Advertisement

ಪರಿಸರಸ್ನೇಹಿ ಇ-ಆಟೋರಿಕ್ಷಾ

09:56 AM Nov 25, 2019 | mahesh |

ದೇಶದಲ್ಲಿ ಮುಖ್ಯವಾಗಿ ಬೆಳೆಯುತ್ತಿರುವ ನಗರಗಳನ್ನು ಗಮನದಲ್ಲಿಟ್ಟುಕೊಂಡು ಹಲವಾರು ಹೊಸ ಮಾದರಿಯ ಸಂಚಾರ ಕ್ರಮಗಳನ್ನು ಸರಕಾಗಳು ಜಾರಿಗೊಳಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ವಿದ್ಯುತ್‌ ಚಾಲಿತ ಅಟೋ ರಿಕ್ಷಾಗಳ ಉತ್ತೇಜನಕ್ಕಾಗಿ ಸರಕಾವೂ ಕೂಡ ಒಂದು ಹಂತದ ಚಿಂತನೆ ನಡೆಸಿದೆ. ಎಲೆಕ್ಟ್ರಿಕ್‌ ವಾಹನಗಳು ಪರಿಸರ ಸ್ನೇಹಿ ಉಪಕ್ರಮವಾಗಿದ್ದು ಈ ಯೋಜನೆಯನ್ನು ಸ್ಮಾರ್ಟ್‌ ನಗರಿ ಮಂಗಳೂರಿಗೆ ಜಾರಿಗೆ ತರುವುದು ಅವಶ್ಯವಾಗಿದೆ.

Advertisement

ವಿದ್ಯುತ್‌ ಚಾಲಿತ ಆಟೋರಿಕ್ಷಾಗಳಿಗೆ ಇನ್ನಷ್ಟು ಉತ್ತೇಜನಕಾರಿ ಕ್ರಮಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ. ಪ್ರಸ್ತುತ ಇರುವ ಆಟೋರಿಕ್ಷಾಗಳನ್ನು ವಿದ್ಯುತ್‌ ಆಟೋಗಳಾಗಿ ಪರಿವರ್ತಿಸಲು ಹೆಚ್ಚಿನ ಮೊತ್ತದ ಸಹಾಯಧನ ನೀಡುವ ಪ್ರಸ್ತಾವ ರೂಪಿಸಿದ್ದು ಸರಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಸಾರಿಗೆ ಆಯಕ್ತರು ಈಗಾಗಲೇ ತಿಳಿಸಿದ್ದಾರೆ. ನೂತನ ಯೋಜನೆಯನ್ನು ಪ್ರಥಮವಾಗಿ ಬೆಂಗಳೂರಿನಲ್ಲಿ ಜಾರಿಗೆ ತರುವುದು ಸರಕಾರದ ಚಿಂತನೆಯಾಗಿದೆ. ಆದರೆ ಈ ಉತ್ತೇಜನಕಾರಿ ಕ್ರಮಗಳು ಕೇವಲ ಬೆಂಗಳೂರಿಗೆ ಮಾತ್ರ ಮೀಸಲಾಗದೆ ಮಂಗಳೂರು ಸಹಿತ ಇತರ ಪ್ರಮುಖ ನಗರಗಳಿಗೂ ವಿಸ್ತರಣೆಯಾದರೆ ವಿದ್ಯುತ್‌ ಚಾಲಿತ ಆಟೋರಿಕ್ಷಾಗಳ ಅಳವಡಿಕೆಗೆ ಆಸಕ್ತಿ ತೋರುವವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮಾತ್ರವಲ್ಲದೆ ಸ್ವತ್ಛ , ಪರಿಸರ ಸ್ನೇಹಿ ನಗರ ಪರಿಕಲ್ಪನೆಗೆ ಪೂರವಾಗುತ್ತದೆ.

ಎರಡನೆಯದಾಗಿ ಪ್ರಸ್ತುತ ಇರುವ ಎಲ್‌ಪಿಜಿ ಆಧಾರಿತ 4 ಸ್ಟ್ರೋಕ್‌ ಆಟೋರಿಕ್ಷಾಗಳನ್ನು ಎಲೆಕ್ಟ್ರಿಕ್‌ ಆಟೋರಿಕ್ಷಾಗಳನ್ನಾಗಿ ಪರಿವರ್ತಿಸಲು 1 ಲಕ್ಷ ರೂ. ಹಾಗೂ ಹೊಸದಾಗಿ ಎಲೆಕ್ಟ್ರಿಕ್‌ ಆಟೋರಿಕ್ಷಾಗಳನ್ನು ಖರೀದಿಸುವವರಿಗೆ 1.25 ಲಕ್ಷ ರೂ. ಸಹಾಯಧನ ನೀಡುವುದು ಪ್ರಸ್ತಾವನೆಯಲ್ಲಿದೆ. ಕೇಂದ್ರ ಸರಕಾರದ ಫೇಮ್‌ (ಫಾಸ್ಟರ್‌ ಆಡಾಪ್ಟಶನ್‌ ಆ್ಯಂಡ್‌ ಮ್ಯಾನುಫೆಕ್ಚರಿಂಗ್‌ ಆಫ್‌ ಎಲೆಕ್ಟ್ರಿಕ್‌ಲ್‌ ವೆಹಿಕಲ್‌ )ಯೋಜನೆ ಜಾರಿಗೆ ತಂದಿದೆ. ಬೆಂಗಳೂರು ಸೇರಿದಂತೆ ದೇಶ ಒಂದನೆ ಹಂತದ ಮತ್ತು ಎರಡನೇ ಹಂತದ ಕೆಲವು ನಗರಗಳು ಇದರಲ್ಲಿ ಸೇರ್ಪಡೆಗೊಂಡಿವೆ. ಈ ಯೋಜನೆಯಡಿ ವಿದ್ಯುತ್‌ಚಾಲಿತ ಆಟೋರಿಕ್ಷಾಗಳಿಗೆ 60,000 ರೂ. ಸಹಾಯಧನ ನೀಡಲಾಗುತ್ತಿದೆ. ಹೊಸ ವಿದ್ಯುತ್‌ಚಾಲಿತ ಆಟೋಗೆ ಸುಮಾರು 3.5 ಲಕ್ಷ ರೂ. ಆಗುತ್ತದೆ. ಸರಕಾರದ ಸಹಾಯಧನ ಹಾಗೂ ಫೇಮ್‌ ಯೋಜನೆಯ ಸಹಾಯಧನ ಸೇರಿದರೆ ಸುಮಾರು 2.10 ಲಕ್ಷ ರೂ.ವರೆಗೆ ಸಹಾಯಧನ ಲಭಿಸುತ್ತದೆ. ಉಳಿದಂತೆ ಸುಮಾರು 1.40 ಲಕ್ಷ ರೂ. ಮೊತ್ತವನ್ನು ಖರೀದಿದಾರರು ಭರಿಸಬೇಕಾಗುತ್ತದೆ. ಅದಕ್ಕೂ ಸಾಲಸೌಲಭ್ಯ ದೊರೆಯಲಿದೆ. ಅದುದರಿಂದ ಆಟೋರಿಕ್ಷಾ ಮಾಲಕರಿಗೆ ಹೆಚ್ಚಿನ ಹೊರೆಯಾಗುವುದಿಲ್ಲ ಎಂಬುದು ಸಾರಿಗೆ ಇಲಾಖೆಯ ಲೆಕ್ಕಚಾರ.

ಮಂಗಳೂರು ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಮಂಗಳೂರು ಸ್ಮಾರ್ಟ್‌ ನಗರವಾಗಿ ರೂಪುಗೊಳ್ಳುತ್ತಿದೆ. ಸ್ವತ್ಛ, ಸ್ವಾಸ್ಥ್ಯ, ಸುಂದರ ಮತ್ತು ಪರಿಸರ ಸ್ನೇಹಿ ನಗರ ಸ್ಮಾರ್ಟ್‌ ಸಿಟಿ ಪರಿಕಲ್ಪನೆಯ ಮುಖ್ಯ ಉದ್ದೇಶ. ವಾಹನಗಳಿಂದಾಗುವ ವಾಯುಮಾಲಿನ್ಯ ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಎರಡು ಹಂತಗಳ ಫೇಮ್‌ ಯೋಜನೆ ಜಾರಿಗೆ ತಂದಿದೆ. ಫೇಮ್‌ ಯೋಜನೆಯ ಎರಡನೇ ಹಂತವನ್ನು ಕಳೆದ ವರ್ಷ ಘೋಷಿಸಿದ್ದು ಈ ವರ್ಷದ ಎ. 1 ರಿಂದ ಜಾರಿಗೆ ಬಂದಿದೆ. ಒಟ್ಟು ಮೂರು ವರ್ಷಗಳ ಈ ಯೋಜನೆ 2022 ರವರೆಗೆ ಇದ್ದು ಕೇಂದ್ರ ಸರಕಾರ 10,000 ಕೋ.ರೂ. ಮೊತ್ತಕ್ಕೆ ಮಂಜೂರಾತಿ ನೀಡಿದೆ. ಫೇಮ್‌-2ರಲ್ಲಿ ದೇಶದಲ್ಲಿ 10ಲಕ್ಷ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು, 5 ಲಕ್ಷ ಎಲೆಕ್ಟ್ರಿಕ್‌ ಆಟೋರಿಕ್ಷಾಗಳು ಹಾಗೂ 55,000 ಎಲೆಕ್ಟ್ರಿಕ್‌ ಚತುಷcಕ್ರ ವಾಹನಗಳು, 7,000 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ನೆರವು ನೀಡಲಾಗುತ್ತದೆ. ಫೇಮ್‌-2 ಯೋಜನೆಯಲ್ಲಿ ಮಂಗಳೂರನ್ನು ಸೇರ್ಪಡೆಗೊಳಿಸಿ ಎಲೆಕ್ಟ್ರಿಕ್‌ ವಾಹನಗಳ ನಗರವಾಗಿ ರೂಪಿಸಲು ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಗಳು ಈಗಾಗಲೇ ವ್ಯಕ್ತವಾಗಿದೆ. ಮಂಗಳೂರು ನಗರದೊಳಗೆ ಸುಮಾರು 8,000 ರಿಕ್ಷಾಗಳಿವೆ. ಉಳ್ಳಾಲ, ತಲಪಾಡಿ, ವಾಮಂಜೂರು ಸೇರಿಸಿದರೆ ಒಟ್ಟು 15,000 ಆಗಬಹುದು ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರವನ್ನು ದೇಶದ ಎಲೆಕ್ಟ್ರಿಕ್‌ ವಾಹನಗಳ ರಾಜಧಾನಿಯಾಗಿ ರೂಪಿಸುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆ ಹಾಕಿಕೊಂಡಿದ್ದು ಎಲೆಕ್ಟ್ರಿಕ್‌ ವಾಹನ ನೀತಿಯನ್ನು ರೂಪಿಸಿ ಅನುಷ್ಟಾನಗೊಳಿಸಿದ್ದು ಎಲೆಕ್ಟ್ರಿಕಲ್‌ ವಾಹನಗಳ ಬಳಕೆಗೆ ರಾಜ್ಯ ಸರಕಾರದಿಂದ ಉತ್ತೇಜನಕಾರಿ ಯೋಜನೆಗಳು ಜಾರಿಯಲ್ಲಿದೆ. ಸರಕಾರಿ ಇಲಾಖೆಗಳ ವಾಹನಗಳನ್ನು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಇದಕ್ಕೆ ಪೂರಕವಾಗಿ ರಿಚಾರ್ಜ್‌ ಕೇಂದ್ರಗಳು ಆರಂಭಗೊಂಡಿವೆ. ಎಲೆಕ್ಟ್ರಿಕ್‌ ವಾಹನಗಳಿಗೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳು ಮಂಗಳೂರು ನಗರದಲ್ಲೂ ಅನುಷ್ಟಾನಗೊಳ್ಳುವುದು ಅವಶ್ಯವಿದೆ. ಮಂಗಳೂರು ನಗರ ಕೂಡ ಭವಿಷ್ಯದಲ್ಲಿ ಎಲೆಕ್ಟ್ರಿಕಲ್‌ ವಾಹನಗಳ ನಗರವಾಗಿ ಮೂಡಿಬರುವಲ್ಲಿ ಪೂರಕ ಯೋಜನೆಗಳು ರೂಪುಗೊಂಡರೆ ವಾಯುಮಾಲಿನ್ಯ ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.

Advertisement

ಪ್ರಸ್ತಾವನೆಯಲ್ಲಿರುವ ಅಂಶಗಳು
ಸರಕಾರದ ಪ್ರಸ್ತಾವನೆ ಪ್ರಕಾರ ಬೆಂಗಳೂರು ನಗರದಲ್ಲಿ ವಿದ್ಯುತ್‌ ಚಾಲಿತ ಆಟೋರಿಕ್ಷಾಗಳ ಅಳವಡಿಕೆಗೆ ಎರಡು ವಿಧದ ಉತ್ತೇಜನ ಕ್ರಮಗಳನ್ನು ಅಳವಡಿಸಲಾಗುತ್ತದೆ. ಟು-ಸ್ಟ್ರೋಕ್‌ ಆಟೋಗಳನ್ನು ಸಂಪೂರ್ಣವಾಗಿ ತೆಗದುಹಾಕಿ ವಿದ್ಯುತ್‌ಚಾಲಿತ ಆಟೋರಿಕ್ಷಾಗಳನ್ನು ಅಳವಡಿಸಲು ಪ್ರಸ್ತುತ ನೀಡುವ ಸಹಾಯಧನವನ್ನು 5 ಪಟ್ಟು ಹೆಚ್ಚಿಸಲಾಗುತ್ತದೆ. ಪ್ರಸ್ತುತ 30,000 ರೂ. ಸಹಾಯಧನ ನೀಡಲಾಗುತ್ತಿದ್ದು ಅದಕ್ಕೆ ಆಟೋರಿಕ್ಷಾ ಚಾಲಕ-ಮಾಲಕರಿಂದ ಹೆಚ್ಚಿನ ಸ್ಪಂದನೆ ದೊರಕಿಲಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು 1.5 ಲಕ್ಷ ರೂ. ಗೆ ಏರಿಸಲು ಚಿಂತನೆ ನಡೆಸಲಾಗಿದೆ.

-   ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next