ಹೊಸಪೇಟೆ: ಭಾಷಾಂತರದಿಂದ ಅನ್ಯಭಾಷೆಯ ಲಯವನ್ನು ಕನ್ನಡದಲ್ಲಿ ಅಳವಡಿಸಿಕೊಳ್ಳಲು ಸುಲಭವಾಗಲಿದೆ ಎಂದು ಕನ್ನಡ ಸಾಹಿತ್ಯದ ಖ್ಯಾತ ವಿಮರ್ಶಕ ಎಸ್.ಆರ್. ವಿಜಯಶಂಕರ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ವೆಬಿನಾರ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಹಲವರ ಸಹಯೋಗದೊಡನೆ ಭಾಷಾಂತರ ರೂಪಿಸಿದಾಗ ಖಚಿತವಾದ ಭಾಷಿಕ ಲಯವೊಂದು ಸಿಗಲಿದೆ. ಅನ್ಯ ಭಾಷೆ ವಿಚಾರಗಳ ಲೋಕಕ್ಕೆ ಪ್ರವೇಶಿಸಲು ಭಾಷಾಂತರಗಳು ಕಿಟಕಿಗಳಂತೆ ಸಹಕರಿಸುತ್ತವೆ. ಅವುಗಳನ್ನು ಇನ್ನಷ್ಟು ತಿಳಿದುಕೊಳ್ಳಬೇಕಾದರೆ ಬಾಗಿಲುಗಳನ್ನು ತೆರೆದು ಹೊರ ಹೊಗಬೇಕಾಗುತ್ತದೆ. ಹೊಸದಾಗಿ ಭಾಷಾಂತರ ಆರಂಭ ಮಾಡುವವರು ಮೂಲಕೃತಿಯ ಓದಿನ ಸಮಗ್ರ ತಿಳಿವಳಿಕೆಯಿಂದ
ಮುಂದಾಗಬೇಕು ಎಂದರು.
ಕೇಂದ್ರದ ನಿರ್ದೇಶಕ ಡಾ. ಮೋಹನ ಕುಂಟಾರ್ ಮಾತನಾಡಿ, ಯಾವುದೇ ಅನುವಾದ ಕೃತಿಯೊಂದು ರೂಪುಗೊಳ್ಳಬೇಕಾದರೆ ಅನುವಾದಕರ ವೈಯಕ್ತಿಕ ಹಿತಾಸಕ್ತಿಗಳು ಮಾತ್ರ ಕಾರಣವಾಗಿರುವುದಿಲ್ಲ. ಅದನ್ನು ಮೀರಿ ಸಮಕಾಲೀನ ಸಮಾಜ, ರಾಜಕೀಯ, ಸಾಹಿತ್ಯ ಕ್ಷೇತ್ರದ ಆಶೋತ್ತರಗಳು ಕೂಡ ಪ್ರಮುಖ ಪಾತ್ರವಹಿಸುತ್ತವೆ. ಈ ಆಶೋತ್ತರಗಳಿಗನುಗುಣುವಾಗಿಯೇ ಅನುವಾದಗಳು ಯಾವುದೇ ಕಾಲಘಟ್ಟಕ್ಕನುಗುಣವಾಗಿ ವಿಭಿನ್ನವಾಗಿ ರೂಪುಗೊಳ್ಳುತ್ತವೆ. ಕಾಲಕ್ಕೆ ತಕ್ಕಂತೆ ಅನುವಾದಕರ ಆಸಕ್ತಿ ಹಾಗೂ ಇತರೆ ಒತ್ತಡಗಳಿಂದ ಭಾಷಾಂತರ ಪ್ರವೃತ್ತಿಗಳು ರೂಪುಗೊಳ್ಳುತ್ತವೆ ಎಂದು ಹೇಳಿದರು.
ಬಳಿಕ ನಡೆದ ಸಂವಾದದಲ್ಲಿ ಮುಂಬೈ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ| ಜಿ.ಎನ್. ಉಪಾಧ್ಯ, ಡಾ| ಯರ್ರಿಸ್ವಾಮಿ ಇತರರು ಭಾಗವಹಿಸಿದ್ದರು. ಕುಲಸಚಿವ ಡಾ| ಎ. ಸುಬ್ಬಣ್ಣ ರೈ ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಾಯಕ ನಿರ್ದೇಶಕ ಡಿ. ಪ್ರಭಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸುಮಾರು 184 ಜನ ಆಸಕ್ತರು ನೋಂದಣಿ ಮಾಡಿಕೊಂಡು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು.