ಬಾಗಲಕೋಟೆ: ಬಸವೇಶ್ವರ ಸಿಬಿಎಸ್‌ಇ ಶಾಲೆಯ 8ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು, ಪರಿಸರ ಸ್ನೇಹಿ ಫೋಟೋ ವಿಘಟನೆ ಯಂತ್ರ ಕಂಡುಹಿಡಿದಿದ್ದು, ಸರ್ಕಾರ ಮಾನ್ಯತೆ ನೀಡಿದರೆ, ಈ ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ಹೊರಹೊಮ್ಮಲಿದ್ದಾರೆ.
ಸಿಬಿಎಸ್‌ಇ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾದ ಸುಮುಖ ಎಂ ಹೆಗಡೆ ಹಾಗೂ ದೇವ್ ಜಿ. ಪವಾರ್ ಅವರು ಅಟಲ್ ಟಿಂಕರಿಂಗ್ ಮ್ಯಾರಾಥಾನ್- 2018 ಸ್ಪರ್ಧೆಯಲ್ಲಿ ಪರಿಸರ ಸ್ನೇಹಿ ಫೋಟೋ ವಿಘಟನೆ ಯಂತ್ರದ ಅನ್ವೇಷಣೆ ಮಾಡಿದ್ದು, ಟಾಪ್ 100ರಲ್ಲಿ ಆಯ್ಕೆಯಾಗಿದ್ದಾರೆ.
ಈ ಯಂತ್ರದ ಸಹಾಯದಿಂದ ಪರಿಸರದಲ್ಲಿನ ವಿಷಕಾರಿ ಅನಿಲವಾದ ಇಂಗಾಲದ ಡೈಆಕ್ಸೈಡ್‌ನ್ನು ಆಮ್ಲಜನಕವನ್ನಾಗಿ ಪರಿವರ್ತಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬಹುದು ಎಂಬುದನ್ನು ಮಕ್ಕಳು ತಮ್ಮ ಪ್ರಾತ್ಯಕ್ಷಿಕೆಯಿಂದ ನಿರೂಪಿಸಿದ್ದಾರೆ. ಸರ್ಕಾರದ ಮಾನ್ಯತೆ ಪಡೆದುಕೊಂಡರೆ ಅದರ ತಯಾರಿಕೆಯ ಹಕ್ಕನ್ನು ಮಕ್ಕಳು ಪಡೆದುಕೊಳ್ಳಲಿದ್ದಾರೆ. ಅಕ್ಟೋಬರ್ 2018ರಲ್ಲಿ ಕೇಂದ್ರ ಸರ್ಕಾರದ ಎಐಎಂ ನೀತಿ ಆಯೋಗವು ಅಟಲ್ ಟಿಂಕರಿಂಗ್ ಮ್ಯಾರಾಥಾನ್ 2018 ಎಂಬ ಸ್ಪರ್ಧೆಯನ್ನು ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿತ್ತು. ಮಕ್ಕಳು ತಮ್ಮಲ್ಲಿನ ವೈಜ್ಞಾನಿಕ ಅನ್ವೇಷಣಾ ಕೌಶಲ್ಯ ತೋರ್ಪಡಿಸುವ ಮೂಲಕ ಅದು ಸಮಾಜಕ್ಕೆ ಉಪಯೋಗವಾಗುವುದರ ಬಗೆಗಿನ ಈ ಸ್ಪರ್ಧೆಯಲ್ಲಿ ದೇಶದ ಎಲ್ಲ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಟಲ್ ಟಿಂಕರಿಂಗ್ ಲ್ಯಾಬಿನ್ ಪ್ರಭಾರಿ ತನುಜಬಾಯಿ ನಾಯ್ಕ ಯಶಸ್ಸು ಪಡೆದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಡಾ| ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಆಡಳಿತಾಧಿಕಾರಿ ಎನ್.ಜಿ. ಕರೂರ, ಶಾಲೆಯ ಪ್ರಾಚಾರ್ಯ ಸಿ.ಬಿ. ಸುರೇಶ ಹೆಗ್ಡೆ ಅಭಿನಂದಿಸಿದ್ದಾರೆ.