Advertisement

ಕೈಗೆಟಕುವ ಕೈಲಾಸ ಮಾನಸ ಸರೋವರಕ್ಕೆ ಸುಲಭ ಮಾರ್ಗ; ಹೊಸ ಮಾರ್ಗ ಹೇಗಿದೆ?

02:32 PM Mar 31, 2022 | Team Udayavani |

ಈಶ್ವರ ಪಾರ್ವತಿ, ಶಿವಗಣಗಳು, ದೇವತೆಗಳ ಆವಾಸಸ್ಥಾನ ಎಂದು ಕರೆಯಲ್ಪಡುವ ಪುರಾಣ ಪ್ರಸಿದ್ಧ ಕೈಲಾಸ ಮಾನಸ ಸರೋವರ ಯಾತ್ರೆ ಇನ್ನು ಸುಲಭ. ಮೊದಲಿನಂತೆ ಪ್ರಯಾಸವಿಲ್ಲದೆ ಮತ್ತು ಅಲ್ಪಾವಧಿಯಲ್ಲಿ ತೆರಳಬಹುದು. ಇಷ್ಟು ದಿನ ಚೀನ ಮತ್ತು ನೇಪಾಲದ ದುರ್ಗಮ, ಕಡಿದಾದ ಮಾರ್ಗಗಳನ್ನು ಅವಲಂಬಿಸಬೇಕಿತ್ತು. ಆದರೆ ಇನ್ನು ಆ ನೆರೆ ರಾಷ್ಟ್ರಗಳ ಮಾರ್ಗಗಳ ಹಂಗು ಯಾತ್ರಿಕರಿಗಿಲ್ಲ. “ನಮ್ಮದೇ ಉತ್ತರಾಖಂಡದ ನೆಲದಿಂದ ಮಾನಸ ಸರೋವರ ಯಾತ್ರೆ ಕೈಗೊಳ್ಳಬಹುದು’ ಎಂಬ ಸಿಹಿಸುದ್ದಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಇತ್ತೀಚೆಗಷ್ಟೇ ಸದನದಲ್ಲಿ ಪ್ರಕಟಿಸಿದ್ದಾರೆ. ಈಗಾಗಲೇ ಉತ್ತರಾಖಂಡದ ಪಿತ್ತೋರ್‌ಘರ್‌ ಮೂಲಕ ಸಾಗಲು ರಸ್ತೆ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಶೇ.85 ಕಾಮಗಾರಿ ಪೂರ್ಣಗೊಂಡಿದೆ. 2023ರ ಅಂತ್ಯಕ್ಕೆ‌ ಲೋಕಾರ್ಪಣೆಗೊಳ್ಳಲಿದೆ…

Advertisement

ಈಗಿನದ್ದು ದುರ್ಗಮ ಹಾದಿ
ಪ್ರಸ್ತುತ ಸಿಕ್ಕಿಂ ಅಥವಾ ನೇಪಾಲದ ಮಾರ್ಗಗಳ ಮೂಲಕ ಕೈಲಾಸ ಮಾನಸ ಸರೋವರಕ್ಕೆ ಪ್ರಯಾಣಿಸಲಾಗುತ್ತಿತ್ತು. ಇದು ಎರಡೂ¾ರು ವಾರಗಳ ಅವಧಿಯವನ್ನು ತೆಗೆದುಕೊಳ್ಳುತ್ತಿತ್ತು. ಮೊದಲ ಮಾರ್ಗ- ಇಂಡೋ-ಚೀನಾ ಗಡಿಯ ಸಿಕ್ಕಿಂನಲ್ಲಿರುವ ನಾಥು ಲಾ ಪಾಸ್‌ ಮೂಲಕ ಹಾದು ಹೋಗಲಿದೆ. 14,450 ಅಡಿ ಎತ್ತರದಲ್ಲಿರುವ ಈ ಹಾದಿಯು ಸಿಕ್ಕಿಂ ಅನ್ನು ಚೀನದ ಟಿಬೆಟ್‌ ಸ್ವಾಯತ್ತ ಪ್ರದೇಶದೊಂದಿಗೆ ಸಂಪರ್ಕಿಸುತ್ತದೆ. ಮತ್ತೊಂದು ಮಾರ್ಗವು ಲಿಪುಲೇಖ್‌ ಪಾಸ್‌ ಮೂಲಕ ಉತ್ತರಾಖಂಡದ ಕುಮಾನ್‌ ಪ್ರದೇಶವನ್ನು ಟಿಬೆಟ್‌ನ ಹಳೆಯ ಪಟ್ಟಣವಾದ ತಕ್ಲಕೋಟ್‌ ನೊಂದಿಗೆ ಸಂಪರ್ಕಿಸಲಿದೆ. 17,500 ಅಡಿ ಎತ್ತರದಲ್ಲಿರುವ ಈ ಹಾದಿಯಲ್ಲಿ ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಇರುವುದಿಲ್ಲ. ಜತೆಗೆ ಹವಾಮಾನ ವೈಪರೀತ್ಯವನ್ನು ಎದುರಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಸಾಗುವ ಯಾತ್ರಿಕರು ದೈಹಿಕರಾಗಿ ಸದೃಢರಾಗಿರಬೇಕು. ವಿವಿಧ ಆರೋಗ್ಯ ತಪಾಸಣೆಯಲ್ಲಿ ಪಾಸ್‌ ಆಗಬೇಕು. ಈ ಎಲ್ಲ ಅರ್ಹತೆ ಹೊಂದಿದ್ದರೆ ಮಾತ್ರ ಯಾತ್ರೆಗೆ ವ್ಯವಸ್ಥೆ ಮಾಡಲಾಗುತ್ತದೆ.

ಹೊಸ ಮಾರ್ಗ ಹೇಗಿರುತ್ತದೆ?
ಉತ್ತರಾಖಂಡದಿಂದ ಕೈಲಾಸ ಮಾನಸ ಸರೋವರಕ್ಕೆ 3 ಹೊಸ ಮಾರ್ಗಗಳ ಮೂಲಕ ಹಾದು ಹೋಗಬಹುದು. ಮೊದಲನೆಯದಾಗಿ ಪಿಥೋರಗಢ್‌ನಿಂದ ತವಾಘಾಟ್‌ಗೆ (107.6 ಕಿ.ಮೀ. ಉದ್ದದ ರಸ್ತೆ) ತೆರಳಬೇಕು. ಅನಂತರ 2ನೇ ಮಾರ್ಗವು ತವಾಘಾಟ್‌ನಿಂದ ಘಾಟಿಯಬ್‌ಗಢ್‌ಗೆ (19.5-ಕಿ.ಮೀ. ಏಕಪಥ ರಸ್ತೆ) ಹೋಗಬೇಕು. ಮೂರನೇಯದ್ದು ಚೀನ ಗಡಿಯಲ್ಲಿರುವ ಘಾಟಿಯಾಬ್‌ಗಢ್‌ನಿಂದ ಲಿಪುಲೇಖ್‌ ಪಾಸ್‌ವರೆಗೆ (80 ಕಿ.ಮೀ.) ತೆರಳಿ ಇಲ್ಲಿಂದ ಕೈಲಾಸ ಮಾನಸ ಸರೋವರವನ್ನು ತಲುಪಬಹುದು.

ಇದೀಗ ಏಕ ಪಥದ ತವಘಾಟ್‌ನಿಂದ ಘಾಟಿಯಬ್‌ಗಢ್‌ ರಸ್ತೆಯನ್ನು ಬಾರ್ಡರ್‌ ರೋಡ್ಸ್‌ ಆರ್ಗನೈಸೇಶನ್‌ ವತಿಯಿಂದ ದ್ವಿಪಥ ರಸ್ತೆಯಾಗಿ ಪರಿವರ್ತಿಸಲಾಗಿದೆ. ಕಳೆದ ಮೇ ತಿಂಗಳಿನಲ್ಲಿ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಈ ಹೊಸ ರಸ್ತೆಯನ್ನು ಉದ್ಘಾಟಿಸಿದ್ದರು. ಈ ಹೊಸ ರಸ್ತೆಯು 5 ದಿನಗಳ ಟ್ರೆಕ್‌ ಅನ್ನು 2 ದಿನಗಳ ರಸ್ತೆ ಪ್ರಯಾಣಕ್ಕೆ ಕಡಿತ ಮಾಡಲಿದೆ. ಹೀಗಾಗಿ ಹೋಗಿ ಬರುವುದು ಎರಡೂ ಸೇರಿ ಒಟ್ಟು 6 ದಿನಗಳ ಪ್ರಯಾಣವನ್ನು ಉಳಿಸುತ್ತದೆ. ಘಾಟಿಯಬ್‌ಗಢ್‌ನಿಂದ ಲಿಪುಲೇಖ್‌ವರೆಗಿನ ರಸ್ತೆ ನಿರ್ಮಾಣ ಹಂತದಲ್ಲಿದ್ದು, 2023ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಹೊಸ ಮಾರ್ಗ ರಕ್ಷಣೆ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಚೀನ, ನೇಪಾಲ ರಸ್ತೆಗಳ ಹಂಗಿಲ್ಲದೆ ಕೈಲಾಸ ಯಾತ್ರೆ
ಹೊಸ ಮಾರ್ಗದಿಂದ ಚೀನ ಹಾಗೂ ನೇಪಾಲ ದೇಶಕ್ಕೆ ತೆರಳದೇ ಕೈಲಾಸ ಮಾನಸ ಸರೋವರ ತಲುಪಬಹುದು. ಕಡಿದಾದ, ದುರ್ಗಮ ರಸ್ತೆಯಲ್ಲಿ ಪ್ರಯಾಸಪಟ್ಟು ಸಂಚರಿಸುವುದು ತಪ್ಪಲಿದೆ. ಈ ಭಾಗದಲ್ಲಿ ಪ್ರತೀ ವರ್ಷ ಅಲ್ಲಲ್ಲಿ ಹವಾಮಾನ ವೈಪರೀತ್ಯ ಸೇರಿದಂತೆ ವಿವಿಧ ಅವಘಡಗಳು ಸಂಭವಿಸುತ್ತಿದ್ದವು. ಜತೆಗ ವಸತಿ ವ್ಯವಸ್ಥೆ ಕೂಡ ಇರುತ್ತಿರಲಿಲ್ಲ. ಅಲ್ಲದೇ ಯಾತ್ರೆ ಸುದೀರ್ಘ‌ ಅವಧಿಯನ್ನು ತೆಗೆದುಕೊಳ್ಳುತ್ತಿತ್ತು. ಹೊಸ ಮಾರ್ಗದಿಂದ 6 ದಿನ ಕಡಿತವಾಗಲಿದ್ದು, ಪ್ರಯಾಣಿಕ ರಿಗೆ ಸಾಗಣೆ ವೆಚ್ಚ ಕೂಡ ತುಸು ಕಡಿಮೆಯಾಗಲಿದೆ. ರಾಜತಾಂತ್ರಿಕ ದೃಷ್ಟಿಯಿಂದಲೂ ಈ ಮಾರ್ಗ ಮಹತ್ವ ಪಡೆದಿದ್ದು, ನಮ್ಮ ರಕ್ಷಣ ಪಡೆಗಳಿಗೂ ನೆರವಾಗಲಿದೆ.

Advertisement

ಎಲ್ಲಿದೆ ಕೈಲಾಸ ಮಾನಸ ಸರೋವರ?
ಮಾನಸ ಸರೋವರ ಭಾರತ-ನೇಪಾಲ ಗಡಿಯಲ್ಲಿರುವ ಕೈಲಾಸ ಪರ್ವತದಲ್ಲಿದೆ. ಭಾರತದ ವ್ಯಾಪ್ತಿಗೆ ಒಳಪಟ್ಟಿರುವ ಕೈಲಾಸ ಮಾನಸ ಸರೋವರದ 6,836 ಚದರ ಕಿ.ಮೀ. ಭಾಗವು ಪೂರ್ವದಲ್ಲಿ ನೇಪಾಲ ಮತ್ತು ಉತ್ತರದಲ್ಲಿ ಚೀನದ ಗಡಿಯನ್ನು ಹೊಂದಿದೆ. ಸಮುದ್ರಮಟ್ಟದಿಂದ 15 ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಭಾರತೀಯ ಪುರಾತತ್ವ ಇಲಾಖೆ ಕಳೆದ ಎಪ್ರಿಲ್‌ನಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಕೈಲಾಸ ಮಾನಸ ಸರೋವರವನ್ನು ಸೇರಿಸುವ ಪ್ರಸ್ತಾವನೆಯನ್ನು ಯುನೆಸ್ಕೋಗೆ ಕಳುಹಿಸಿದೆ.

ಜೀವಿತದಲ್ಲಿ ಒಮ್ಮೆ ನೋಡಲೇಬೇಕಾದ ತಾಣ…
ವಿಶ್ವದಾದ್ಯಂತ ಪ್ರತೀ ವರ್ಷ ಲಕ್ಷಾಂತರ ಭಕ್ತರು ಹಾಗೂ ಪ್ರವಾಸಿಗಳು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡು ಇಲ್ಲಿನ ಪುಣ್ಯ ಕ್ಷೇತ್ರಗಳನ್ನು ಕಣ್ತುಂಬಿಕೊಂಡು, ಈ ಭಾಗದಲ್ಲಿ ಪ್ರಾಕೃತಿಕ ರಮಣೀಯ ದೃಶ್ಯಗಳನ್ನು ವೀಕ್ಷಿಸಿ ಉಲ್ಲಸಿತರಾಗುತ್ತಾರೆ. ಜೈನರು, ಬುದ್ಧರಿಗೂ ಪವಿತ್ರ ಧಾರ್ಮಿಕ ಕ್ಷೇತ್ರದ್ದು, ದೇವರು ವಾಸಿಸುವ ಹಾಗೂ ಧ್ಯಾನ ಮಾಡುವ ಪ್ರಶಸ್ತ ಸ್ಥಳ ಎಂಬ ಪ್ರತೀತಿ ಇದೆ. ಮಾನಸ ಸರೋವರ ಶುದ್ಧ ನೀರಿನಿಂದ ಕೂಡಿದ್ದು, ಬ್ರಹ್ಮನು ಪ್ರಥಮ ಬಾರಿಗೆ ಸೃಷ್ಟಿಸಿದ ಸರೋವರ ಇದಾಗಿದ್ದು, ಇದಕ್ಕಾಗಿ ಮಾನಸ ಸರೋವರ ಎಂಬ ಹೆಸರು ಬಂದಿದೆ
ಎಂದು ಹೇಳಲಾಗುತ್ತಿದೆ. ಬ್ರಹ್ಮ ಮುಹೂರ್ತದಲ್ಲಿ ಇಲ್ಲಿ ಪುಣ್ಯ ಸ್ನಾನ ಮಾಡಿದರೆ ಪಾಪಗಳು ಕಳೆದು ಶುಭವಾಗುತ್ತದೆ ಎಂಬ ನಂಬಿಕೆ ಇದೆ.

ಇದು ಮಾನಸ ಸರೋವರ…
ಎಲ್ಲಿದೆ?:
ಭಾರತ-ನೇಪಾಲ
ಗಡಿಯ ಕೈಲಾಸ ಪರ್ವತ (ಪೂರ್ವದಲ್ಲಿ ನೇಪಾಲ ಗಡಿ, ಉತ್ತರದಲ್ಲಿ
ಚೀನ ಗಡಿ )

ದೂರ: ಟಿಬೆಟ್‌ ಲ್ಹಾಸಾ ದಿಂದ 2,000 ಕಿ.ಮೀ.

ಯಾತ್ರಾ ಸಮಯ
ಜೂನ್‌ನಿಂದ ಸೆಪ್ಟಂಬರ್‌ವರೆಗೆ

ಎತ್ತರ: ಸಮುದ್ರ ಮಟ್ಟದಿಂದ 14,950 ಮೀ. ಎತ್ತರದಲ್ಲಿದೆ

ಯಾತ್ರಾ ಅವಧಿ
28 ದಿನಗಳು

ಇತರ ಹೆಸರುಗಳು
ಮೇರು,ಸುಮೇರು, ಹೇಮಾದ್ರಿ, ದೇವಪರ್ವತ, ರಜತಾದ್ರಿ, ರತ್ನ ಸ್ತಂಭ, ಗಾನಪರ್ವತ

Advertisement

Udayavani is now on Telegram. Click here to join our channel and stay updated with the latest news.

Next