ಮಹಾನಗರ: ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೋದಿ ಸರಕಾರದ ತಪ್ಪು ನೀತಿಯಿಂದಾಗಿ ಪ್ರಸ್ತುತ ದೇಶದ ಆರ್ಥಿಕ ಪರಿಸ್ಥಿತಿ ಡೋಲಾಯಮಾನವಾಗಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಅವರು ಟೀಕಿಸಿದರು.
ಸಿಪಿಎಂ ಶಕ್ತಿನಗರ ಪ್ರದೇಶದ ಮೂರು ಶಾಖೆಗಳ ಸಮ್ಮೇಳನದ ಅಂಗವಾಗಿ ಶಕ್ತಿ ನಗರ ಜಂಕ್ಷನ್‌ನಲ್ಲಿ ಇತ್ತೀಚೆಗೆ ಜರಗಿದ ಬಹಿರಂಗ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಏಕಾಏಕಿ ನೋಟು ರದ್ದತಿಯಿಂದ ಜನತೆ ತೀರಾ ಸಂಕಷ್ಟಕ್ಕೆ ಒಳಗಾಗಿದ್ದು , ಲಕ್ಷಾಂತರ ಕಾರ್ಮಿಕರು ಉದ್ಯೋಗ ವಂಚಿತರಾಗಿದ್ದಾರೆ. ಕಪ್ಪುಹಣ, ಖೋಟಾ ನೋಟು, ಭ್ರಷ್ಟಾಚಾರ, ಭಯೋತ್ಪಾದನೆ ತಡೆಗಟ್ಟುವುದಾಗಿ ಭಾರೀ ಪ್ರಚಾರ ನಡೆಸಿದ ಬಿಜೆಪಿ ಇಂದು ತುಟಿಪಿಟಿಕ್ಕ್ ನ್ನುತ್ತಿಲ್ಲ. ಸ್ವತಃ ಬಿಜೆಪಿ ನಾಯಕರುಗಳೇ ಮೋದಿ ಸರಕಾರದ ನಡೆಯನ್ನು ವಿರೋಧಿಸಿದ್ದಾರೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ ಆದಷ್ಟು ಶೀಘ್ರದಲ್ಲಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಕೈಗೊಳ್ಳದಿದ್ದಲ್ಲಿ ಇಡೀ ದೇಶವೇ ದಿವಾಳಿಯಾದೀತು ಎಂಬ ಎಚ್ಚರಿಕೆ ನೀಡಿದೆ. ಒಟ್ಟಿನಲ್ಲಿ ಮೋದಿ ಸರಕಾರವು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡ ಮೇಲುಗೊಳಿಸಿದೆ ಎಂದರು.
ಜನಸಾಮಾನ್ಯರ ಕಡೆಗಣನೆ
ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಸದಸ್ಯ ಸಂತೋಷ್ ಶಕ್ತಿನಗರ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜನರ ಹಿತಾಸಕ್ತಿಗಳಿಗೆ ಗಮನವನ್ನು ನೀಡದೆ ಶ್ರೀಮಂತರ ಪರವಾಗಿ ಕಾರ್ಯಾಚರಿಸುತ್ತಿದೆ. ನಿವೇಶನ ರಹಿತರ ಪ್ರಶ್ನೆಗಳನ್ನು ಕೇಳುವವರಿಲ್ಲ. ಬೆಲೆಯೇರಿಕೆಯಿಂದ ಜನತೆ ಕಂಗೆಟ್ಟಿದ್ದಾರೆ. ಕಾರ್ಮಿಕ ವರ್ಗದ ಸಂಕಷ್ಟಗಳು ಮಿತಿ ಮೀರಿದೆ ಇಂತಹ ಸರಕಾರಗಳಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಯವ ನಾಯಕ ಜಯಪ್ರಕಾಶ್ ಬೊಲ್ಯ ವಹಿಸಿದ್ದರು. ಉಮೇಶ್ ಶಕ್ತಿನಗರ, ಮಂಜುಳಾ ಶೆಟ್ಟಿ, ಉಮೇಶ್ ಬೊಲ್ಯ ಉಪಸ್ಥಿತರಿದ್ದರು.