ಚಿತ್ರದುರ್ಗ: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಎಂಟು ಸರ್ಕಾರಿ ಬಾಲಕಿಯರ ಹಾಸ್ಟೆಲ್ ಕಟ್ಟಡ ಕಾಮಗಾರಿಗೆ ವಿಘ್ನ ಎದುರಾಗಿದೆ. ಈ ಸಂಬಂಧ ಎರಡು ಇಲಾಖೆಗಳ ಮಧ್ಯೆ ಸಮನ್ವಯ ಕೊರತೆ ಎದುರಾಗಿರುವುದು ಕಂಡು ಬಂದಿದೆ.
ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳಿಗೆ ಎಚ್. ಆಂಜನೇಯ ಸಮಾಜಕಲ್ಯಾಣ ಸಚಿವರಾಗಿದ್ದಾಗ ತಲಾ 3.50 ಕೋಟಿ ರೂ. ವೆಚ್ಚದಲ್ಲಿ 14 ಹಾಸ್ಟೆಲ್‌ಗಳನ್ನು ನಿರ್ಮಿಸಲು ಅನುದಾನ ಮಂಜೂರು ಮಾಡಿದ್ದರು. ಒಂದು ವರ್ಷದ ಹಿಂದೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು.
ಆದರೆ ರೇಷ್ಮೆ ಇಲಾಖೆ ಅಧೀನದಲ್ಲಿರುವ ಜಾಗ ಮತ್ತು ಕಟ್ಟಡವನ್ನು ತೆರವುಗೊಳಿಸಲು ಮೀನಾಮೇಷ ಎಣಿಸುತ್ತಿರುವುದರಿಂದ ಎಂಟು ಹಾಸ್ಟೆಲ್‌ಗಳ ನಿರ್ಮಾಣ ನನೆಗುದಿಗೆ ಬಿದ್ದಿದೆ.
ನಗರದ ಕೆಳಗೋಟೆ ಗ್ರಾಮದ ತುರುವನೂರು ರಸ್ತೆಯ ಸನಂ 54 ರಲ್ಲಿರುವ 2.16 ಎಕರೆ ಜಮೀನನ್ನು ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯ ಸ್ಥಾಪಿಸಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಗೆ 2017, ಜನವರಿ 28ರಂದು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಜಿಲ್ಲಾಡಳಿತ ಮಂಜೂರು ಮಾಡಿದ ತಕ್ಷಣ ಅಂದಿನ ಸಚಿವರು ಒಟ್ಟು 14 ಹಾಸ್ಟೆಲ್‌ಗಳನ್ನು ಮಂಜೂರು ಮಾಡಿ ನಗರದ ವಿವಿಧ ಜಾಗಗಳಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿತ್ತು.
ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಸಾಮಾನ್ಯ ವಿಭಜನೆ (ಪಿಯುಸಿ), ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿ ನಿಲಯ ವಿಭಜನೆ, ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯ ರಾಜ್ಯ ವಲಯ, ಮೆಟ್ರಿಕ್ ನಂತರದ ಬಾಲಕಿಯರ ಸಾಮಾನ್ಯ ರಾಜ್ಯ ವಲಯ, ಮೆಟ್ರಿಕ್ ನಂತರದ ಬಾಲಕಿಯರ ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾರ್ಥಿ ನಿಲಯ, ಮೆಟ್ರಿಕ್ ನಂತರದ ಮಹಿಳೆಯರ ನರ್ಸಿಂಗ್ ವಿದ್ಯಾರ್ಥಿನಿಲಯ, ಮೆಟ್ರಿಕ್ ನಂತರದ ಬಾಲಕಿಯರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿನಿಲಯ ಆರಂಭಿಸಲು ಟೆಂಡರ್ ಕರೆದು ಎಲ್ಲ ರೀತಿಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಇದೇ ಅವಧಿಯಲ್ಲಿ ಟೆಂಡರ್ ಕರೆಯಲಾದ ಉಳಿದ ಆರು ಹಾಸ್ಟೆಲ್ ಕಟ್ಟಡ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಆದರೆ ಸಾವಿರಾರು ಮಕ್ಕಳಿಗೆ ಆಶ್ರಯ ನೀಡುವಂತಹ ಎಂಟು ಹಾಸ್ಟೆಲ್‌ಗಳ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಅಡ್ಡಿಯಾಗಿದ್ದಾರೆ. ವಿಚಿತ್ರ ಎಂದರೆ ಈ ಜಾಗ ರೇಷ್ಮೆ ಇಲಾಖೆಗೂ ಸೇರಿಲ್ಲ. ಕಂದಾಯ ಇಲಾಖೆ ವ್ಯಾಪ್ತಿಯಲ್ಲಿದ್ದ ಈ ಜಾಗವನ್ನು ಬಿಸಿಎಂ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೂ ವಿನಾಕಾರಣ ಅಡ್ಡಿಪಡಿಸಲಾಗುತ್ತಿದೆ.
ಈ ಜಾಗದಲ್ಲಿ ಶಿಥಿಲಾವಸ್ಥೆಯಲ್ಲಿರುವ ಒಂದು ಕಟ್ಟಡ ಇದ್ದು ಆ ಕಟ್ಟಡದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ತುಕ್ಕು ಹಿಡಿದ ಕೆಲ ಯಂತ್ರೋಪಕರಣಗಳನ್ನು ಶೇಖರಿಸಿ ಇಡಲಾಗಿದೆ. ಈ ಯಂತ್ರೋಪಕರಣಗಳನ್ನು ಲೋಕೋಪಯೋಗಿ ಇಲಾಖೆಯೇ
ಮತ್ತೂಂದು ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಮುಂದಾಗಿದ್ದರೂ ರೇಷ್ಮೆ ಇಲಾಖೆ ಅಧಿಕಾರಿಗಳು ಸಹಕರಿಸುತ್ತಿಲ್ಲ. ಇದರಿಂದಾಗಿ ಹಿಂದುಳಿದ, ದಲಿತ ವರ್ಗಗಳ ಹೆಣ್ಣುಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ.
ಕೂಡಲೇ ಸಮಸ್ಯೆ ಬಗೆಹರಿಸಿ ನನೆಗುದಿಗೆ ಬಿದ್ದಿರುವ ಎಂಟು ಹಾಸ್ಟೆಲ್ ಕಟ್ಟಡಗಳನ್ನು ಪೂರ್ಣಗೊಳಿಸಲು ರೇಷ್ಮೆ ಇಲಾಖೆ
ಅಧಿಕಾರಿಗಳು ಸಹಕಾರ ನೀಡಬೇಕಿದೆ. ಈ ಮೂಲಕ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಎದುರಾಗಿರುವ ಅಡ್ಡಿಯನ್ನು ನಿವಾರಿಸಬೇಕಿದೆ.
ರೇಷ್ಮೆ ಇಲಾಖೆ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ. ಈ ಕುರಿತು ಪತ್ರ ಬರೆಯಲಾಗಿದ್ದು ಶೀಘ್ರದಲ್ಲೇ ರೇಷ್ಮೆ ಇಲಾಖೆಯ ಯಂತ್ರೋಪಕರಣಗಳನ್ನು ತೆರವುಗೊಳಿಸಿ ಬಿಸಿಎಂ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ. 14 ಹಾಸ್ಟೆಲ್‌ಗಳು ಏಕಕಾಲದಲ್ಲಿ ಮಂಜೂರಾಗಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಅದರಲ್ಲಿನ 6 ಹಾಸ್ಟೆಲ್ ಕಟ್ಟಡಗಳ ಕಾಮಗಾರಿ ಪೂರ್ಣಗೊಳ್ಳಲಿದ್ದು ಮುಂದಿನ ಒಂದು ತಿಂಗಳೊಳಗೆ ಬಿಸಿಎಂ ಇಲಾಖೆಗೆ ಹಸ್ತಾಂತರ ಮಾಡಲಾಗುತ್ತದೆ. ರೇಷ್ಮೆ ಇಲಾಖೆ
ತೆರವು ಮಾಡಿ ಜಾಗ ನೀಡಿದರೆ ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೆ ಎಂಟು ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸುತ್ತೇವೆ.
ಕೆ.ಜಿ. ಜಗದೀಶ್, ಎಇಇ, ಲೋಕೋಪಯೋಗಿ ಇಲಾಖೆ.
ಹರಿಯಬ್ಬೆ ಹೆಂಜಾರಪ್ಪ