Advertisement

ಬೀದರ್ ರೈಲುಗಳು ಈಗ ಪರಿಸರ ಸ್ನೇಹಿ! ಮಾಲಿನ್ಯ ತಡೆ –ಆರ್ಥಿಕ ನಷ್ಟ ಕಡಿಮೆ

12:15 PM Jan 31, 2022 | Team Udayavani |

ಬೀದರ್ : ಗಡಿ ಜಿಲ್ಲೆ ಬೀದರನಲ್ಲಿ ಮೊಟ್ಟ ಮೊದಲ ಬಾರಿಗೆ ವಿದ್ಯುತ್‌ ಚಾಲಿತ ರೈಲು ಸಂಚಾರಕ್ಕೆ ಶುಕ್ರದೆಸೆ ಆರಂಭವಾಗಿದೆ. ವಿಕಾರಾಬಾದ್‌ನಿಂದ ಖಾನಾಪುರ ನಡುವಿನ 105 ಕಿ.ಮೀ ರೈಲ್ವೆ ಲೈನ್‌ ಪೂರ್ಣಗೊಂಡಿರುವ ಹಿನ್ನೆಲೆ ಜಿಲ್ಲೆಯ ರೈಲುಗಳು ವಿದ್ಯುತ್‌ ಚಾಲಿತ ರೈಲುಗಳಾಗಿ ಪರಿವರ್ತನೆಗೊಂಡು ಸಂಚಾರ ಶುರು ಮಾಡಿವೆ. ಇದರಿಂದ ಆರ್ಥಿಕ ಹೊರೆ ತಗ್ಗುವುದರ ಜತೆಗೆ ಪರಿಸರ ಸ್ನೇಹಿ ಎನಿಸಿಕೊಂಡಿವೆ.

Advertisement

ಪ್ರಯಾಣಿಕರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಹೆಸರುವಾಸಿಯಾಗಿರುವ ರೈಲ್ವೆ ಇಲಾಖೆ ಆಧುನೀಕರಣದತ್ತ ಹೆಜ್ಜೆಯನ್ನಿಡುತ್ತಿದೆ. ಡೀಸೆಲ್‌ ಚಾಲಿತ
ರೈಲುಗಳನ್ನು ವಿದ್ಯುತೀಕರಣಗೊಳಿಸಿ ಆ ಮೂಲಕ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅದರಂತೆ ಸಿಕಂದ್ರಾಬಾದ್‌
ರೈಲ್ವೆ ವಿಭಾಗಕ್ಕೆ ಬರುವ ವಿಕಾರಾಬಾದ್‌ನಿಂದ ಖಾನಾಪುರವರೆಗೆ ರೈಲ್ವೆ ಲೈನ್‌ ವಿದ್ಯುದ್ದೀಕರಣ ಕಾಮಗಾರಿ ಮುಗಿದು ಪ್ರಯಾಣಿಕರ ಸೇವೆಗೆ ಲೋಕಾರ್ಪಣೆಗೊಂಡಿವೆ.

ಸುಮಾರು 262.12 ಕೋಟಿ ರೂ. ಅನುದಾನದಲ್ಲಿ ತೆಲಂಗಾಣಾದ ವಿಕಾರಾಬಾದನಿಂದ ಮಹಾರಾಷ್ಟ್ರದ ಪರಳಿಯವರಿಗೆ 269 ಕಿ.ಮೀ ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ಮಂಜೂರಾಗಿದ್ದು, ಈ ಪೈಕಿ ವಿಕಾರಾಬಾದ್‌ ನಿಂದ ಬೀದರ ಜಿಲ್ಲೆಯ ಖಾನಾಪುರ ಜಂಕ್ಷನ್‌ವರೆಗಿನ ಕೆಲಸ ಮುಗಿದಿದೆ.

ರೈಲ್ವೆ ಇಲಾಖೆ ಟ್ರಯಲ್ ರನ್‌ ಸಹ ಪೂರ್ಣಗೊಳಿಸಿ ಜ. 24ರಿಂದ ಈ ಮಾರ್ಗದ ಹಳಿಗಳ ಮೂಲಕ ವಿದ್ಯುತ್‌ ಚಾಲಿತ ರೈಲುಗಳ ಓಡಾಟ ಯಶಸ್ವಿಯಾಗಿ ಶುರುವಾಗಿದೆ.

ಇದನ್ನೂ ಓದಿ : ರಾಷ್ಟ್ರಪತಿಗಳ ಭಾಷಣ: ಪಕ್ಷಬೇಧವಿಲ್ಲದೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಸಂಸದರು

Advertisement

ಸದ್ಯ ಜಿಲ್ಲೆಯಿಂದ ಬೀದರ- ಯಶವಂತಪುರ (16571, ನಾಲ್ಕು ದಿನ) ಮತ್ತು ಯಶವಂತಪುರ- ಬೀದರ (16572 ನಾಲ್ಕು ದಿನ) ರೈಲು ಸಂಚರಿಸಲಿದೆ. ಜತೆಗೆ ಬೀದರ- ಹೈದ್ರಾಬಾದ (17010),
ಹೈದ್ರಾಬಾದ್‌- ಬೀದರ ಇಂಟರ್‌ಸಿಟಿ (17009), ಬೀದರ- ಮಚ್ಚಲಿಪಟ್ನಂ (12750), ಮಚ್ಚಲಿಪಟ್ನಂ- ಬೀದರ (12749) ಪ್ರತಿನಿತ್ಯ ರೈಲುಗಳು ಈ ವಿದ್ಯುತ್ತಿಕರಣಗೊಂಡ ರೈಲ್ವೆ ಲೈನ್‌ ಮೂಲಕ
ಚಲಿಸುತ್ತಿವೆ. ಇನ್ನುಳಿದ 164 ಕಿ.ಮೀ ರೈಲು ಮಾರ್ಗದ ವಿದ್ಯುತ್ತೀಕರಣ ಕಾರ್ಯ ಪ್ರಗತಿಯಲ್ಲಿದ್ದು, 2023ರವರೆಗೆ ಪೂರ್ಣಗೊಳಿಸುವ ಗುರಿಯನ್ನ ರೈಲ್ವೆ ವಿಭಾಗ ಹೊಂದಿದೆ.

ಈ ಯೋಜನೆ ಪೂರ್ಣಗೊಂಡಲ್ಲಿ ಹೈದ್ರಾಬಾದ್‌-ಔರಂಗಾಬಾದ್‌, ನಾಂದೇಡ್‌ ಇಂಟರಸಿಟಿ, ತಿರುಪತಿ-ಲಾತೂರ, ಬೀದರ-ಮುಂಬೈ ಸೇರಿ ಇತರ ರೈಲು ಜಿಲ್ಲೆಯ ವಿದ್ಯುತ್‌ ಚಾಲಿತ ಹಳಿಗಳ ಮೇಲೆ ಸಂಚರಿಸಲಿವೆ.

ಸದ್ಯದ ಡೀಸೆಲ್‌ ರೈಲುಗಳು ಕಾರ್ಬನ್‌ ಡೈ ಆಕ್ಸೈಡ್ ಹೊರಸೂಸುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಎಲೆಕ್ಟ್ರಿಕಲ್‌ ರೈಲಿನಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಕಡಿಮೆಯಾಗಲಿದೆ. ಜೊತೆಗೆ ರೈಲುಗಳು ವೇಗವಾಗಿ ಸಂಚರಿಸುವ ಸಾಮರ್ಥ್ಯವೂ ಹೊಂದಲಿವೆ.

ಬೀದರನಿಂದ ವಿಕಾರಬಾದ್‌ವರೆಗೆ ಮೊದಲು ರೈಲು ಸಂಚರಿಸಿ 88 ವರ್ಷಗಳ ಬಳಿಕ ಬೀದರನಿಂದ ಪ್ರಥಮ ಬಾರಿಗೆ ವಿದ್ಯುತ್ತಿಕರಣದ ಲೈನ್‌ ಮೇಲೆ ಜಿಲ್ಲೆಯ ರೈಲು ಸಂಚರಿಸುತ್ತಿವೆ. ರೈಲ್ವೆ ಯೋಜನೆಗಳು ಗಗನಕುಸುಮ ಎಂಬಂತಿದ್ದ ಜಿಲ್ಲೆಯಲ್ಲಿ ಈಗ ಕಳೆದೊಂದು ದಶಕದಿಂದ ಸುಗ್ಗಿಯ ಕಾಲ ಎನ್ನುವಂತಿದ್ದು, ವಿಶೇಷವಾಗಿ ಈ ರೈಲುಗಳು ಬೀದರ ರೈಲ್ವೆ ಇತಿಹಾಸದಲ್ಲಿ ಹೊಸ
ಮೈಲಿಗಲ್ಲು ಸಾಧಿಸಿದೆ.

ಬೀದರ ಕ್ಷೇತ್ರಕ್ಕೆ 2014ರ ನಂತರ ರೈಲ್ವೆ ಇಲಾಖೆಯಿಂದ ಅತ್ಯಮೂಲ್ಯ ಕೊಡುಗೆಳು ಸಿಕ್ಕಿದ್ದು, ಈಗ ವಿದ್ಯುತ್‌ ಚಾಲಿತ ರೈಲು ಸಂಚರ ಜಿಲ್ಲೆಯ ರೈಲ್ವೆಯ ಇತಿಹಾಸಕ್ಕೆ ಮತ್ತೂಂದು ಹೊಸ
ಮೈಲಿಗಲ್ಲು ಸಾಧಿಸಿದೆ. ವಿಕಾರಾಬಾದ- ಪರಳಿಯವರಿಗೆ ರೈಲ್ವೆ ವಿದ್ಯುತ್ತಿಕರಣ ಕಾಮಗಾರಿ ಪೈಕಿ ವಿಕಾರಾಬಾದ್‌ನಿಂದ ಖಾನಾಪುರವರೆಗಿನ 105 ಕಿ.ಮೀ ಕೆಲಸ ಮುಗಿದಿದ್ದು, ಈ ಲೈನ್‌ ಗಳಲ್ಲಿ ಜಿಲ್ಲೆಯ ರೈಲು ಸಂಚಾರ ಶುರುವಾಗಿದೆ. ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಲಿದೆ ಮತ್ತು ರೈಲ್ವೆ ಇಲಾಖೆಗೆ ಆಗುತ್ತಿದ್ದ ಆರ್ಥಿಕ ನಷ್ಟ ತಗ್ಗಲಿದೆ. ಬಾಕಿ ಉಳಿದ ವಿದ್ಯುತ್‌ ಲೈನ್‌ ಕಾಮಗಾರಿ ಸಹ ಶೀಘ್ರ ಪೂರ್ಣಗೊಳ್ಳಲಿದೆ.
– ಭಗವಂತ ಖೂಬಾ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next