Advertisement

ಇಕೋ ಪಾರ್ಕ್‌ ಎಂಬ ಮಾಯಾಬಜಾರ್‌

09:11 AM May 12, 2019 | Sriram |

ದಾಂಡೇಲಿ ಪಟ್ಟಣದಲ್ಲಿ 25 ಎಕರೆ ಅರಣ್ಯ ಪ್ರದೇಶದಲ್ಲಿ ಇಕೋ ಪಾರ್ಕ್‌ ಎಂಬ ಮಾಯಾಬಜಾರ್‌ ಮೈದಾಳಿ ನಿಂತಿದೆ. ಮಕ್ಕಳ ಮನರಂಜಿಸಲು ಇದೊಂದು ಅತಿ ವಿಶಿಷ್ಟ ಪಿಕ್‌ ನಿಕ್‌ ತಾಣ ಅನ್ನಿಸಿಕೊಂಡಿದೆ.

Advertisement

ಟಾಮ್‌ ಅಂಡ್‌ ಜೆರ್ರಿ, ಮಿಕ್ಕಿ ಮೌಸ್‌, ಡೋರೆಮನ್‌, ಟಿಮಾನ್‌, ಕಾಂಗಾ, ಎಂವೆಜರ್, ಪಾಪೆಯೆ, ಮಿಚಿಗನ್‌, ಶ್ರೇಕ್‌, ಆಂಗ್ರಿ ಬರ್ಡ್ಸ್‌, ಛೋಟಾ ಭೀಮ್‌, ಅಲಾದಿನ್‌, ಜಂಗಲ್‌ ಬುಕ್‌ನ ಮೊಗ್ಲಿ, ಸ್ಕಿಪ್ಪಿ ಸೆರಲ್‌, ಚಿಪ್‌ ಆಂಡ್‌ ಡೆಲ್‌, ಮೋಟು ಪೊತ್ಲು, ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್‌…ಹೀಗೆ ಟಿ.ವಿ ಯಲ್ಲಿ ಬರುವ ಮಕ್ಕಳ ಕಾಟೂìನ್‌ ಲೋಕದ ಪಾತ್ರಗಳು ಕಣ್ಣೆದುರು ಬಂದರೆ ಹೇಗೆ? ಹೌದು, ಇವರೆಲ್ಲರನ್ನೂ ಒಂದೇ ವೇದಿಕೆಯಲ್ಲಿ ನೋಡುವಂಥ ಅವಕಾಶ ಇಲ್ಲಿದೆ. ಇದೊಂದು ಸುಂದರವಾದ ಮಾಯಾಬಜಾರ್‌. ಇಲ್ಲಿ ಎಲ್ಲವೂ ಮನಮೋಹಕ. ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದ ತಂದೆ ತಾಯಿಗೆ, ಮಕ್ಕಳೇ ಶಿಕ್ಷಕರು.

ಎಲ್ಲಿ ಅಂತೀರಾ? ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದ ಬಸ್‌ ನಿಲ್ದಾಣದ ಹಿಂದೆ ಸುಮಾರು 25 ಎಕರೆ ಅರಣ್ಯ ಪ್ರದೇಶದಲ್ಲಿ ದಂಡಾಕಾರಣ್ಯ ಇಕೋ ಪಾರ್ಕ್‌ ಅನಾವರಣಗೊಂಡಿದೆ.

ಪಾರ್ಕ್‌ನ ಒಳಗೆ ಕಾಲಿಡುತ್ತಿದ್ದಂತೆ ಇರುವೆಗಳ ದೊಡ್ಡ ಸಾಲಿನ ದರ್ಶನವಾಗುತ್ತದೆ. ಅರೇ, ಇರುವೆಗಳು ಕಚ್ಚಬಹುದು ನಿಧಾನವಾಗಿ ನಡೆಯಿರಿ ಎಂದು ಹೇಳುತ್ತಾ ಮುಂದೆ ಸಾಗಿದಾಗ ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್‌ ತಮಾಷೆ ಪ್ರಸಂಗವೊಂದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ ನಿಂತಿದ್ದಾರೆ. ಚಾಪ್ಲಿನ್‌ ಟ್ರೇಡ್‌ ಮಾರ್ಕ್‌ ಎನಿಸಿರುವ ಟೋಪಿ ತಲೆಯ ಮೇಲಿದ್ದರೂ ಕೋಲನ್ನು ಅವರು ಎಲ್ಲಿಯೋ ಬಿಟ್ಟು ಬಂದಿರುವಂತಿದೆ. ಮೆಲ್‌ ಪ್ರಾಗ್‌ 19-20 ನೇ ಶತಮಾನದ ಹಾಡುಗಳನ್ನು ಹಾಡುತ್ತಾ ಡ್ಯಾನ್ಸ್‌ ಮಾಡುತ್ತಾ ಇರುವ ಮಿಚಿಗನ್‌, ಪುರಪುರಿಯಲ್ಲಿ ವಾಸಿಸುವ ಮೋಟು ಮತ್ತು ಪತ್ಲು ಆಪ್ತಸ್ನೇಹಿತರು. ದೋಲಕಪುರದ ಛೋಟಾ ಭೀಮ್‌ನ ಕುಟುಂಬ ಒಂದೆಡೆ. ಇನ್ನೊಂದೆಡೆ ಕಾಡಿನ ಪ್ರಾಣಿಗಳ ಸಹವಾಸದಲ್ಲೇ ಬೆಳೆದ‌ ಮೊಗ್ಲಿ, ಆಮೆಯೊಂದರ ಮೇಲೆ ಸವಾರಿ ಮಾಡುತ್ತಿರುವ ದೃಶ್ಯ ನಗೆ ಉಕ್ಕಿಸುತ್ತದೆ. ಸೂಪರ್‌ ಮ್ಯಾನ್‌ ಸಹ ಈ ಪಾರ್ಕ್‌ಲ್ಲಿ ತನ್ನ ತೋಳ್ಬಲ ಪ್ರದರ್ಶನಕ್ಕೆ ನಿಂತಿದ್ದಾನೆ.

ಜೀವನವಿಡೀ ಸಗಣಿಯನ್ನು ಉಂಡೆಮಾಡಿ ಅದನ್ನು ಉರುಳಿಸುವುದರಲ್ಲೇ ಕಾಲ ಕಳೆಯುವ ಕಾಪೋರೋಫಾಗಸ್‌ ಕೀಟಗಳು, ಶುಭ್ರವಾದ, ನಯವಾದ, ಸಗಣಿಯನ್ನು ಹುಡುಕುವುದರೊಂದಿಗೆ ತನ್ನ ದಿನ ಪ್ರಾರಂಭಿಸುವ ಡಂಗ್‌-ಬೀಟಲ್ಸ್‌ ಇಷ್ಟೆಲ್ಲಾ ಸಿಮೆಂಟ್‌ ಆಕೃತಿಗಳಿವೆ. ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 35-40 ಕಲಾವಿದರು ಪರಿಶ್ರಮ ವಹಿಸಿ 106 ಕಾಟೂìನ್‌ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಇಟ್ಟಿಗೆ, ಕಬ್ಬಿಣ, ಮರಳು ಮತ್ತಿತರೆ ಕಚ್ಚಾ ಸಾಮಗ್ರಿಗಳನ್ನು ಬಳಸಿ ನಿರ್ಮಿಸಲಾಗಿರುವ ವಿಭಿನ್ನ ಉದ್ಯಾನವನ ಇದಾಗಿದೆ. ದಾಂಡೇಲಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲು ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜೊತೆಗೆ ಮನರಂಜನೆಗಾಗಿ ಜಿಮಾಶಿಯಂ, ಮಲ್ಟಿ ಪ್ಲೇ ಮಾಡಲಾಗಿದೆ. ದಂಡಕಾರಣ್ಯದ ಒಳಗಿರುವ ಯಾವುದೇ ಒಂದು ಮರವನ್ನೂ ಕಡಿಯದೆ. ಆಲಂಕಾರಿಕ ಹೂವು ಮತ್ತು ಹಣ್ಣಿನ ಗಿಡಗಳನ್ನೂ ಅಲ್ಲಿ ನೆಟ್ಟು ನೈಸರ್ಗಿಕ ಸನ್ನಿವೇಶದಲ್ಲೇ ಕಾಟೂìನ್‌ ಶಿಲ್ಪಗಳನ್ನು ನಿರ್ಮಿಸಲಾಗಿದೆ.

Advertisement

ಕಲಾವಿದರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಪ್ರತಿಭಾನ್ವೇಷಣೆ ಕಾರ್ಯವನ್ನೂ ನಡೆಸಲಾಗುತ್ತದೆ. ಈ ಕಾಟೂìನ್‌ ಲೋಕ ಎಲ್ಲರಿಗೂ ಪರಿಸರದ ಮಹತ್ವವನ್ನು ಮನವರಿಕೆ ಮಾಡಿಕೊಡುತ್ತಲೇ ಪರಿಸರ ರಕ್ಷಣೆಯ ಮನೋಭಾವದ ಬೀಜ ಬಿತ್ತುವುದು ಅತ್ಯಂತ ಮಹತ್ವದ ವಿಷಯ. ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿಗಾಗಿ ಪ್ಯಾರಾಗೊಲ ಮಾಹಿತಿ ಕೇಂದ್ರವನ್ನು ನಿರ್ಮಿಸಲಾಗಿದೆ. ದಾಂಡೇಲಿ ಕಡೆ ಏನಾದರೂ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದರೆ ಈ ಕಾಟೂìನ್‌ ಪಾರ್ಕ್‌ಗೆ ಬಂದು ಹೋಗಿ.

ಸಮಯ: ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ.
ಪ್ರವೇಶ ಶುಲ್ಕ: ದೊಡ್ಡವರಿಗೆ 10 ರೂ. ಮಕ್ಕಳಿಗೆ 5 ರೂ.

-ಟಿ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next