ಹೊಸದಿಲ್ಲಿ : ಚುನಾವಣೆಯ ವೇಳೆ ಮೋದಿ ಬಯೋಪಿಕ್ ಪ್ರದರ್ಶನಕ್ಕೆ ಚುನಾವಣಾ ಆಯೋಗ ಹೇರಿರುವ ನಿಷೇಧವು ನಮೋ ಟಿವಿ ಪ್ರಸಾರಕ್ಕೂಅನ್ವಯವಾಗುತ್ತದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೋರ್ವರು ಹೇಳಿದ್ದಾರೆ.
ಇದನ್ನು ಪುಷ್ಟೀಕರಿಸುವ ಸಲುವಾಗಿ ಅಧಿಕಾರಿಯು ಚುನಾವಣಾ ಆಯೋಗದ ಆದೇಶದಲ್ಲಿರುವ ಒಂದು ಪ್ಯಾರಾಗ್ರಾಫ್ ಉಲ್ಲೇಖೀಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿ ಇರುವಲ್ಲಿ ಯಾವುದೇ ಅಭ್ಯರ್ಥಿಯ ಫೋಟೋ, ಪೋಸ್ಟರ್, ಜಾಹೀರಾತುಗಳು, ಆತನ ಚುನಾವಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಲ್ಲಿ ಆ ಪ್ರದೇಶದಲ್ಲಿನ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರದರ್ಶಿಸುವಂತಿಲ್ಲ ಎಂಬ ನಿರ್ಬಂಧ ಚುನಾವಣಾ ಆಯೋಗದ ಆದೇಶದಲ್ಲಿ ಇರುವುದನ್ನು ಆ ಅದಿಕಾರಿ ತೋರಿಸಿಕೊಟ್ಟಿದ್ದಾರೆ.
ಇದೇ ಕಾರಣಕ್ಕಾಗಿ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಚಿತ್ರವನ್ನು ಚುನಾವಣೆಯ ಸಂದರ್ಭದಲ್ಲಿ ಪ್ರದರ್ಶಿಸುವಂತಿಲ್ಲ ಎಂದು ನಿಷೇಧಿಸಿದೆ ಎಂಬುದಾಗಿ ಅಧಿಕಾರಿ ಹೇಳಿದರು.
ಮೋದಿ ಬಯೋಪಿಕ್ ಚಿತ್ರ ತೆರೆ ಕಾಣುವ ಮುನ್ನಾ ದಿನ ಚುನಾವಣಾ ಆಯೋಗದಿಂದ ನಿಷೇಧಾಜ್ಞೆ ಹೊರಬಿದ್ದಿದೆ. ನಾಳೆ ಗುರುವಾರ ಮೊದಲ ಹಂತದ ಚುನಾವಣೆಗಳು ನಡೆಯಲಿವೆ.
ಸುಪ್ರೀಂ ಕೋರ್ಟ್ ನಿನ್ನೆ ಮಂಗಳವಾರವಷ್ಟೇ ಮೋದಿ ಬಯೋಪಿಕ್ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ಕೋರಿದ ಅರ್ಜಿಯನ್ನು ವಜಾ ಗೊಳಿಸಿ ಚುನಾವಣಾ ಆಯೋಗವೇ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೇಳಿತ್ತು.