Advertisement

ಪ್ರತಿಧ್ವನಿಸಿದ ಮಂಗಳೂರು ಗೋಲಿಬಾರ್‌

10:04 AM Feb 21, 2020 | Lakshmi GovindaRaj |

ವಿಧಾನ ಮಂಡಲ: ಮೂರನೇ ದಿನವಾದ ಬುಧವಾರವೂ “ಮಂಗಳೂರು ಗಲಭೆ ಪ್ರಕರಣ’ ವಿಧಾನಮಂಡಲದ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ವಿಧಾನಪರಿಷತ್‌ನಲ್ಲಿ ಕಲಾಪದ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯೆ ಜಯಮಾಲಾ, ಒಂದೆಡೆ ಮಾಜಿ ಸಚಿವ ಯು.ಟಿ.ಖಾದರ್‌ ನೀಡಿದ ಹೇಳಿಕೆ ಮುಂದಿಟ್ಟುಕೊಂಡು ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತದೆ. ಆದರೆ, ಅದೇ ಖಾದರ್‌ ಅವರ ರುಂಡ ಚೆಂಡಾಡುವುದಾಗಿ ಹೇಳಿದವರ ವಿರುದ್ಧ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ದ್ವಂದ್ವ ನೀತಿ ಯಾಕೆ ಎಂದು ಪ್ರಶ್ನಿಸಿದರು.

Advertisement

ಎಲ್ಲಿದೆ ಮಕ್ಕಳ ಹಕ್ಕು ಆಯೋಗ?: ಅದೇ ರೀತಿ, ಶಾಹಿನ್‌ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ನಾಟಕವೊಂದರಲ್ಲಿ ಪಾತ್ರ ಮಾಡಿದ ವಿದ್ಯಾರ್ಥಿನಿ ಹಾಗೂ ಆ ಮಗುವಿನ ತಾಯಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತದೆ. ಕೇವಲ ಐದು ದಿನಗಳ ಅಂತರದಲ್ಲಿ ಆ ಶಾಲೆಯ ಸುಮಾರು 52 ಮಕ್ಕಳನ್ನು ವಿಚಾರಣೆಗೊಳಪಡಿಸಿ ದ್ದಾರೆ. ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಗಳು ಇದ್ದೂ ಇಲ್ಲದಂತಾಗಿವೆ ಎಂದು ತರಾಟೆಗೆ ತೆಗೆದುಕೊಂಡರು. ನ್ಯಾಯಾಲಯ ಆ ತಾಯಿ-ಮಗಳಿಗೆ ಜಾಮೀನು ನೀಡಿದರೂ ತಲಾ ಎರಡು ಲಕ್ಷ ರೂ.ಠೇವಣಿ ಇಡಬೇಕಿದೆ.

ಆ ಹಣ ಕೂಡ ಅವರ ಬಳಿ ಇಲ್ಲ. ಇದನ್ನು ಸರ್ಕಾರವೇ ಭರಿಸಬೇಕು. ಇಡೀ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.  ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ ಸದಸ್ಯ ಆರ್‌.ಬಿ. ತಿಮ್ಮಾಪುರ, ಮಾತನಾಡಿದರೆ ದೇಶದ್ರೋಹದ ಕೇಸು ಹಾಕಲಾಗುತ್ತಿದೆ. ಮಂಗಳೂರು ಗಲಭೆಗೆ ಕೇರಳದಿಂದ ಜನರನ್ನು ಕರೆಸಲಾಗಿತ್ತು ಎಂದು ಪೊಲೀಸರು ಹೇಳುತ್ತಾರೆ. ಹಾಗಿದ್ದರೆ, ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು. ಚೆಕ್‌ಪೋಸ್ಟ್‌ಗಳು ಏನು ಮಾಡುತ್ತಿದ್ದವು ಎಂದು ಪ್ರಶ್ನಿಸಿದರು.

ನಾವು ಇಲ್ಲಿ ಇರಲೇಬಾರದಾ?: ಜೆಡಿಎಸ್‌ ಸದಸ್ಯ ನಜೀರ್‌ ಅಹಮದ್‌ ಮಾತನಾಡಿ, ದೇಶದಲ್ಲಿ ನಾವು (ಮುಸ್ಲಿಂ ಸಮುದಾಯ) 20-30 ಕೋಟಿ ಜನ ಇದ್ದೇವೆ. ನಾವೆಲ್ಲಾ ಇರಲೇಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೀರಾ? ನಾವೂ ನಿಮ್ಮಂತೆಯೇ ಈ ರಾಷ್ಟ್ರದ ಪ್ರಜೆಗಳು. ನಮಗೂ ಸಮಾನ ಹಕ್ಕಿದೆ. ಬದುಕಲು ಬಿಡಿ. ಮಂಗಳೂರು ಗಲಭೆಗೆ ಸಂಬಂಧಿಸಿದಂತೆ 32 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 29 ಕೇಸುಗಳನ್ನು ಸ್ವತ: ಪೊಲೀಸರೇ ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಪೂರ್ವಾಗ್ರಹಪೀಡಿತರಾಗಬೇಡಿ: ಆಗ ಮಧ್ಯ ಪ್ರವೇಶಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪೂರ್ವಾಗ್ರಹಪೀಡಿತರಾಗಿ ಮಾತನಾಡು ವುದು ಸರಿಯಲ್ಲ. ಮುಖಕ್ಕೆ ಬಟ್ಟೆಕಟ್ಟಿಕೊಂಡು ಕಲ್ಲು ಹೊಡೆದವರೆಲ್ಲಾ ದೇಶ ಪ್ರೇಮಿಗಳಾ? ಅದನ್ನು ಖಂಡಿಸಬೇಡವೇ ಎಂದು ಪ್ರಶ್ನಿಸಿದರು. ಇದಕ್ಕೆ ತಿರುಗೇಟು ನೀಡಿದ ಜೆಡಿಎಸ್‌ ಸದಸ್ಯ ಬಿ.ಎಂ.ಫಾರೂಕ್‌, ಮಂಗಳೂರು ಘಟನೆ ನಡೆದ ದಿನ ಖುದ್ದು ನಾನೇ ಆ ಸ್ಥಳದಲ್ಲಿ ಹಾಜರಿದ್ದೆ. ಏಳು ಜನರ ಮೇಲೆ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದರು.

Advertisement

ಗೋಲಿಬಾರ್‌ ನಡೆಸಿದ ಅಧಿಕಾರಿಗಳ ವಿರುದ್ಧ ಇದುವರೆಗೆ ಕ್ರಮ ಕೈಗೊಂಡಿಲ್ಲ. 24 ಗಂಟೆ ಕಾರ್ಯ ನಿರ್ವಹಿಸುವ ಸಿಸಿ ಕ್ಯಾಮರಾದಲ್ಲಿನ ವೀಡಿಯೊ ತುಣುಕನ್ನು ಈವರೆಗೆ ಯಾಕೆ ಬಿಡುಗಡೆ ಮಾಡಿಲ್ಲ. ಈ ಎಲ್ಲ ನಡೆಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ನ್ಯಾಯಾಂಗ ತನಿಖೆ ನಡೆಸಬೇಕು ಎಂದರು. ಈ ಮಧ್ಯೆ, ಆಯನೂರು ಮಂಜುನಾಥ್‌, ಚರ್ಚೆ ವಿಷಯ ಬೇರೆ, ಬೇರೆ ಆಗುತ್ತಿದೆ. ಕಾನೂನು ಸುವ್ಯವಸ್ಥೆ ವೈಫ‌ಲ್ಯ ಮತ್ತು ಅದರಿಂದ ಅಭಿವೃದ್ಧಿ ಹೇಗೆ ಕುಂಠಿತವಾಗಿದೆ ಎನ್ನುವುದರ ಚರ್ಚೆ ಗೌಣವಾಗಿದೆ ಎಂದು ಗಮನ ಸೆಳೆದರು.

ಪ್ರಕರಣ ಒಂದು; ಮುಖಗಳು ಎರಡು!: ಸದನದಲ್ಲಿ ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳು ಸ್ಪರ್ಧೆಗಿಳಿದಂತೆ ಭಾವಚಿತ್ರಗಳ ಪ್ರದರ್ಶನ ನಡೆಸಿದವು! ಮೊದಲಿಗೆ ಕಾಂಗ್ರೆಸ್‌ ಸದಸ್ಯ ಪ್ರಕಾಶ್‌ ರಾಠೊಡ್‌, ಗಲಭೆ ವೇಳೆ ಪೊಲೀಸರು ಜಾವಲಿನ್‌ ಥ್ರೋ ರೀತಿ ಕಲ್ಲುಗಳನ್ನು ಎಸೆಯುತ್ತಿದ್ದಾರೆ ಎಂದು ಫೋಟೋಗಳನ್ನು ಪ್ರದರ್ಶಿಸಿದರು. ಬೆನ್ನಲ್ಲೇ ಮಹಾಂತೇಶ ಕವಟಗಿಮಠ, “ಇದಕ್ಕೆ ಏನು ಹೇಳುತ್ತೀರಾ?’ ಎಂದು ಮುಖಕ್ಕೆ ಬಟ್ಟೆಕಟ್ಟಿಕೊಂಡು ಕಲ್ಲು ಎಸೆಯುತ್ತಿರುವ ಫೋಟೋ ಮುಂದಿಟ್ಟರು.

ಈ ಮಧ್ಯೆ ಬಿ.ಎಂ.ಫಾರೂಕ್‌ ಕೂಡ ಸಿಡಿ ಮತ್ತು ಕೆಲವು ದಾಖಲೆಗಳನ್ನು ಸಭಾಪತಿಗೆ ಸಲ್ಲಿಸಿದರು. ಒಂದೇ ಪ್ರಕರಣದ ಈ “ಭಿನ್ನ ಮುಖ’ಗಳು ಉಳಿದ ಸದಸ್ಯರನ್ನು ಗೊಂದಲಕ್ಕೀಡು ಮಾಡಿದವು. ಇದರಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದರ ಬಗ್ಗೆಯೇ ತನಿಖೆ ನಡೆಸಬೇಕು. ತಪ್ಪು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಬಸವ ರಾಜ ಹೊರಟ್ಟಿ, ಸಿ.ಎಂ.ಇಬ್ರಾಹಿಂ, ಪುಟ್ಟಣ್ಣ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next