“ಪಿಜ್ಜಾ ವಿತ್ ಎ ಪರ್ಪಸ್’ ಎಂಬ ಟ್ಯಾಗ್‌ಲೈನ್‌ನ “ಗ್ರಾನೀಸ್ ಪಿಜ್ಜಾ’ ತಯಾರಿಕೆ ಶುರುವಾಗಿದ್ದು 2003ರಲ್ಲಿ. ಐಟಿಐನಲ್ಲಿ ಫಿನಾನ್ಸ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದ ಪದ್ಮಾ ಶ್ರೀನಿವಾಸನ್, ಗೆಳತಿ ಜಯಲಕ್ಷ್ಮೀ ಶ್ರೀನಿವಾಸನ್ ಜೊತೆ ಸೇರಿ ಪಿಜ್ಜಾ ತಯಾರಿಕೆಗೆ ಇಳಿದರು. ಪದ್ಮಾ ಅವರ ಮಗಳು, ಏರ್‌ವೆàಸ್‌ನಲ್ಲಿ ಉದ್ಯೋಗದಲ್ಲಿದ್ದ ಸರಸಾ ವಾಸುದೇವನ್‌ರ ಗ್ಯಾರೇಜ್ ಜಾಗದಲ್ಲೇ ಪಿಜ್ಜಾ ಮಾಡತೊಡಗಿದರು. ಬೆಂಕಿಯ ಉರಿಯಲ್ಲಿ ಪ್ರತಿ ಸ್ಲೆ„ಸ್ ಬೇಯುವಾಗಲೂ, ಇವರಿಬ್ಬರ ಎದೆಯ ಕನಸಿಗೆ ಕಾವು ಸಿಗುತ್ತಿತ್ತು. ಯಾಕೆ ಗೊತ್ತಾ? ಪಿಜ್ಜಾದಿಂದ ಬಂದ ಹಣದಲ್ಲಿ ಅವರು ಒಂದು ವೃದ್ಧಾಶ್ರಮ ಸ್ಥಾಪಿಸುವ ಯೋಚನೆಯಲ್ಲಿದ್ದರು. “ಪಿಜ್ಜಾದಿಂದ ವೃದ್ಧಾಶ್ರಮವೇ?’ ಎಂದು ಕಣ್ಣರಳಿಸಬೇಡಿ. ಪರ್ವತ ಗಾತ್ರದ ದೊಡ್ಡ ಕನಸನ್ನು, ಸಣ್ಣ ಪಿಜ್ಜಾ ಕೊನೆಗೂ ಕೈಗೂಡಿಸಿಬಿಟ್ಟಿತು. 2007ರಲ್ಲಿ ಹೊಸಕೋಟೆ- ಮಾಲೂರು ರಸ್ತೆಯಲ್ಲಿ “ವಿಶ್ರಾಂತಿ’ ವೃದ್ಧರ ಹಾಗೂ ನಿರ್ಗತಿಕ ಮಕ್ಕಳ ಕೇಂದ್ರದ ಕಟ್ಟಡ ನಿರ್ಮಾಣವಾಯ್ತು. 2010ರಿಂದ ಸುಸಜ್ಜಿತವಾಗಿ ಕಾರ್ಯ ನಿರ್ವಹಿಸುತ್ತಿದೆ.
ಅಜ್ಜಿಯರಲ್ಲ, ಪಿಜ್ಜಾ ಗ್ರಾನೀಸ್…
Advertisement
ಈ ಅಜ್ಜಿಯರ ಕೈಯಡುಗೆಗೆ ಟೆಕ್ಕಿಗಳೂ ಭೇಷ್ ಅಂದರು. ಹಲವಾರು ಎಂಎನ್‌ಸಿ ಕಂಪನಿಗಳಿಂದ ಇವರ ಪಿಜ್ಜಾಕ್ಕೆ ಆರ್ಡರ್ ಸಿಕ್ಕಿತು. ಜನ ಇವರನ್ನು “ಪಿಜ್ಜಾ ಗ್ರಾನೀಸ್’ ಅಂತಲೇ ಗುರುತಿಸಿದರು. “ಗ್ರಾನೀಸ್ ಪಿಜ್ಜಾ’ ಎಂಬುದೇ ಬ್ರ್ಯಾಂಡ್ ನೇಮ್ ಆಯಿತು. ಇವರ ಒಳ್ಳೆಯ ಕೆಲಸವನ್ನು ಗುರುತಿಸಿದ ದಾನಿಗಳು ವೃದ್ಧಾಶ್ರಮ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದರು. ಕಂಪನಿಗಳ ಸಿಎಸ್‌ಆರ್ ಪ್ರಾಜೆಕ್ಟ್ನಿಂದಲೂ ಸಹಾಯ ಸಿಕ್ಕಿತು.
ಪಿಜ್ಜಾ ತಯಾರಿಕೆ ನಿಂತಿಲ್ಲ…
2007ರಲ್ಲಿ ಶುರುವಾದ “ವಿಶ್ರಾಂತಿ’ ಕೇಂದ್ರದಲ್ಲಿ ಈಗ 20 ವೃದ್ಧರಿದ್ದಾರೆ. ಜೊತೆಗೆ 25 ಬಡ ಮಕ್ಕಳು ಉಚಿತ ಊಟ, ವಸತಿ, ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರದ ಯಾವುದೇ ನೆರವಿಲ್ಲದೇ, ದೇಣಿಗೆಯ ಹಣದಿಂದಲೇ ಈ ಟ್ರಸ್ಟ್ ಕಾರ್ಯ ನಿರ್ವಹಿಸುತ್ತದೆ. “ಗ್ರಾನೀಸ್ ಪಿಜ್ಜಾ’ದಿಂದ ಬರುವ ಅಲ್ಪ ಆದಾಯವೂ ಇಲ್ಲಿಗೇ ಸೇರುತ್ತದೆ. ಪಿಜ್ಜಾದ ಬೆಲೆ 150 ರೂಪಾಯಿ. “ಪಿಜ್ಜಾದಿಂದ ಎಷ್ಟು ದೇಣಿಗೆ ಸಂಗ್ರಹವಾಗ್ತಾ ಇದೆ ಅನ್ನೋದು ಮುಖ್ಯವಲ್ಲ. ಹೇಗೆ ಒಂದು ಪಿಜ್ಜಾದ ತುಣುಕು ಸಮಾಜದಲ್ಲಿ ಬದಲಾವಣೆ ತಂದಿದೆ ಅನ್ನೋದು ಮುಖ್ಯ’ ಅಂತಾರೆ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಸರಸಾ ವಾಸುದೇವನ್. ತಾಯಿಯ ಕನಸಿಗೆ ಬೆಂಗಾವಲಾಗಿ ನಿಂತ ಅವರು ದೊಡ್ಡ ಹುದ್ದೆಯ ಕೆಲಸ ತೊರೆದು ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಿಮ್ಮಲ್ಲಿಗೇ ಬಂದು ಪಿಜ್ಜಾ ಮಾಡ್ತಾರೆ…
ಫ್ಲಿಪ್‌ಕಾರ್ಟ್, ಮಿಂತ್ರ, ಐಬಿಎಂ, ಎಚ್‌ಪಿಯಂಥ ಕಂಪನಿಗಳು ಪಿಜ್ಜಾಗೆ ಆರ್ಡರ್ ಸಿಕ್ಕಿವೆ. 50ಕ್ಕೂ ಹೆಚ್ಚು ಪಿಜ್ಜಾಗೆ ಆರ್ಡರ್ ಕೊಟ್ಟರೆ, ಪಿಜ್ಜಾಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ನಿಮ್ಮಲ್ಲಿಗೇ ತೆಗೆದುಕೊಂಡು ಬಂದು ಫ್ರೆಶ್ ಪಿಜ್ಜಾ ಮಾಡಿ ಕೊಡುತ್ತಾರೆ. ಅದಕ್ಕಾಗಿ 8 ಜನರ ತಂಡವಿದೆ. ಪಾಸ್ತಾ, ಅವಲಕ್ಕಿ, ಸ್ಯಾಂಡ್‌ವಿಚ್ ಹಾಗೂ ಇತರ ತಿನಿಸುಗಳನ್ನೂ ಇವರು ಮಾಡುತ್ತಾರೆ. ಅಪಾರ್ಟ್‌ಮೆಂಟ್‌ನ ಸಮಾರಂಭಗಳಿಗೆ, ಮಕ್ಕಳ ಹುಟ್ಟುಹಬ್ಬದ ಆರ್ಡರ್‌ಗಳನ್ನೂ ಸಪ್ಲೆ„ ಮಾಡುತ್ತಾರೆ. 3, 5, 8 ಇಂಚಿನ ಪಿಜ್ಜಾಗಳನ್ನು ತಯಾರಿಸಲು, “ವಿಶ್ರಾಂತಿ’ಯ ತೋಟದ ತರಕಾರಿಗಳನ್ನೇ ಹೆಚ್ಚಾಗಿ ಬಳಸುತ್ತಾರೆ.
Related Articles
“ವಿಶ್ರಾಂತಿ’ಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ನಿರ್ಗತಿಕ ಮಕ್ಕಳು ಆಶ್ರಯ ಪಡೆದಿದ್ದಾರೆ. ಈಗ 14 ಹುಡುಗಿಯರು, 10 ಹುಡುಗರು ಇದ್ದಾರೆ. ಅವರ ಊಟ, ವಸತಿ, ಶಿಕ್ಷಣವನ್ನು ಟ್ರಸ್ಟ್‌ನವರೇ ನೋಡಿಕೊಳ್ಳುತ್ತಾರೆ. ಜೊತೆಗೆ ಟ್ಯೂಷನ್, ಇಂಗ್ಲಿಷ್, ಕಂಪ್ಯೂಟರ್, ಕಥಕ್, ಸಂಗೀತ ತರಗತಿಗಳೂ ನಡೆಯುತ್ತವೆ. ಕೆಲವೊಮ್ಮೆ ಬೀದಿಗೆ ಬಿದ್ದ ಹಸುಳೆಗಳನ್ನು ಯಾರೋ ತಂದು ಇಲ್ಲಿ ಬಿಡುತ್ತಾರೆ. ಅಂಥ 9 ಮಕ್ಕಳನ್ನು ಸೂಕ್ತ ಹೆತ್ತವರನ್ನು ಹುಡುಕಿ ದತ್ತು ನೀಡಲಾಗಿದೆ. ಹೀಗೆ ಪಿಜ್ಜಾದ ಹಣ, ಮಕ್ಕಳ ನಗುವಿಗೆ ಸಂದಾಯವಾಗುತ್ತಿದೆ. ಹೊಸಕೋಟೆ ಸುತ್ತಲಿನ ಹಳ್ಳಿಯವರಿಗೆ ಎಲೆಕ್ಟ್ರಿಕಲ್ ರಿಪೇರಿ, ಕಂಪ್ಯೂಟರ್ ತರಬೇತಿ, ನ್ಪೋಕನ್ ಇಂಗ್ಲಿಷ್ ತರಗತಿಗಳನ್ನೂ ಟ್ರಸ್ಟ್ ವತಿಯಿಂದ ನಡೆಸಲಾಗುತ್ತದೆ.
ಗ್ಯಾರೇಜಿನಲ್ಲಿ ಪಿಜ್ಜಾ ಮಾಡುತ್ತಿದ್ದಾಗ ನಡೆದ ಘಟನೆಯನ್ನು ಸರಸಾ ಅವರು ಹೀಗೆ ನೆನಪಿಸಿಕೊಳ್ಳುತ್ತಾರೆ- ಒಂದು ಭಾನುವಾರ ಮಧ್ಯಾಹ್ನ, “ಪಿಜ್ಜಾ ಗ್ರಾನೀಸ್’ ಇಬ್ಬರೂ ಇರಲಿಲ್ಲ. ಚಿಕ್ಕ ಹುಡುಗನೊಬ್ಬ ಪಿಜ್ಜಾ ಕೊಳ್ಳಲು ಬಂದಿದ್ದ. ಪಿಜ್ಜಾ ತಿಂದು ಹೊರಟವನನ್ನು, ಪಿಜ್ಜಾ ಹೇಗಿತ್ತು ಅಂತ ಕೇಳಿದೆ. ಅವನು, “ಗ್ರಾನೀಸ್ ಇಲ್ವಾ ಇವತ್ತು?’ ಅಂತ ಕೇಳಿದ. ಆಗ ನಾನು, “ಅಜ್ಜಿ ಒಳಗಿದ್ದಾರೆ. ಯಾಕೆ, ನಿಂಗೆ ಪಿಜ್ಜಾ ಹಿಡಿಸಲಿಲ್ವ?’ ಅಂತ ಮತ್ತೆ ಕೇಳಿದಾಗ, ಅವನು ಅನುಮಾನದಿಂದ, “ಗ್ರಾನೀಸ್ ಪಿಜ್ಜಾ ಮಾಡುವ ಸ್ಟೈಲೇ ಬೇರೆ ಇದೆ ಅಲ್ವಾ?’ ಅಂತ ಕೇಳಿಬಿಟ್ಟ! ಅಜ್ಜಿಯಂದಿರ ಕೈ ರುಚಿಯೇ ಹಾಗೆ ಅಲ್ವಾ?
Advertisement
– ಸರಸಾ ವಾಸುದೇವನ್, ವಿಶ್ರಾಂತಿ ಟ್ರಸ್ಟ್ ಎಲ್ಲಿದೆ?
ವಿಶ್ರಾಂತಿ ಕೇಂದ್ರ, ಹೊಸಕೋಟೆ-ಮಾಲೂರು ರಸ್ತೆ, ಜಡಿಗೇನಹಳ್ಳಿ, 7259894471, eatgrannyspizza@gmail.com ಪ್ರಿಯಾಂಕಾ ಎನ್.