಮೆ ಮತ್ತು ಗೃಹ ನಿರ್ಮಾಣ ಕ್ಷೇತ್ರಕ್ಕೆ ನೀಡುವ ವಿನಾಯಿತಿ ಇಲ್ಲಿ ಅನ್ವಯವಾಗುವುದಿಲ್ಲ. ಹೊಸ ತೆರಿಗೆ ವ್ಯವಸ್ಥೆಯಿಂದ ಕೆಳ ಹಂತದ‌ವರಿಗೆ ಅನುಕೂಲವಾಗಲಿದೆ ಮತ್ತು 55 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಅನುಕೂಲವಾಗಲಿದೆ. ಆದಾಯದಲ್ಲಿ ಕಡಿಮೆ ಪ್ರಮಾಣದ ನಷ್ಟವಾಗಿರುವುದರಿಂದ ಸೆಕ್ಷನ್‌ 80ರ ಅನ್ವಯ ಡಿಡಕ್ಷನ್‌ ಇರುವುದಿಲ್ಲ. ಹೀಗಾಗಿ ಜನರಲ್ಲಿ ನಗದು ಹೆಚ್ಚಲಿದೆ ಮತ್ತು ಅದನ್ನು ವೆಚ್ಚ ಮಾಡಲು ಸಾಧ್ಯವಾಗಲಿದೆ.

ಬಂಡವಾಳದ ಲಾಭದ ಮೇಲಿನ ತೆರಿಗೆ(ಸಿಜಿಟಿ): ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗದ ಷೇರುಗಳ ಮೇಲೆ ವಿಧಿಸಲಾಗುವ ಶೇ.10ರಷ್ಟು ಪ್ರಮಾಣದ ಬಂಡವಾಳದ ಮೇಲಿನ ಲಾಭದ ಮೇಲಿನ ತೆರಿಗೆಯನ್ನು ಮತ್ತು ಶೇ.15ರಷ್ಟು ಸರ್ಚಾರ್ಜ್‌ ಅನ್ನು ಕಡಿಮೆ ಗೊಳಿಸಲು ಸಲಹೆ ಮಾಡಲಾಗಿದೆ. ಇದರಿಂದ ಪ್ರಸಕ್ತ ವಿತ್ತೀಯ ವರ್ಷದಿಂದಲೇ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುವು ಮಾಡಿಕೊಟ್ಟಂತಾಗುತ್ತದೆ. ಲಿಸ್ಟ್‌ ಆಗದೇ ಇರುವ ಸ್ಟಾಕ್‌ಗಳ ಅವಧಿಯನ್ನು ಎರಡು ವರ್ಷಗಳಿಂದ 3 ವರ್ಷಗಳಿಗೆ ಪರಿಷ್ಕರಿಸಬೇಕು. ಸದ್ಯ ಲಿಸ್ಟ್‌ ಆಗದೇ ಇರುವ ಸ್ಟಾಕ್‌ ಗಳಿಗೆ ವಿಧಿಸಲಾಗುವ ಕ್ಯಾಪಿಟಲ್‌ ಗೈನ್‌ ಟ್ಯಾಕ್ಸ್‌ ಪ್ರಮಾಣ ಶೇ.20 ರಷ್ಟಿದೆ. ಜತೆಗೆ ತಾಂತ್ರಿಕ ನಾವೀನ್ಯತೆ ಮತ್ತು ನವೋದ್ಯಮ (ಸ್ಟಾರ್ಟಪ್‌) ಆರಂಭಿಸಲೂ ಇದೊಂದು ಹಿನ್ನಡೆಯೇ ಆಗಿದೆ. ಈ ಕ್ಷೇತ್ರದಲ್ಲಿ ದೇಶಿಯವಾಗಿ ಬರುವ ಹೂಡಿಕೆ ಪ್ರಮಾಣವೇ ಶೇ.10. ಭಾರತೀಯ ಹೂಡಿಕೆದಾರರಿಗೆ ಶೇ.20ರ ದರದಲ್ಲಿಯೇ ತೆರಿಗೆ ವಿಧಿಸಿದರೆ ಭಾರತ ಡಿಜಿಟಲ್‌ ಕಾಲನಿಯಾಗಿ ಪರಿವರ್ತನೆಗೊಂಡೀತು. ಅದಕ್ಕೆ ಜಾಗತಿಕ ತಾಂತ್ರಿಕ ದೈತ್ಯ ಸಂಸ್ಥೆಗಳಾಗಿರುವ ಫೇಸ್‌ಬುಕ್‌, ಟ್ವಿಟರ್‌, ಗೂಗಲ್‌ನ ಕೃಪೆಯೂ ಬೇಕೆನ್ನಿ. ಉದ್ಯೋಗ ಸೃಷ್ಟಿ, ಬೆಳವಣಿಗೆ ಮತ್ತು ಹೆಚ್ಚಿನ ರೀತಿಯಲ್ಲಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆಯನ್ನು ಹೊಂದಲಾಗಿದೆ.

80ಜಿ ಡಿಡಕ್ಷನ್‌: ವ್ಯಕ್ತಿಗಳು ದತ್ತಿಗಳಿಗೆ ನೀಡುವ ದೇಣಿಗೆಯ ಮೇಲೆ ಆದಾಯ ತೆರಿಗೆಯ 80ಜಿಯ ಅನ್ವಯ ಡಿಡಕ್ಷನ್‌ ಪ್ರಮಾಣ ಹೆಚ್ಚಿಸ ಬಹುದು.ಪ್ರಸಕ್ತ ವಿತ್ತೀಯ ವರ್ಷದಿಂದ ಒಟ್ಟು ಆದಾಯದ ಶೇ.25ರ ವರೆಗೆ ಡಿಡಕ್ಷನ್‌ ಮಾಡಬಹುದಾಗಿದೆ. 2019-20ನೇ ಸಾಲಿನಲ್ಲಿಯೂ ಕೂಡ ದೇಶದ ತೆರಿಗೆ ಪಾವತಿದಾರರು ಸೋಂಕಿನ ಪರಿಹಾರ ನಿಧಿಗೆ ಆದ್ಯತೆಯಲ್ಲಿ ದೇಣಿಗೆ ನೀಡಿದ್ದಾರೆ. ಕೇಂದ್ರ ಸರಕಾರ ಅವರ ಕೊಡುಗೆ ಯನ್ನು ಗಂಭೀರವಾಗಿ ಪರಿಗಣಿಸಬೇಕು.

ಸಂಭಾವ್ಯ ಮೂಲಗಳು
1.ಆರ್‌ಬಿಐನಿಂದ ಹೆಚ್ಚುವರಿ ಲಾಭಾಂಶ: ಬಜೆಟ್‌ನಲ್ಲಿ ಮೀಸಲಾಗಿ ಇರಿಸಲಾಗಿರುವ ಲಾಭಾಂಶ (ಡಿವಿಡೆಂಡ್‌) 66 ಸಾವಿರ ಕೋಟಿ ರೂ. ಆದರೆ ಕೇಂದ್ರ ಸರಕಾರ 99 ಸಾವಿರ ಕೋಟಿ ರೂ.ಗಳನ್ನು ಈಗಾಗಲೇ ಪಡೆದುಕೊಂಡಿದೆ. ಹೆಚ್ಚುವರಿ ಯಾಗಿರುವ 39 ಸಾವಿರ ಕೋಟಿ ರೂ.ಗಳನ್ನು ವಿತ್ತೀಯ ಪ್ಯಾಕೇಜ್‌ ಮೂಲಕ ಪಡೆದುಕೊಳ್ಳಲು ಸಾಧ್ಯವಿದೆ.

2. ಆಹಾರ ಸಹಾಯಧನ ಉಳಿತಾಯ: ಕಳೆದ ವರ್ಷ ಕೇಂದ್ರ ಸರಕಾರ ಆಹಾರ ಸಹಾಯಧನವೆಂದು 40 ಸಾವಿರ ಕೋಟಿ ರೂ. ಉಳಿಸಿತ್ತು. ಅದನ್ನು ದೇಶದ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಬಳಕೆ ಮಾಡಬಹುದು.

ದೇಶದಲ್ಲಿ ಎರಡನೇ ಹಂತದ ಕೊರೊನಾ ಸೋಂಕು ಬಾಧಿಸಿದರೂ ದೇಶದ ಅರ್ಥ ವ್ಯವಸ್ಥೆಯನ್ನು ಬಲಪಡಿಸಲು ಇನ್ನೂ ಅವಕಾಶಗಳು ಇವೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದರ ಮೇಲೆ ಮುಂದಿನ ಹಂತ ನಿರ್ಧಾರವಾಗಲಿದೆ. ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳಲು ಗೃಹ ನಿರ್ಮಾಣ ಕ್ಷೇತ್ರ ಮತ್ತು ವಾಹನೋದ್ಯಮಕ್ಕೆ, ಉತ್ಪಾದನ ಕ್ಷೇತ್ರಕ್ಕೆ ಉತ್ತೇಜನ ಪ್ಯಾಕೇಜ್‌ ಅಗತ್ಯವಾಗಿದೆ. ಈ ಮೂಲಕ ಬೇಡಿಕೆ ಸೃಷ್ಟಿಸುವ ವಾತಾವರಣ ನಿರ್ಮಿಸಬೇಕಾಗಿದೆ. ಇದರ ಜತೆಗೆ ಉದ್ಯೋಗ ಸೃಷ್ಟಿಯೂ ಆಗಬೇಕಾಗಿದೆ. ಆಂತರಿಕವಾಗಿಯೂ ದೇಶದ ಅರ್ಥ ವ್ಯವಸ್ಥೆಯಲ್ಲಿ ಬೇಡಿಕೆಯನ್ನು ಕುದುರಿಸುವ ಪರಿಸ್ಥಿತಿ ಮತ್ತು ಸನ್ನಿವೇಶ ನಿರ್ಮಿಸಬೇಕಾಗಿದೆ. ಈ ದಿಸೆಯಲ್ಲಿ ಯಾವುದೇ ಅರ್ಥ ವ್ಯವಸ್ಥೆಗೆ ಉತ್ತೇಜನ ಕ್ರಮಗಳನ್ನು ಪ್ರಕಟಿಸುವ ಮೂಲಕ ಅದರ ಮಿಡಿತ ಮುಂದುವರಿಯುತ್ತಿದೆ ಎನ್ನುವುದನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ.

– ಟಿ.ವಿ.ಮೋಹನ್‌ದಾಸ್‌ ಪೈ
– ನಿಶಾ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next