ಬೆಂಗಳೂರು: ಎಸೆಸೆಲ್ಸಿ ಪೂರ್ವಸಿದ್ಧತೆ ಪರೀಕ್ಷೆಯ ಗಣಿತ, ಇಂಗ್ಲಿಷ್ ಪ್ರಶ್ನೆಪತ್ರಿಕೆಗಳ ಬೆನ್ನಲ್ಲೇ ಇನ್ನೂ ಕೆಲವು ವಿಷಯಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಆಘಾತಕಾರಿ ಅಂಶ ಹೊರಬಿದ್ದಿದೆ.
ಶನಿವಾರ ನಡೆಯಲಿರುವ ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯೂ ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ರುವುದು ಬಹಿರಂಗವಾಗಿದೆ. ಮುಂದಿನ ಸೋಮವಾರ ನಡೆಯಲಿ ರುವ ವಿಜ್ಞಾನ ಪತ್ರಿಕೆಯೂ ಸೋರಿಕೆಯಾಗಬಹುದು ಎಂಬ ಆತಂಕ ವಿದ್ಯಾರ್ಥಿಗಳು, ಹೆತ್ತವರದ್ದು.
ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧಿಕಾರಿಗಳ ಸಭೆ ಕರೆದು, ಖಡಕ್ ಸೂಚನೆ ನೀಡಿದರೂ ಪ್ರಯೋಜನವಾಗಿಲ್ಲ. ಮುಂದಿನ ತಿಂಗಳು ನಡೆಯುವ ಎಸೆಸೆಲ್ಸಿ ಪರೀಕ್ಷೆ ಮೇಲೂ ಇದರ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅಗತ್ಯ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಸಚಿವರು ಮತ್ತು ಪ್ರೌಢ ಶಿಕ್ಷಣ ಮಂಡಳಿ, ಇದು ಶಾಲಾ ಮಟ್ಟದ ಪರೀಕ್ಷೆಯಾಗಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಳ್ಳುವ ಅಗತ್ಯ ಇಲ್ಲ. ನಾಲ್ಕು ದಿನಗಳ ಮೊದಲೇ ಪ್ರಶ್ನೆ ಪತ್ರಿಕೆಗಳನ್ನು ಶಾಲೆಗಳಿಗೆ ಕಳುಹಿಸಿರುವುದರಿಂದ ಸೋರಿಕೆ ಆಗಿರುವ ಸಾಧ್ಯತೆ ಇರುತ್ತದೆ. ಆದರೆ ವಾರ್ಷಿಕ ಪರೀಕ್ಷೆ ಸಂದರ್ಭ ಪರೀಕ್ಷೆ ನಡೆಯುವ ದಿನವೇ ಪ್ರಶ್ನೆಪತ್ರಿಕೆಗಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ. ಆದರೆ ವಿದ್ಯಾರ್ಥಿಗಳ ಭವಿಷ್ಯದ ಜತೆ ಹೀಗೆ ಆಟ ಸರಿಯಲ್ಲ ಮತ್ತು ಮಂಡಳಿ, ಸರಕಾರ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿವೆ ಎಂದು ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.