Advertisement
ಟರ್ಮ್ ಇನ್ಷೊರೆನ್ಸ್ ಎನ್ನುವುದು, ವಿಮಾ ಯೋಜನೆಗಳ ಪೈಕಿ ಅತ್ಯಂತ ಮಹತ್ವದ ಯೋಜನೆಗಳಲ್ಲೊಂದು. ವ್ಯಕ್ತಿಯೊಬ್ಬನ ಆಕಸ್ಮಿಕ ಮರಣದ ಕಾಲಕ್ಕೆ ಆತನ ಕುಟುಂಬಕ್ಕೆ ಆರ್ಥಿಕವಾಗಿ ಸಾಕಷ್ಟು ದೊಡ್ಡಮಟ್ಟಿಗಿನ ಲಾಭವಾಗುವ ಈ ಯೋಜನೆಯಲ್ಲಿ ಪ್ರೀಮಿಯಂ ಬಹಳ ಕಡಿಮೆ. ವಿಮೆಯ ಪರಿಕಲ್ಪನೆಯೆನ್ನುವುದು ಶುರುವಾದ ಕಾಲಕ್ಕೆ ಆರಂಭವಾದ ಆರಂಭಿಕ ವಿಮಾ ಯೋಜನೆಗಳ ಪೈಕಿಗಳಲ್ಲೊಂದು, ಟರ್ಮ್ ಇನ್ಷೊರೆನ್ಸ್. ವಿಮೆ ರಕ್ಷೆ ಪಡೆದುಕೊಂಡ ಕಾಲಾವಧಿಯಲ್ಲಿ ವಿಮಾದಾರರ ಮೃತ್ಯು ಸಂಭವಿಸದಿದ್ದರೆ ಕಟ್ಟಿದ ಪ್ರೀಮಿಯಂ ಹಣ ಮರಳಿಬಾರದೆನ್ನುವ ಕಾರಣಕ್ಕೆ ತುಂಬ ಜನ ಟರ್ಮ್ ಇನ್ಷೊರೆನ್ಸ್ ಖರೀದಿಸಲು ಹಿಂದೇಟು ಹಾಕುತ್ತಾರೆ.
Related Articles
Advertisement
ಹಣದ ಉಳಿತಾಯದ ತರ್ಕವನ್ನು ಗಣನೆಗೆ ತೆಗೆದುಕೊಂಡರೆ ಅಲ್ಪಾವಧಿಯ ವಿಮೆ ಖರೀದಿ ಸರಿಯೆನ್ನಿಸುತ್ತದೆ. ಆದರೆ, ರಕ್ಷಣೆಯ ತರ್ಕದಲ್ಲಿ ಇದು ತಪ್ಪು ಲೆಕ್ಕಾಚಾರ. ಟರ್ಮ್ ಇನ್ಷೊರೆನ್ಸ್‌ನ ಕಾಲವೆನ್ನುವುದು ಸಾಧ್ಯವಾದಷ್ಟೂ ದೀರ್ಘಾವಧಿಗಿದ್ದರೆ ಚೆನ್ನ. ಒಟ್ಟಾರೆಯಾಗಿ, ಸಾಧ್ಯವಾದಷ್ಟು ಚಿಕ್ಕವಯಸ್ಸಿನಲ್ಲಿಯೇ ದೀರ್ಘಾವಧಿಯ ಟರ್ಮ್ ಇನ್ಷೊರೆನ್ಸ್ ಯೋಜನೆಯನ್ನು ಖರೀದಿಸಿದರೆ ಚಿಕ್ಕ ಪ್ರೀಮಿಯಮ್ಮಿಗೆ ಸಾಕಷ್ಟು ದೊಡ್ಡ ವಿಮಾಮೊತ್ತದ ಲಾಭ ಪಡೆದುಕೊಳ್ಳಬಹುದು ಎನ್ನುವುದು ವಿಮಾಗಣಿತದ ಸರಳ ಸತ್ಯ.
ಯಾವುದು ಒಳ್ಳೇದು?: ಕೊನೆಯದಾಗಿ, ಯಾವ ಕಂಪನಿಯ ಟರ್ಮ್ ಇನ್ಷೊರೆನ್ಸ್ ಒಳ್ಳೆಯದು ಎಂಬ ಆಯ್ಕೆಯ ಪ್ರಶ್ನೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ವಿಮಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ಕಂಪನಿಯ ಟರ್ಮ್ ಇನ್ಷೊರೆನ್ಸ್ ಪ್ರೀಮಿಯಮ್ಮಿಗೂ, ಮತ್ತೊಂದು ಕಂಪನಿಯ ಟರ್ಮ್ ಇನ್ಷೊರೆನ್ಸ್ ಪ್ರೀಮಿಯಮ್ಮಿಗೂ ಸಾಕಷ್ಟು ವ್ಯತ್ಯಾಸಗಳಿರಬಹುದು. ಪ್ರೀಮಿಯಂ ಅತ್ಯಂತ ಕಡಿಮೆಯೆನ್ನುವ ಕಾರಣಕ್ಕೆ, ಪಾಲಿಸಿಯ ಖರೀದಿಯ ಮುನ್ನ ವೈದ್ಯಕೀಯ ತಪಾಸಣೆಗಳಿಲ್ಲವೆನ್ನುವ ಕಾರಣಕ್ಕೆ, ವಿಮಾ ಯೋಜನೆಯನ್ನು ಆರಿಸಿಕೊಳ್ಳುವುದು ಅಪಾಯಕಾರಿಯಾಗಬಲ್ಲದು.
ದೊಡ್ಡ ಮೊತ್ತದ ವಿಮಾ ಯೋಜನೆಯೊಂದನ್ನು ಖರೀದಿಸುವಾಗ ವಿಮೆಯನ್ನು ಮಾರುತ್ತಿರುವ ಕಂಪನಿಯ ಆರ್ಥಿಕ ಸ್ಥಿತಿಗತಿ, ದಾವೆಯ ವಾರ್ಷಿಕ ಪ್ರತಿಶತದಂಥ ಅಂಶಗಳನ್ನು ತಿಳಿದುಕೊಂಡಿರಲೇಬೇಕು. ಆರ್ಥಿಕವಾಗಿ ಸದೃಢವಾಗಿರುವ ವಿಮಾ ಕಂಪನಿಯ ಪಾಲಿಸಿಯ ಪ್ರೀಮಿಯಂ ಕೊಂಚ ಹೆಚ್ಚೆನ್ನಿಸಿದರೂ ಅದು ಸುರಕ್ಷಿತ ಹೂಡಿಕೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ವಿಮಾ ಯೋಜನೆಯನ್ನು ಖರೀದಿಸಿ. ನೀವು ಇಲ್ಲದ ಕಾಲಕ್ಕೂ ನಿಮ್ಮ ಕುಟುಂಬವನ್ನು ಸುಖವಾಗಿಡುವ ಸಂತೃಪ್ತಿ ನಿಮಗಿರಲಿ.
ಮುಚ್ಚಿಡದೆ ನಮೂದಿಸಿ!: ಈ ಎಲ್ಲ ಕೂಡು ಕಳೆಯುವಿಕೆಗಳ ನಂತರ ಟರ್ಮ್ ಇನ್ಷೊರೆನ್ಸ್ ಖರೀದಿಸುವಾಗ ಗಮನದಲ್ಲಿರಿಸಬೇಕಾದ ಬಹುಮುಖ್ಯ ಅಂಶವೆಂದರೆ, ಪಾಲಿಸಿ ದಾಖಲೆಗಳಲ್ಲಿ ದೇಹಾರೋಗ್ಯದ ಕುರಿತಾದ ಮಾಹಿತಿಯ ಕುರಿತಾಗಿದ್ದು. ಟರ್ಮ್ ವಿಮೆಯೆನ್ನುವುದು ಶುದ್ಧ ವಿಮಾ ಯೋಜನೆಯಾಗಿರುವುದರಿಂದ ಪ್ರೀಮಿಯಂ ನಿರ್ಧಾರಕ್ಕೆ ಪಾಲಿಸಿದಾರರ ಆರೋಗ್ಯದ ಸ್ಥಿತಿಗತಿ ಬಹುಮುಖ್ಯ ಅಂಶ.
ಆ ಕಾರಣಕ್ಕೆ ಇಂಥದ್ದೊಂದು ಯೋಜನೆಯ ಖರೀದಿಗೂ ಮುನ್ನ ವಿಮಾ ಕಂಪನಿಗಳು ಗ್ರಾಹಕರ ಆರೋಗ್ಯದ ಮಾಹಿತಿಯನ್ನು ಪಡೆದುಕೊಳ್ಳುತ್ತವೆ. ಅಂಥ ಸಂದರ್ಭದಲ್ಲಿ, ಆರೋಗ್ಯ ಸಂಬಂಧಿ ಏನೇ ಸಮಸ್ಯೆಗಳಿದ್ದರೂ ಅದನ್ನು ವಿಮೆಯ ದಾಖಲೆಗಳಲ್ಲಿ ನಮೂದಿಸುವುದು ಒಳಿತು. ಆರೋಗ್ಯದ ವಿವರಣೆಗಳ ನಮೂದಿಸುವಿಕೆ ಸ್ಪಷ್ಟವಾಗಿದ್ದರೆ ಮರಣದಾವೆ ಸುಲಭ. ಯಾವುದೋ ಗಂಭೀರ ಕಾಯಿಲೆಯೊಂದನ್ನು ಕಂಪನಿಯಿಂದ ಮುಚ್ಚಿಟ್ಟು ಪಡೆದುಕೊಂಡ ಪಾಲಿಸಿಯಡಿ, ಮರಣ ದಾವೆಯನ್ನು ತಿರಸ್ಕರಿಸುವ ಎಲ್ಲ ಅಧಿಕಾರವೂ ಕಂಪನಿಗಿದೆ ಎನ್ನುವುದನ್ನು ಪಾಲಿಸಿದಾರರು ನೆನಪಿಟ್ಟುಕೊಂಡರೆ ಒಳ್ಳೆಯದು.
* ಗುರುರಾಜ ಕೊಡ್ಕಣಿ, ಯಲ್ಲಾಪುರ