Advertisement
ನಗರದ ಹೃದಯ ಭಾಗದಲ್ಲಿರುವ ಜೆ.ಪಿ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ತರಕಾರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮೊದಲಿದ್ದ ಹಳೆಯ ಮಳಿಗೆ ತೆರವು ಮಾಡಿ ಕಳೆದ ಮೂರು ವರ್ಷದ ಹಿಂದಷ್ಟೇ ಹೊಸ ಮಳಿಗೆಗೆ ಮಾಜಿ ಶಾಸಕ ಶಿವರಾಜ ತಂಗಡಗಿ ಅವರು ಭೂಮಿಪೂಜೆ ನೆರವೇರಿಸಿದ್ದರು. ಮಳಿಗೆ ನಿರ್ಮಾಣವಾದರೆ ಆಧುನಿಕ ಮಾರುಕಟ್ಟೆ ಸೌಲಭ್ಯ ದೊರೆಯುತ್ತದೆ ಎನ್ನುವ ವಾಗ್ಧಾನ ಮಾಡಿದ್ದರು. ಆದರೆ ಮಳಿಗೆ ನಿರ್ಮಾಣವಾಗಿ ಬರೊಬ್ಬರಿ ಒಂದು ವರ್ಷ ಗತಿಸಿದೆ. ಆದರೆ ವ್ಯಾಪಾರಸ್ಥರಿಗೆ ಪರಿಪೂರ್ಣವಾಗಿ ಹರಾಜು ಮಾಡಲಾಗಿಲ್ಲ.
Related Articles
Advertisement
ವಿಳಂಬ: ಈಗಿರುವ ಮಳಿಗೆಯ ಮೇಲ್ಭಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಕುರಿತು ಈ ಮೊದಲು ಶಿವರಾಜ ತಂಗಡಗಿ ಅವರು ವಾಗ್ಧಾನ ಮಾಡಿದ್ದರು. ಆದರೆ ಮೊದಲು ಮೇಲ್ಭಾಗದ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ನಂತರ ಕೆಳ ಮಳಿಗೆಗಳ ಬಾಡಿಗೆ ಹರಾಜು ಕರೆಯಿರಿ ಎಂಬ ತಕರಾರು ಮಾಡಿದ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತವಾಯಿತು. ನೂತನ ಮಾರುಕಟ್ಟೆಯಲ್ಲಿ 26 ಕಟ್ಟೆಗಳು ಹಾಗೂ 60 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ವ್ಯಾಪಾರಸ್ಥರು ಎಲ್ಲೆಂದರಲ್ಲಿ ವ್ಯಾಪಾರ ಮಾಡಿ ಕೊಳೆತ ಹಣ್ಣು, ತರಕಾರಿ ಬಿಸಾಡುತ್ತಿರುವುದರಿಂದ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ನಗರಸಭೆ ಎಷ್ಟೇ ಸ್ವಚ್ಛ ಮಾಡಿದರೂ ದುರ್ನಾತ ಕಡಿಮೆಯಾಗಲ್ಲ. ರಸ್ತೆ ಬದಿಯಲ್ಲಿ, ಚರಂಡಿ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ನಗರಸಭೆ ಕೂಡಲೇ ಮಳಿಗೆ ಹಂಚಿಕೆ ಮಾಡಿದರೆ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಇಲ್ಲವಾದರೆ ನಗರಸಭೆಗೆ ಬರಬೇಕಾದ ಆದಾಯ ಬರುವುದಿಲ್ಲ. ಈಗಾಗಲೇ ಒಂದು ವರ್ಷದಿಂದ ಆದಾಯವೂ ಬಂದಿಲ್ಲ.
•ದತ್ತು ಕಮ್ಮಾರ