Advertisement

2 ತಿಂಗಳಲ್ಲಿ ಎಕೋ ಥೀಮ್‌ ಪಾರ್ಕ್‌ ಕಾಮಗಾರಿ ಪೂರ್ಣ

04:03 PM Jul 03, 2022 | Team Udayavani |

ಚಿಕ್ಕಬಳ್ಳಾಪುರ: ನಗರಕ್ಕೆ ಹೊಂದಿಕೊಂಡಿರುವ ಕಂದವಾರ ಕೆರೆ ಬಳಿ ಕೆ.ಆರ್‌.ಎಸ್‌.ಬೃಂದಾವನ ಮಾದರಿಯಲ್ಲಿ ನಿರ್ಮಾಣ ಮಾಡುತ್ತಿರುವ ಎಕೋ ಥೀಮ್‌ ಪಾರ್ಕ್‌ನ ಕಾಮಗಾರಿ ಪ್ರಗತಿಯನ್ನು ಜಿಲ್ಲಾಧಿಕಾರಿ ಆರ್‌.ಲತಾ ಪರಿಶೀಲನೆ ಮಾಡಿದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು 8.1 ಕೋಟಿ ರೂ. ವೆಚ್ಚದಲ್ಲಿ ಎಕೋ ಥೀಮ್‌ ಪಾರ್ಕ್‌ನ್ನು ನಿರ್ಮಿಸಲಾಗುತ್ತಿದ್ದು, 2 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸ ಲಾಗುವುದು. ಪರಿಸರ ಸ್ನೇಹಿ ಉದ್ಯಾನವನ ಪ್ರವಾಸಿಗರ ಮನಸೆಳೆಯುವ ಹಲವು ವೈಶಿಷ್ಟ್ಯಗಳನ್ನೊಳಗೊಂಡ ವಿಶಿಷ್ಟ ಮಾದರಿಗಳು ಈ ಪಾರ್ಕ್‌ನಲ್ಲಿ ಮೈತಳೆಯಲಿದ್ದು, ಜಿಲ್ಲೆಗೆ ಅತ್ಯಂತ ಆಕರ್ಷಣೀಯ ಮಾದರಿಯ ಉದ್ಯಾನವನ ಇದಾಗಲಿದೆ ಎಂದರು.

ಈ ಉದ್ಯಾನವನದಲ್ಲಿ ಸರಳ ಜಿಮ್‌, ಪಾರ್ಕಿಂಗ್‌ ವ್ಯವಸ್ಥೆ, ಮಕ್ಕಳ ಆಟದ ಅನುಕೂಲ ಗಳು, ಹಿರಿಯ ನಾಗರಿಕರ ವಿಶ್ರಾಂತಿ ಸ್ಥಳ, ಸಂಗೀತ ಕಾರಂಜಿ, ಬೋಟಿಂಗ್‌, ಕಲಾ ಗ್ರಾಮದ ಮಳಿಗೆಗಳು, ಸ್ಥಳೀಯ ಕಲೆಗಳ ಪ್ರದರ್ಶನ ಕೇಂದ್ರ, ಪಾದಾಚಾರಿ ಸೇತುವೆ, ವನೌಷಧಿ ಸಸ್ಯಗಳ ಪಾರ್ಕ್‌ ಇತ್ಯಾದಿ ವಿಶೇಷ ಆಕರ್ಷಣೆಯೊಂದಿಗೆ ಪ್ರವಾಸಿಗರಿಗೆ ಮುದ ನೀಡಲಿದೆ. ಒಟ್ಟಾರೆ ಜಿಲ್ಲೆಯ ಪ್ರವಾಸೋದ್ಯಮ ವನ್ನು ಅಭಿವೃದ್ಧಿಪಡಿಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ನಂತರ ಜಿಲ್ಲಾಧಿಕಾರಿಗಳು ನೇರವಾಗಿ ಮುನ್ಸಿಪಾಲ್‌ ಬಡಾವಣೆ ಎಸ್‌.ಡಿ.ಎಂ.ಐ (ಐಡಿಯಾ ಸಮಿತಿ) ಬಡಾವಣೆಗಳ ಉದ್ಯಾನವನ ಗಳು ಮತ್ತು ಚೆನ್ನಯ್ಯ ಪಾರ್ಕ್‌ಗೆ ಭೇಟಿ ನೀಡಿ, ಅಲ್ಲಿನ ನಿರ್ವಹಣೆಯನ್ನು ವೀಕ್ಷಿಸಿ ಸ್ಥಳದಲ್ಲೇ ನಿರ್ವಹಣೆಯ ಉನ್ನತೀಕರಣಕ್ಕೆ, ಸ್ವಚ್ಛತೆ ಕಾಪಾಡಲು ಅಗತ್ಯ ಸೂಚನೆಗಳನ್ನ ನಗರಾಭಿವೃದ್ಧಿ ಕೋಶದ ಮತ್ತು ನಗರ ಸಭೆಯ ಅಧಿಕಾರಿಗಳಿಗೆ ನೀಡಿದರು.

ನಗರಸಭೆ ಅಧ್ಯಕ್ಷ ಆನಂದ್‌ ರೆಡ್ಡಿ (ಬಾಬು), ಉಪವಿಭಾಗಾಧಿಕಾರಿ ಡಾ.ಸಂತೋಷ್‌ ಕುಮಾರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ರೇಣುಕಾ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ನಗರಸಭೆ ಪೌರಾಯುಕ್ತ ಮಹಾಂತೇಶ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.